ಗಣವೇಷಧಾರಿಗಳ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ

ಮಸ್ಕಿ : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ವಿಜಯದಶಮಿ ಉತ್ಸವದ ಪ್ರಯುಕ್ತ ನಡೆದ ನೂರಾರು ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ ಮನ ಸೆಳೆಯಿತು. ಸ್ವಯಂ ಸೇವಕರು ಅತ್ಯಂತ ಶಿಸ್ತು ಮತ್ತು ಶ್ರದ್ಧೆಯಿಂದ ಹೆಜ್ಜೆ ಹಾಕಿದರು.

ಸಂಜೆ ಇಲ್ಲಿನ ತೇರಿನ ಬಜಾರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಿಂದ ಆರಂಭಗೊಂಡ ಪಥಸಂಚಲನ ಸಂತೆ ಬಜಾರ, ಆಗಿಸಿ, ಅಶೋಕ ವೃತ್ತ, ಚೆನ್ನಮ್ಮ ವೃತ್ತ, ಶಾಸಕರ ಕಾರ್ಯಾಲಯ, ಕಲೀಲಾ ವೃತ್ತ, ದೈವದ ಕಟ್ಟೆ, ಮೂಲಕ ಹಾಯ್ದು ಪುನಃ ತೇರಿನ ಮನೆ ತಲುಪಿತು.

ಕಂದು ಬಣ್ಣದ ಪ್ಯಾಂಟ್‌, ಬಿಳಿ ಅಂಗಿ, ಕರಿ ಬಣ್ಣದ ಟೋಪಿ ಧರಿಸಿ ಕೈಯಲ್ಲೊಂದು ದಂಡ ಹಿಡಿದಿದ್ದ ನೂರಾರು ಸ್ವಯಂಸೇವಕರು ಘೋಷ್‌ ವಾದ್ಯದೊಂದಿಗೆ ಕವಾಯತಿನಲ್ಲಿ ಸಾಗಿಬಂದರು. ಸಂಚಲನದ ಉದ್ದಕ್ಕೂ ಸ್ವಯಂಸೇವಕರು ತೋರಿದ ಶಿಸ್ತು ಹಾಗೂ ಹೆಜ್ಜೆ ಹಾಕುತ್ತಿದ್ದ ಗಾಂಭೀರ್ಯ ನೋಡುಗರ ಮನ ಸೆಳೆಯಿತು. ಘೋಷ್‌ ವಾದ್ಯ ಮೇಳ ಸಂಚಲನದ ಮೆರಗು ಹೆಚ್ಚಿಸಿತ್ತು. ಶಂಖನಾದ, ಕೊಳಲು ವಾದನದೊಂದಿಗೆ ಡ್ರಮ್‌ ಬಾರಿಸುತ್ತಾ ಸಾಗುತ್ತಿದ್ದ ಸ್ವಯಂ ಸೇವಕರು ಹೊಸ ಕಳೆ ತಂದು ಕೊಟ್ಟರು. ರಸ್ತೆಗಳ ಅಕ್ಕ-ಪಕ್ಕ, ತಿರುವು, ವೃತ್ತ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಮಹಿಳೆಯರು ಪುಷ್ಪ ಸಮರ್ಪಿಸಿ ಭಾರತ್‌ ಮಾತಾಕೀ ಜೈ ಘೋಷಣೆ ಮೊಳಗಿಸಿದರು.

ಸಂಚಲನದ ಮಾರ್ಗಗಳಲ್ಲಿ ತಳಿರು, ತೋರಣ, ರಂಗೋಲಿ ಚಿತ್ತಾರಗಳಿಂದ ಅಲಂಕಾರಗೊಂಡಿದ್ದವು. ಅಲ್ಲಲ್ಲಿ ಆಳೆತ್ತರದ ಕೇಸರಿ ಧ್ವಜ, ಕಮಾನು, ಬಂಟಿಂಗ್ಸ್‌ ಹಾಕಲಾಗಿತ್ತು. ಕೆಲವು ಮನೆಗಳ ಎದುರು ಭಾರತ ಮಾತೆಯ ಭಾವಚಿತ್ರ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿಗಳ ಹಾಗೂ ಮಹಾಪುರುಷರ ಭಾವಚಿತ್ರಗಳು ರಾರಾಜಿಸಿದವು. ಪ್ರಮುಖ ಬೀದಿಗಳು ಸಂಪೂರ್ಣ ಕೇಸರಿಮಯವಾಗಿದ್ದವು. ಸ್ವಯಂ ಸೇವಕನೊಬ್ಬ ಹಿಡಿದು ಸಾಗಿದ ಭಗವಾಧ್ವಜಕ್ಕೆ ದಾರಿಯುದ್ದಕ್ಕೂ ಪ್ರತಿ ಮನೆ ಎದುರು ಮಹಿಳೆಯರು ಆರತಿ ಬೆಳಗಿದರು. ಭಗವಾಧ್ವಜದ ಮೇಲೆ ಪುಷ್ಪವೃಷ್ಟಿ ಸುರಿಸಿ ನಮನ ಸಲ್ಲಿಸಿದರು.

 ಭಾವಪರವಶರಾದ ಜನತೆಯ ಜೈಕಾರ, ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪಥ ಸಂಚಲನದ ಮಾರ್ಗದುದ್ದಕ್ಕೂ ಯುವಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರ ಘೋಷಣೆ ಮೊಳಗಿಸಿದರು. ಭಾರತ್‌ ಮಾತಾಕಿ ಜೈ, ಸನಾತನ ಹಿಂದೂ ಧರ್ಮಕೀ ಜೈ, ಜೈ ಜೈ ಮಾತಾ ಭಾರತ ಮಾತಾ ಇನ್ನೂ ಮುಂತಾದ ಘೋಷಣೆಗಳು ಮುಗಿಲು ಮುಟ್ಟಿದ್ದವು. ಚಿಣ್ಣರು ಮಹಾತ್ಮರು, ಸತ್ಪುರಷರ ವೇಷ ಧರಿಸಿ ಗಮನ ಸೆಳೆದರು.

ಪಥಸಂಚಲನದ ಮಾರ್ಗದುದ್ದಕ್ಕೂ ಭಾರಿ ಪೊಲೀಸ್‌ ಭದ್ರತೆ ಹಾಕಲಾಗಿತ್ತು. ಗಣವೇಷಧಾರಿಗಳ ಮೆರವಣಿಗೆಯ ಮೇಲೆ ಪೊಲೀಸ್‌ ಇಲಾಖೆ ಕಣ್ಗಾವಲು ಇರಿಸಿದ್ದು.ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ತಾರಾ ಬಾಯಿ, ಸಿದ್ದರಾಮ ಬಿದ್ರಾಣಿ, ವೆಂಕಟೇಶ್, ಛತ್ರಪ್ಪ, ಭೀಮ ದಾಸ್, ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಮಸ್ಕಿ ಪಟ್ಟಣ ಹಾಗೂ ವಿವಿಧೆಡೆಯ ನೂರಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*