ರಾಯಚೂರು ವಿವಿ ವಿದ್ಯಾರ್ಥಿಗಳ ಸಮಸ್ಯೆ ಈಡೇರಿಸುವಂತೆ ಕುಲಪತಿಗಳಿಗೆ ಮನವಿ
ರಾಯಚೂರು : ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಯಚೂರು ವಿ.ವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆಯಲ್ಲಿ ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡಗಿ ಮಾತನಾಡಿ ವಿಶ್ವ ವಿದ್ಯಾಲಯ ಕಾಲೇಜು ಆರಂಭವಾಗಿ 2-3 ವರ್ಷಗಳು ಕಳೆದು ಇನ್ನೇನು ಮೊದಲನೇ ಬ್ಯಾಚ್ ಹೊರ ಹೋಗುವ ಸಮಯ ಬಂದಿದ್ದರೂ ಕೂಡ ರಾಯಚೂರು ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನಮ್ಮ ವಿಶ್ವವಿದ್ಯಾಲಯಕ್ಕೆ ಅಗತ್ಯ ಮತ್ತು ಪೂರಕವಾದ ಅನುದಾನವನ್ನು ನೀಡದೆ ಸರ್ಕಾರವು ಶೈಕ್ಷಣಿಕ ಮಟ್ಟವನ್ನು ಕುಂಠಿತಗೊಳಿಸಲು ನೇರ ಕಾರಣವಾಗಿದೆ. ಹಾಗೆಯೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಗೆಹರಿಸಬಹುದಾದ ವಿವಿಧ ಬೇಡಿಕೆಗಳನ್ನು ಆಡಳಿತ ಮಂಡಳಿಯವರು ಈಡೇರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅನುವು ಮಾಡಿ ಕೊಡಬೇಕು,
ಮತ್ತು ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಾಯಂ ಉಪನ್ಯಾಸಕರನ್ನು ನೇಮಿಸಲು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕು,ಕೂಡಲೇ ಬಾಕಿ ಉಳಿದಿರುವ ಎಲ್ಲಾ ಸೆಮಿಸ್ಟರ್ಗಳ ಫಲಿತಾಂಶ ಬಿಡುಗಡೆ ಮಾಡಿ ಅಂಕಪಟ್ಟಿಯನ್ನು ಮುದ್ರಿಸಿ ವಿತರಿಸಬೇಕು,ಗ್ರಂಥಾಲಯದ ಅವಧಿಯನ್ನು ಹೆಚ್ಚಿಸಿ ಎಲ್ಲಾ ವಿಭಾಗದ ಪುಸ್ತಕಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು, ವಿಶ್ವವಿದ್ಯಾಲಯದಲ್ಲಿ ಎಲ್ಲಾ ಸರ್ಕಾರಿ ಬಸ್ಸುಗಳುನಿಲುಗಡೆಯಾಗಬೇಕು,ವಿಶ್ವವಿದ್ಯಾಲಯದಲ್ಲಿನ ಎಲ್ಲಾ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಮತ್ತು ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು, ಎಸ್ಸಿ, ಎಸ್ಟಿ ,ಒಬಿಸಿ, ಅಲ್ಪಸಂಖ್ಯಾತರ ನಾಲ್ಕು ಇಲಾಖೆಯ ವಸತಿ ನಿಲಯಗಳು ಮಂಜೂರು ಮಾಡಲು ಸರ್ಕಾರಕ್ಕೆ ಪತ್ರ ಬರೆಯಬೇಕು, ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳ ತಂತ್ರಾಂಶ ನ್ಯೂನ್ಯತೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬೇಕು,
ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಭದ್ರತೆಯನ್ನು ನೀಡಲು ಮತ್ತು ಮುಖ್ಯದ್ವಾರಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿ ಖಾಯಂ ಕಾವಲುಗಾರರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಕುಲಪತಿಗಳಾದ ಹರೀಶ್ ರಾಮಸ್ವಾಮಿ ಅವರು ಮನವಿ ಪತ್ರವನ್ನು ಸ್ವೀಕರಿಸಿ ವಿದ್ಯಾರ್ಥಿಗಳ ಕಮಿಟಿ ರಚನೆ ಮಾಡಿ ಸಭೆ ಏರ್ಪಡಿಸಿ ಕೊಡಲೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲ ಸಚಿವರಾದ ಪ್ರೊಫೆಸರ್ ಎಂ ವಿಶ್ವನಾಥ್ , ಮೌಲ್ಯಮಾಪನ ಕುಲ ಸಚಿವರಾದ ಪ್ರೊಫೆಸರ್ ಯರಿಸ್ವಾಮಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳು ಜಿಎಸ್ ಬಿರಾದಾರ್, ಹಾಗೂ ವಿದ್ಯಾರ್ಥಿ ಮುಖಂಡರಾದ ಮೌನೇಶ ತುಗ್ಗಲದಿನ್ನಿ, ಮಧುಸೂದನ, ಸಂತೋಷ್ ಪಾಟೀಲ್, ಅಂಬರೀಶ, ಚೆನ್ನಯ್ಯಸ್ವಾಮಿ, ಟೈಮದ್ ಪಾಷಾ, ಸುರೇಶ,ಹುಸೇನಪ್ಪ. ಮಾರ್ತಾಂಡ,ಮೌನೇಶ್,ನಿತಿನ್,ಚಂದ್ರು,ಉಮೇಶ್,ಶರಣು,ಪ್ರಶಾಂತ್ ಮುಂತಾದ ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ