ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ


-ಸಿ.ಮ.ಗುರುಬಸವರಾಜ

 ಹವ್ಯಾಸಿ ಬರಹಗಾರರು

 “ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು” ಎಂದು ತೆಲುಗಿನ ಮಹಾಕವಿ ವೆಂಕಟ ಅಪ್ಪರಾವ್ ಗರ್ಜಡ ಹೇಳಿದರೆ, “ ದೇಶವೆಂದರೆ ಮನುಷ್ಯರು” ಎಂದು ಸೋವಿಯತ್ ರಷ್ಯಾ ಸಂವಿಧಾನವು ಭಾವಿಸಿದ್ದಾರೆ. ಹೀಗೆ ಭಾರತ ಎಂದರೆ ಬರೀ ದೇಶವಲ್ಲ. ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ಸಮೃದ್ದವಾದ ದೇಶ. ನಮ್ಮ ದೇಶದ ಇತಿಹಾಸವನ್ನು ನೋಡಿದಾಗ ಪ್ರಾಚೀನ ಕಾಲದಿಂದಲೂ ಹಲವಾರು ದೇಶಗಳ ಜನರು ಬಂದು ಬಾಳಿದ್ದಾರೆ, ಆಳಿದ್ದಾರೆ, ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಆದರೂ ಇಂದಿಗೂ ಸಮೃದ್ದವಾದ ದೇಶವಾಗಿ ಅಳಿಯದೇ ಉಳಿದಿದೆ. ಇಲ್ಲಿನ ನದಿಗಳು, ಫಲವತ್ತಾದ ಭೂಮಿಗೆ ಆಕರ್ಷಿತರಾಗಿ ಹೊರಗಿನಿಂದ ಕೃಷಿಕರು ಬದುಕು ಕಟ್ಟಿಕೊಳ್ಳಲು ಬಂದರು. ಸಂಪತ್ತಿಗೆ ಆಶೆಗೆ, ತಮ್ಮ ರಾಜ್ಯಗಳನ್ನು ವಿಸ್ತರಣೆ ಮಾಡುವ ಉದ್ದೇಶಕ್ಕಾಗಿ ಗ್ರೀಕರು, ಅರಬ್ಬರು, ನಿಗ್ರೋ, ಮಂಗೋಲಿಯನ್ನರು, ಆರ್ಯರು, ಪರ್ಷಿಯನ್ನರು, ಹೂಣರು, ಕುಶಾನರು, ಮೊಘಲರು, ಖಿಲ್ಜಿಗಳು, ತೊಘಲಕ್ರು, ಬಹಮನಿಗಳು, ಪೋರ್ಚ್ಗೀಸರು, ಪ್ರೆಂಚರು, ಡಚ್ಚರು ಮತ್ತು ಬ್ರಿಟಿಷರು ಈ ದೇಶಕ್ಕೆ ಬಂದರು. ಹೀಗೆ ದೇಶದಲ್ಲಿನ ಮೂಲ ನಿವಾಸಿಗಳು, ಹೊರಗಿನಿಂದ ಬಂದು ನೆಲಸಿದವರು ಸೇರಿ ಭಾರತದಲ್ಲಿ 2011ನೇ ಜನಗಣತಿ ಪ್ರಕಾರ 125 ಕೋಟಿ ಜನಸಂಖ್ಯೆ, 4,635 ಬಗೆಯ ಜನಾಂಗೀಯ ಪಂಗಡ, 325 ಭಾಷೆ, 19,569 ಮಾತೃ ಭಾಷೆಗಳು, 25 ಲಿಪಿಗಳನ್ನು ಹೊಂದಿದ್ದರೂ ಪರಸ್ಪರ ಹೊಂದಾಣಿಕೆಯಿAದ ಬಾಳುತ್ತಿದ್ದಾರೆ. ಅದರಲ್ಲೂ ಭಾರತದ ತ್ರಿವರ್ಣ ಧ್ವಜದಂತೆ ವಿಶ್ವದ ಅತಿ ದೊಡ್ಡ ಜನಸಂಖ್ಯೆ ಹೊಂದಿದ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂಗಳು ಸಹೋದರತ್ವದಿಂದ ಬದುಕಿ ವಿಶ್ವಕ್ಕೆ ಮಾದರಿಯಾಗಿದೆ. ಇದಕ್ಕೆ ಮೂಲ ಶಕ್ತಿ ಭಾರತದ ಸಂವಿಧಾನ. ಎಲ್ಲರಿಗೂ ಬದುಕಲು ಸಮಾನ ಹಕ್ಕು ನೀಡಿರುವ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ.

 

ಹೊರಗಿನಿಂದ ವ್ಯಾಪಾರಕ್ಕಾಗಿ ತಕ್ಕಡಿಹಿಡಿದು ಬಂದ ಬ್ರಿಟಿಷರು ಇಲ್ಲಿನ ಅನುಕೂಲದ ಲಾಭಪಡೆದು ದೇಶದ ಚುಕ್ಕಾಣಿ ಹಿಡಿದು ಆಳಿದರು. ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟ ನಡೆದು, ಸಾಕಷ್ಟು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಅವರ ತ್ಯಾಗ ಬಲಿದಾನ, ಹೋರಾಟ ಹಂತ ಹಂತವಾಗಿ ಹೆಚ್ಚುತ್ತಾ ಹೋಯಿತು. 1945ರಲ್ಲಿ ಬ್ರಿಟಿಷ್ ಪ್ರಧಾನಮಂತ್ರಿಯಾದ ಕ್ಲೆಮೆಂಟ್ ಆಟ್ಲಿ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ನೀಡುತ್ತಾ, ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿಕೊಳ್ಳಲು ಅನುಮತಿ ನೀಡಿದರು. 1946 ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. ಸಭೆಯ ಸದಸ್ಯರು ಡಾ.ಬಾಬುರಾಜೇಂದ್ರ ಪ್ರಸಾದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ, ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಹೀಗೆ 1946 ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಂವಿಧಾನ ಸಭೆಗೆ 296 ಸದಸ್ಯರನ್ನು ಆಯ್ಕೆ ಮಾಡಲಾಗಿ, ಇದರಲ್ಲಿ ಕೆಲವರು ಭಾಗವಹಿಸಲು ನಿರಾಕರಿಸಿ ದೂರ ಉಳಿದ ಕಾರಣ ಅಂತಿಮವಾಗಿ 272 ಸದಸ್ಯರು ಉಳಿದರು. 


ಬಹುಧರ್ಮೀಯ ಭಾರತ ಸರ್ವಧರ್ಮಗಳ ದೇಶವಾಗಬೇಕು, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಬೇಕೆನ್ನುವ ಆಶಯದೊಂದಿಗೆ ವಿಶ್ವದಲ್ಲಿ ಈ ಮೊದಲು ರಚನೆಯಾಗಿದ್ದ ಬ್ರಿಟಿಷ್, ಫ್ಯಾನ್ಸ್, ಅಮೆರಿಕಾ, ಕೆನಡಾ, ಸೋವಿಯತ್ ರಷ್ಯಾ ದೇಶಗಳ ಸಂವಿಧಾನದಿಂದ ಒಂದೊಂದು ಅಂಶಗಳನ್ನು ಪಡೆದು, ೬೦ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಬೇಕಾದ ಅಂಶಗಳನ್ನು ಸೇರಿಸಿ ಸಂವಿಧಾನವನ್ನು ರಚಿಸಿದರು. ಇಂದು ವಿಶ್ವದಲ್ಲಿ 195 ಸ್ವತಂತ್ರ ದೇಶಗಳಿದ್ದು, ಇವುಗಳ ಪೈಕಿ 176 ದೇಶಗಳು ಪ್ರತ್ಯೇಕ ಸಂವಿಧಾನ ರಚಿಸಿಕೊಂಡು, ಅವುಗಳ ಚೌಕಟ್ಟಿಗೆ ಒಳಪಟ್ಟಿವೆ. ಇವುಗಳಲ್ಲೆಲ್ಲಾ ಭಾರತ ಸಂವಿಧಾನವೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.


ಸಂವಿಧಾನವನ್ನು ರಚಿಸಲು ಪೂರಕವಾಗಿ 13 ಸಮಿತಿಗಳನ್ನು ರಚಿಸಲಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್, 

ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಕೃಷ್ಣಸ್ವಾಮಿ ಅಯ್ಯರ್, ಡಾ.ಕೆ.ಎಂ.ಮುನ್ಸಿ, ಸೈಯದ್ ಮೊಹಮದ್ ಸಾದುಲ್ಲಾ, ಎನ್.ಮಾಧವರಾವ್, ಟಿ.ಟಿ.ಕೃಷ್ಣಮಾಚಾರಿಯನ್ನೊಳಗೊಂಡ 7 ಸದಸ್ಯರನ್ನು ಸಂವಿಧಾನದ ಮೂಲ ಕರಡು ರಚನಾ ಸಮಿತಿಯನ್ನು ನೇಮಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಈ ಸಮಿತಿಯಲ್ಲಿನ ಒಬ್ಬ ಸದಸ್ಯರು ರಾಜೀನಾಮೆ ನೀಡಿದರು, ಒಬ್ಬರು ಮರಣನ್ನಪ್ಪಿದರು, ಒಬ್ಬರು ಅಮೆರಿಕದಲ್ಲಿ ಇದ್ದರು, ಒಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು, ಮತ್ತೊಬ್ಬರು ಅನಾರೋಗ್ಯದ ಕಾರಣ ದೆಹಲಿಯಿಂದ ದೂರವೇ ಉಳಿದರು. ಹೀಗಾಗಿ ಕರಡನ್ನು ರಚಿಸುವ ಹೆಚ್ಚಿನ ಜವಾಬ್ದಾರಿ ಅಂಬೇಡ್ಕರ್ರವರ ಮೇಲೆ ಬಿತ್ತು. ಆದರೂ ಅವರು ಧೃತಿಗೆಡದೇ ದಿನದಲ್ಲಿ 18 ಗಂಟೆಗೂ ಹೆಚ್ಚು ಕೆಲಸ ನಿರ್ವಹಿಸಿ ಪೂರ್ಣಗೊಳಿಸಿದ್ದಾರೆ. ‘ಬಂಜೆ ಬೇನೆಯನರಿಯಳು’ ಎಂಬ ಮಾತಿನಂತೆ ಬಾಲ್ಯದಿಂದಲೂ ನೋವು, ಅವಮಾನಗಳನ್ನು ಎದುರಿಸಿ ತಮ್ಮ ಗುರಿಸಿ ಸಾಧಿಸಿ ಬೆಳೆದ ಡಾ.ಬಿ.ಆರ್. ಅಂಬೇಡ್ಕರ್ರವರು ಆರ್ಥಿಕ ಸಂಷ್ಟದಲ್ಲಿರುವ, ಹಿಂದುಳಿದ ಜನರಿಗೆ ನೆರವಾಗಬೇಕು, ನೊಂದವರಿಗೆ ಸಾಂತ್ವನ ನೀಡುವ ಶಕ್ತಿಯಾಗಬೇಕೆಂಬ ಕನಸಿನಿಂದ ಸಂವಿಧಾನದ ಕರಡನ್ನು ಪೂರ್ಣಗೊಳಿಸಿ ಭಾರತದ ಸಂವಿಧಾನ ಎನ್ನುವ ಅಧ್ಬುತ ಶಿಲ್ಪವನ್ನು ನಿರ್ಮಿಸಿದ ಶಿಲ್ಪಿಯಾಗಿ ಕಂಗೊಳಿಸುತ್ತಾರೆ.

499 ಪುಟಗಳ ಹೊತ್ತಿಗೆಯನ್ನು 6 ತಿಂಗಳ ಅವಧಿಯಲ್ಲಿ 254 ಪೆನ್ ನಿಬ್ಗಳನ್ನು ಬಳಸಿ ದೆಹಲಿಯ ಸೆಂಟ್ ಸ್ಟೀಫನ್ಸನ್ ಕಾಲೇಜಿನ ಪದವೀಧರರಾದ ಪ್ರೇಮ್ ಬಿಹಾರಿ ನಾರಾಯಣ ರಾಯ್ಜದಾ ಇವರು ಗೌರವಧನವನ್ನು ಪಡೆಯದೇ ಸುಂದರವಾಗಿ ಬರೆದು ಕೊಟ್ಟಿದ್ದಾರೆ. ಶಾಂತಿನಿಕೇತನದ ಪ್ರಾಂಶುಪಾಲರಾದ ನಂದಲಾಲ್ ಬೋಸ್ ರವರು ಸಂವಿಧಾನಕ್ಕೆ ಸುಂದರ ಕಲೆಯ ಸ್ಪರ್ಶ ನೀಡಿದರು. ಹೀಗೆ ನಮ್ಮ ಸಂವಿಧಾನವು 2ವರ್ಷ, 11 ತಿಂಗಳು, 18 ದಿನಗಳ ಅವಧಿಯಲ್ಲಿ ರಚನೆಯಾಗಿದೆ.

1948ರ ಫೆಬ್ರವರಿ-21 ರಲ್ಲಿ ಮೊದಲ ಕರಡು ಪ್ರತಿಯನ್ನು ಭಾರತ ಜನತೆಯ ಮುಂದಿಟ್ಟು, ಚರ್ಚೆಗೆ ಅವಕಾಶ ನೀಡಲಾಗಿ 7625 ತಿದ್ದುಪಡಿಗಳನ್ನು ಪಡೆದು, ಅವುಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಅಂಗೀಕರಿಸಿ 1949ರ ನವಂಬರ್-26 ರಂದು ಅಂತಿಮ ಕರಡನ್ನು ಅಂಗೀಕರಿಸಲಾಯಿತು. ಅದರ ನೆನಪಿಗಾಗಿ ಪ್ರತಿವರ್ಷ ನವಂಬರ್-26ನೇ ದಿನವನ್ನು ‘ಕಾನೂನಿನ ದಿನ’ (Law Day) ಎಂದು, ನಂತರ ಕೆಲವಾರು ವರ್ಷಗಳಿಂದ ‘ಸಂವಿಧಾನ ದಿನ’ ವನ್ನಾಗಿ ಪುನರ್ ಘೋಷಿಸಿ ಆಚರಿಸಲಾಗುತ್ತಿದೆ. 284 ಜನ ಸದಸ್ಯರು 1950 ಜನವರಿ-24 ರಂದು ಸಹಿಮಾಡಿ ಅನುಮೋದಿಸಿದ ನಂತರ 1930ರ ಜನವರಿ-26 ರಂದು ‘ಪೂರ್ಣ ಸ್ವರಾಜ್ಯ’ ಬೇಕೆಂಬ ಹೋರಾಟ ಪ್ರಾರಂಭವಾದ ಕಾರಣ ಅದರ ನೆನಪಿಗಾಗಿ 1950ರ ಜನವರಿ-26 ರಂದು ನಮ್ಮ ಸಂವಿಧಾನವನ್ನು ಜಾರಿಗೆ ತರಲಾಯಿತು. ನಮ್ಮ ಸಂವಿಧಾನವು 22 ಭಾಗಗಳು, 448 ಅನುಚ್ಛೇದಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ. ಕಾಲಮಾನ ಹೊಸ ಹಿನ್ನೆಲೆ ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ 368ನೇ ಅನುಚ್ಛೇದದ ಮೂಲಕ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡಿದೆ. ಆದರೆ ಈ ಅಧಿಕಾರವು ಬೇರೊಂದು ಸಂವಿಧಾನವನ್ನು ರಚಿಸಿ, ಈಗಿರುವ ಸಂವಿಧಾನವನ್ನು ಕೊನೆಗೊಳಿಸಲು ಯಾವುದೇ ಅವಕಾಶವಿಲ್ಲ. ಹೀಗೆ 68 ವರ್ಷಗಳಲ್ಲಿ 80,000,ಶಬ್ದಗಳಿದ್ದ ನಮ್ಮ ಸಂವಿಧಾನ 101 ತಿದ್ದುಪಡಿಗಳನ್ನು ಹೊಂದಿ 1,46,368 ಶಬ್ದಗಳು, 22 ಭಾಗಗಳ, 448 ಆರ್ಟಿಕಲ್ ಮತ್ತು 12 ಪರಿಛೇದಗಳನ್ನೊಳಗೊಂಡಿದೆ.

ಭಾರತದಲ್ಲಿ ಸಂವಿಧಾನವೇ ಸರ್ವೋಚ್ಛವಾದದು. ನಮ್ಮ ಸಂವಿಧಾನದ ಮೂಲಭೂತ ತತ್ವಗಳು, ಆಶಯಗಳು ಮತ್ತು ಸಿದ್ದಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸುವ ಪೀಠಿಕೆಯನ್ನು ಸಂವಿಧಾನದ ಪ್ರಸ್ತಾವನೆ(Preamble) ಎಂದು ಕರೆಯಲಾಗಿದೆ.  

“ ಭಾರತದ ಜನತೆಯಾದ ನಾವು,

ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ,

ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ;

ಭಾರತದ ಎಲ್ಲ ನಾಗರಿಕರಿಗೆ

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು;

ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು

ಉಪಾಸನೆಯ ಸ್ವಾತಂತ್ರ್ಯವನ್ನು;

ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು

ದೊರೆಯುವಂತೆ ಮಾಡುವುದಕ್ಕಾಗಿ;

ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ

ಸಹೋದರ ಭಾವನೆಯನ್ನು ಮೂಡಿಸುವುದಕ್ಕೆ

ದೃಢ ಸಂಕಲ್ಪ ಮಾಡಿ,

ನಮ್ಮ ಸಂವಿಧಾನ ಸಭೆಯಲ್ಲಿ

1949ನೆಯ ಇಸವಿಯ ನವಂಬರ್ ತಿಂಗಳ 26ನೇ ದಿನದಂದು

ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು,

ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ”


ಭಾರತದ ನಮ್ಮ ಸಂವಿಧಾನವು ನಮಗೆ ಹಲವಾರು ಹಕ್ಕುಗಳನ್ನು ನೀಡಿದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಮಾನತೆಯ ಸ್ವಾತಂತ್ರ್ಯವನ್ನು ನೀಡಿದ್ದು, ಎಲ್ಲರೂ ಹೆಮ್ಮೆಯಿಂದ ಬದುಕಲು ಅವಕಾಶ ಕಲ್ಪಿಸಿದೆ. ಇಂತಹ ಸಂವಿಧಾನವನ್ನು ಗೌರವಿಸುವ, ಅದರ ಆಶಯಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ಸಂವಿಧಾನವು ಭಾರತೀಯರ ಮಹಾ ಗ್ರಂಥ. ಪ್ರತಿಯೊಬ್ಬ ಭಾರತೀಯರ ಮನೆಯಲ್ಲಿ ಸಂವಿಧಾನದ ಗ್ರಂಥ, ಮನದಲ್ಲಿ ಅದರ ಗೌರವ ಭಾವನೆ ತುಂಬಿರಬೇಕು. ಸಂವಿಧಾನದ ಅರಿವು ಮೂಡಿದರೆ ರಕ್ಷಿಸುವ ಹೊಣೆ ಮೂಡಲು ಸಾಧ್ಯ. ಭಾರತೀಯರು ಶತ ಶತಮಾನಗಳ ಕಾಲ ದಾಸ್ಯವನ್ನು ಅನುಭವಿಸಿದ್ದಾಗಿದೆ. ಅದರ ಸ್ವಾನುಭವ ನಮಗಿಲ್ಲದಿದ್ದರೂ ಇತಿಹಾಸ ಪರಿಚಯದಿಂದ ಆ ನೋವನ್ನು ಅರಿಯಬಹುದಾಗಿದೆ. ಪುನ: ಭಾರತೀಯರು ವಿದೇಶಿಯರ ದಾಸ್ಯಕ್ಕೆ ಒಳಗಾಗಬಾರದೆಂದರೆ ಅದರ ಆಶಯಗಳನ್ನು ರಕ್ಷಿಸಿ, ಗೌರವಿಸಬೇಕು.


ಭಾರತದ ಸಂವಿಧಾನವನ್ನು ಸಂಕ್ಷಿಪ್ತವಾಗಿಯಾದರೂ ಅರಿಯಬೇಕೆನ್ನುವವರು ಸಹಯಾನ ಪ್ರಕಾಶನ ಮತ್ತು ಸಮುದಾಯದವರು ಪ್ರಕಟಿಸಿರುವ 100 ಪುಟಗಳ ವಿದ್ಯಾರ್ಥಿ ಯುವಜನರಿಗೆ ಕೈಪಿಡಿಯಾಗಲಿ ಎನ್ನುವ ಆಶಯದೊಂದಿಗೆ ಕರ್ನಾಟಕ ಉಚ್ಛನ್ಯಾಯಾಲಯ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್.ನಾಗಮೋಹನದಾಸ್ ರವರು ಬರೆದಿರುವ ‘ಸಂವಿಧಾನ ಓದು’ ಕೃತಿಯ ಆಯ್ದೆ ಭಾಗಗಳನ್ನು ‘ಸಂವಿಧಾನ ದಿನ’ ಕ್ಕಾಗಿ ಓದುಗರಿಗೆ ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸಂವಿಧಾನ ಓದು ಕೃತಿಯಲ್ಲಿ ಪಡೆಯಬಹುದು.  

ವಿಶ್ವಕ್ಕೆ ಮಾದರಿಯಾದ ಬೃಹತ್ ಸಂವಿಧಾನವನ್ನು ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ವರು “ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿಬಿಡುವುದು ಖಂಡಿತ” ಎಂದಿದ್ದಾರೆ. ಆದ್ದರಿಂದ ನಮ್ಮ ಸಂವಿದಾನವನ್ನು ಅರಿಯಲು, ಅದರ ಆಶಯಗಳನ್ನು ರಕ್ಷಿಸಲು, ಗೌರವಿಸಲು ಭಾರತೀಯರಾದ ನಾವೆಲ್ಲಾ ಈ ದಿನ ಪಣತೊಡೋಣವೇ ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ