ಕನಕರ ಕೀರ್ತನೆಯಲ್ಲಿ ಸಾಮಾಜಿಕ ಪ್ರಜ್ಞೆ
ಕನ್ನಡ ಸಾಹಿತ್ಯದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅತ್ಯಂತ ಜನಪ್ರಿಯವಾದ ಹಾಗೂ ಜನಪರವಾದ ಸಾಹಿತ್ಯವಾಗಿದೆ. ೧೨ನೇ ಶತಮಾನಕ್ಕಿಂತ ಪೂರ್ವದಲ್ಲಿ ಸಾಹಿತ್ಯ ರಾಜಾಶ್ರಯವಾಗಿದ್ದು, ಉದ್ದಾಮ ಪಂಡಿತರಿಗೆ ಮಾತ್ರ ಮೀಸಲಿದ್ದು ಜನಸಾಮಾನ್ಯರಿಗೆ ತಲುಪದೇ ಕಬ್ಬಿಣದ ಕಡಲೆಯಂತಾಗಿತ್ತು. ಇಂತಹ ಕಾಲಘಟ್ಟದಲ್ಲಿ ೧೨ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ನಂತರ ೧೫-೧೬ನೇ ಶತಮಾನದಲ್ಲಿ ಬಂದ ಹರಿದಾಸರ ಚಳುವಳಿ ನಡೆಯಿತು. ಈ ಎರಡೂ ಚಳುವಳಿಯಲ್ಲಿ ಧರ್ಮಶ್ರದ್ಧೆ ಮತ್ತು ಭಕ್ತಿ ಪ್ರಧಾನವಾಗಿ ಇದ್ದುದನ್ನು ಕಾಣಬಹುದು.
ಶರಣರದು ಹರ ಭಕ್ತಿಯಾದರೆ , ದಾಸರದು ಹರಿ ಭಕ್ತಿ. ಈ ಎರಡೂ ಚಳುವಳಿಯಲ್ಲಿ ಭಕ್ತಿಯ ಜೊತೆಗೆ ಸಮಾಜದ ಅಂಕು-ಡೊAಕುಗಳನ್ನು ತಿದ್ದಿ ಮಾನವೀಯತೆಯನ್ನ ಎತ್ತಿ ಹಿಡಿದು ಅರಿವಿನ ಬೆಳಕಿನ ದಾರಿಯನ್ನು ತೋರಿಸಿದ್ದಾರೆ. ಆಡುಭಾಷೆಯು ಇವರ ಸಾಹಿತ್ಯದಲ್ಲಿ ಬಳಕೆಯಾದ್ದರಿಂದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಾಹಿತ್ಯವಾಗಿ ಜೀವಂತಿಕೆಯನ್ನು ಪಡೆದಿವೆ.
ಹೀಗೆ ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದು ಜನಪ್ರಿಯ ಸಾಹಿತ್ಯವಾಗಿ ಜನರ ಮನದಲ್ಲಿ ಉಳಿದಿದೆ. ಈ ದಾಸ ಸಾಹಿತ್ಯದಲ್ಲಿ ನೂರಾರು ದಾಸರು ಇದ್ದರೂ ಕನ್ನಕದಾಸರು ಮತ್ತು ಪುರಂದರ ದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಿದ್ದಾರೆ. ಅಲ್ಲದೇ ಕನಕ ದಾಸರು ಇಡೀ ದಾಸ ಸಾಹಿತ್ಯದಲ್ಲೇ ಕೆಳವರ್ಗದಿಂದ ಬಂದ ಏಕೈಕ ವ್ಯಕ್ತಿಯಾಗಿದ್ದು, ತಮ್ಮ ಜೀವನದಲ್ಲಿ ಕಂಡುAಡ ನೋವು-ನಲಿವುಗಳನ್ನು, ಸಾಮಾಜಿಕ ಅಸಮಾನತೆಗಳ ಅನುಭವನ್ನು ತಮ್ಮ ಕೀರ್ತನೆಗಳ ಮೂಲಕ ಹಾಡಿ ಜನರನ್ನು ಎಚ್ಚರಿಸಿದ್ದಾರೆ.
ಹಾವೇರಿ ಜಿಲ್ಲೆಯ ಬಾಡದಲ್ಲಿ ೧೫೦೯ ರಲ್ಲಿ ಕುರುಬ ಜಾತಿಗೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪ ದಂಪತಿಗಳ ಮಗನಾಗಿ ಜನಿಸಿದ ಇವರು ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದರು. ಉಡುಪಿಯ ಶ್ರೀಕೃಷ್ಣನಲ್ಲಿ ಅನನ್ಯ ಭಕ್ಕಿಯನ್ನು ಹೊಂದಿದ ಇವರು ಕಾಗಿನೆಲೆಯ ಆದಿಕೇಶವನ ಪರಮ ಭಕ್ತರು. ಬಾಳ ಕತ್ತಲಿನಲ್ಲಿ ದಾರಿ ಕಾಣದೇ ತಡವರಿಸುತ್ತಿದ್ದ ಜನರಲ್ಲಿಗೆ ಹೋಗಿ ಜ್ಞಾನದ ದೀಪವನ್ನು ಹಚ್ಚಿ ದಾರಿ ತೋರಿಸಿ, ಜನಹಿತದ ಬಗ್ಗೆ ಚಿಂತಿಸಿ ಅವರ ಉದ್ದಾರಕ್ಕೆ ಶ್ರಮಿಸಿದವರು.
ದಾಸರು ರಚಿಸಿದ ಪದಗಳನ್ನು ಕೀರ್ತನೆಗಳೆನ್ನುತ್ತೇವೆ. ಕೀರ್ತನೆ ಎಂದರೆ ‘ ಭಗವಂತನ ಸ್ತುತಿಪರವಾದ ಹಾಡು ’ ೧೫ನೇ ಶರಮಾನದ ಶ್ರೀಪಾದರಾಯರಿಂದ ಹಿಡಿದು ನಂತರ ಬಂದ ಎಲ್ಲಾ ದಾಸರು ಹರಿ ಭಕ್ತಿಯನ್ನು ತಮ್ಮ ತಮ್ಮ ಕೀರ್ತನೆಗಳಲ್ಲಿ ಹಾಡಿ ಹರಿಯನ್ನು ಸ್ತುತಿಸಿದ್ದಾರೆ. ಆದರೆ ಬೇರೆ ದಾಸರಂತೆ ಕೇವಲ ಭಕ್ತಿಯನ್ನು ಪ್ರಕಟಿಸದೇ ಸಮಾಜ ಭ್ರಷ್ಟವಾಗಿರುವುದನ್ನು, ನ್ಯಾಯ ನೀತಿಗಳು ದಾರಿ ತಪ್ಪಿರುವುದನ್ನು, ಮೌಲ್ಯಗಳು ಕುಸಿದು ಬೀಳುತ್ತಿರುವುದನ್ನು ಗುರುತಿಸಿ “ ಸತ್ಯ ಧರ್ಮಗಳೆಲ್ಲಾ ಎತ್ತ ಪೋದವೋ ಕಾಣೆ ”, “ ಉತ್ತಮರ ಜೀವಕೆ ದಾರಿ ಇಲ್ಲ. ನಿತ್ಯದಲ್ಲಿ ಕಳವು, ವ್ಯಭಿಚಾರವುಳ್ಳವರೆಲ್ಲ ಅರ್ಥಸಂಪನ್ನರಾಗ್ಯನುಭವಿಸುತಿಹರು ” ಎಂದು ಬಲಗೈಯಲ್ಲಿ ಕೊರಳಲ್ಲಿ ಹಾಕಿದ ತಂಬೂರಿಯನ್ನು ನುಡಿಸುತ್ತಾ, ಎಡಗೈಯಲ್ಲಿ ತಾಳ ಬಾರಿಸುತ್ತಾ, ತಾಳ ತಪ್ಪಿ ನಡೆಯುತ್ತಿರುವ ಸಮಾಜವನ್ನು ಎಚ್ಚರಿಸಿದ್ದಾರೆ.
ಕನಕರ ಕೀರ್ತನೆಗಳಲ್ಲಿ ಭಕ್ತಿಯ ಭಾವ ಸಂಪತ್ತು ತುಂಬಿ ತುಳುಕುತ್ತಿದೆ. ಭಕ್ತ ಶ್ರೇಷ್ಠರಾದ ಅವರು ಭಗವಂತನನ್ನು ಹೃದಯ ತುಂಬಿ ಹಾಡಿರುವುದರಿಂದ ಅವು ನೈಜ ಕಾಂತಿಯಿAದ ಕೂಡಿವೆ. ಇವರ ಕೀರ್ತನೆಗಳಲ್ಲಿ ಭಕ್ತಿಯ ಆವೇಶವನ್ನಷ್ಟೇ ಕಾಣುವುದಿಲ್ಲ. ವಿಚಾರದ ಹೊಳಪು ಸಹಾ ಇದೆ. ಆಚಾರ ವಿಚಾರಗಳ ಸಮನ್ವಯದಿಂದ ಗಟ್ಟಿಗೊಂಡ ಅನುಭವವೂ ಸಹಾ ಕಾಣಬಹುದು. ಕನಕದಾಸರನ್ನು ಅವರ ಗುರುಗಳಾದ ವ್ಯಾಸರಾಯರು ಹೆಚ್ಚು ಪ್ರೀತಿಯಿಂದ ಕಾಣುತ್ತಿದ್ದುದು ಉಳಿದ ಶಿಷ್ಯರಿಗೆ ಸಹಿಸಲಾಗುತ್ತಿರಲಿಲ್ಲ. ಇದನ್ನು ಅರಿತು ಕನಕ ದಾಸರ ವ್ಯಕ್ತಿತ್ವವನ್ನು ಬೆಳಕಿಗೆ ತರಲು “ ಸ್ವರ್ಗಕ್ಕೆ ನಿಮ್ಮಲ್ಲಿ ಯಾರು ಹೋಗುತ್ತೀರಿ ” ಎಂದು ಪ್ರಶ್ನಿಸಿದಾಗ ಯಾರೂ ಉತ್ತರವನ್ನು ನೀಡುವುದಿಲ್ಲ. ಆಗ ಕನಕದಾಸರು “ ನಾನು ಹೋದರೆ ಹೋಗಬಹುದು ” ಎಂದರAತೆ. ಇಂದು ಸಮಾಜದಲ್ಲಿನ ಸಂಘರ್ಷ, ದ್ವೇಷ, ಕುಟುಂಬಗಳಲ್ಲಿನ ವಿರಸಕ್ಕೆ ಮೂಲ ಕಾರಣ ಈ ‘ ನಾನು ’ ಎನ್ನುವ ಅಹಂ. ಈ ನಾನು ಎಂಬ ಅಹಂಕಾರ ಹೋದರೆ ಯಾರು ಬೇಕಾದರೂ ಸ್ವರ್ಗಕ್ಕೆ ಹೋಗಬಹುದು ಎನ್ನುವ ಕಿರಿದರಲ್ಲಿ ಹಿರಿದರ್ಥವನ್ನು ಹೇಳಬಲ್ಲ ಚಾಣಾಕ್ಷರಾಗಿದ್ದರು.
ಕನಕದಾಸರ ಸಂದೇಶ ನೇರ ಮತ್ತು ಖಚಿತವಾದುದು. ಕುಲ ಕುಲವೆಂದು ಕುಲದ ತಾರತಮ್ಯ ಮಾಡುವ ಜನಗಳ ಮಧ್ಯೆ ಸಿಕ್ಕು ಒದ್ದಾಡುವ ಜನರನ್ನ ಕಂಡು ಹುಟ್ಟಿನಿಂದ ಕುಲವನ್ನು ಗಣಿಸುವುದು ಮೂರ್ಖತನ ಎಂದು ಭಾವಿಸಿದ ಇವರು “ ಆತನೊಲಿದ ಮೇಲೆ ಇನ್ಯಾತರ ಕುಲವಯ್ಯ ” “ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ ? ” “ ಆವ ಕುಲವಾದರೇನು ಆವನಾದರೇನು ಆತ್ಮ ಭಾವವರಿತ ಮೇಲೆ ” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ “ ಜಲವೇ ಸಕಲ ಕುಲಕ್ಕೆ ತಾಯಿಯಲ್ಲವೇ , ಆ ಜಲದ ಕುಲವ ನೇನಾದರೂ ಬಲ್ಲಿರಾ ” ಎಂದು ದಿಟ್ಟತನದಿಂದ ಕೇಳುವ ಇವರ ನಿಲುವು ಮೆಚ್ಚಿಗೆಯಾಗುತ್ತದೆ. “ ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ” ಎನ್ನುವ ಸರ್ವಜ್ಞನಂತೆ ಕನಕರು ಸಹಾ ಜಾತಿ ಶ್ರೇಷ್ಠತೆಯ ಬಗ್ಗೆ, ಕುಲದ ಶ್ರೇಷ್ಠತೆಯ ಬಗ್ಗೆ ಬಡಿದಾಡುವ ಜನರನ್ನು ಕೆಣಕಿದ್ದಾರೆ.
ಶರಣರು ಕಾಯಕಕ್ಕೆ ಮಹತ್ವ ಕೊಟ್ಟು ಕಾಯಕವನ್ನು ಕೈಲಾಸವೆಂದು ನಂಬಿದAತೆ ಕನಕದಾಸರು ಸಹಾ ಕಾಯದಲ್ಲಿ ಮೇಲು ಕೀಳಿಲ್ಲ ಎಂದು ಭಾವಿಸಿದ್ದಾರೆ. “ ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ ” ಎನ್ನುವಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಹೋರಾಡುವುದು ಹೊಟ್ಟೆಗಾಗಿ, ನಂತರ ಬಟ್ಟೆಗಾಗಿ. ಆದರೆ ಅದು ಅಷ್ಟಕ್ಕೇ ನಿಲ್ಲದೇ ಭಗವಂತನ ಧ್ಯಾನವನ್ನು ಮನಮುಟ್ಟಿ ಮಾಡುವುದು ಆನಂದವನ್ನು, ಮುಕ್ತಿಯನ್ನು ಪಡೆಯುವಲ್ಲಿಗೆ ಹೋಗಬೇಕು ಎನ್ನುತ್ತಾರೆ.
ಅವರ ಕೀರ್ತನೆಯಲ್ಲಿ ಮನುಷ್ಯನ ದ್ವಂದ್ವ ನಿಲುವಿಗೆ ಪ್ರಶ್ನೆ ಇದೆ, ಅದರಲ್ಲೇ ಉತ್ತರವೂ ಇದೆ. ಪ್ರಶ್ನೆ ಮಾಡುವ ಮೂಲಕ ಸಮಾಜದ ಡೊಂಕನ್ನು, ಮೂಢ ನಂಬಿಕೆಯನ್ನನು, ಸಣ್ಣತನವನ್ನು ತಿದ್ದಲು ಅಂದೇ ಪ್ರಯತ್ನಿಸಿರುವುದು ಕಾಣುತ್ತದೆ. “ ಸತ್ಯವಂತರ ಸಂಗವಿರಲು ತೀರ್ಥವೇತಕೆ ” ತಾನು ಉಪಯೋಗಿಸದೇ , ಕಷ್ಟದಲ್ಲಿರುವವರಿಗೆ ಸಹಾಯಕ್ಕೆ ನೀಡದೇ ಇರುವ ಧನ ಮೋಹಿಗಳನ್ನು, ಜಿಪುಣ ಜನರನ್ನು ಕಂಡು “ ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ ” ಎಂದು ಕೆಣಕುತ್ತಾ, ಮನುಷ್ಯ ಮಾನವಂತನಾಗಿ ಬಾಳಬೇಕು. “ ಮಾನ ಹೀನನಾಗಿ ಬಾಳ್ವ ಮನುಜನೇತಕೆ ” “ ಪ್ರೀತಿ ಇಲ್ಲದೆ ಎಡೆಯ ನಿಕ್ಕಿದ ಅನ್ನವೇತಕೆ ” ಎಂದು ಪ್ರೀತಿ ಇಲ್ಲದೇ ನೀಡುವ ಅನ್ನವು ವಿಷಕ್ಕೆ ಸಮಾನ. ಆದ್ದರಿಂದ ಹಸಿದವರಿಗೆ ಪ್ರೀತಿಯಿಂದ ನೀಡಿದ ಅನ್ನವು ಅವನ ಹಸಿವನ್ನು ನೀಗಿಸಬಲ್ಲದು ಎನ್ನುವ ನಿಲುವು ಕನಕರದು.
ಇಂದು ನಾವು ಏನೆಲ್ಲವನ್ನೂ ಸಾಧಿಸಿದ್ದೇವೆ. ಆದರೆ ಬದುಕಿನಲ್ಲಿ ಭಯ ಆವರಿಸಿದೆ. ಭದ್ರತೆ ಇಲ್ಲದಾಗಿ ಸಂಕಷ್ಟದಲ್ಲಿ ಸಿಲುಕಿ ಮನುಷ್ಯ ತೊಳಲಾಡುತ್ತಿದ್ದಾನೆ. ಅಸಾಯಕರಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಬದುಕು ಬವಣೆಯ ಬೆಟ್ಟವಾಗಿ, ಮನಸ್ಸು ನಾನಾ ವಿಧದ ಸಂಶಯಗಳ ಸುಳಿಯಲ್ಲಿ ಸಿಕ್ಕು ತೊಳಲುತ್ತಾ ನಿರಾಶೆಯ ಆಳದಲ್ಲಿ ಮುಳುಗಿ ಬಾಳಿನಲ್ಲಿ ನಂಬಿಕೆಯನ್ನು ಕಳೆದುಕೊಂಡು ಚಿಂತಾಕ್ರಾAತರಾದ ಜನರನ್ನು ಕಂಡು ಮರುಗಿದ ಕನಕರು ಆ ಕಾಲದಲ್ಲೇ ಆತ್ಮಸ್ಥೆöÊರ್ಯ ತುಂಬಲು ಪ್ರಯತ್ನಿಸಿದ್ದಾರೆ. ದೈವದ ಕಾರುಣ್ಯದ ಸಹಾಯ ಹಸ್ತ ಇದ್ದೆ ಇದೆ ಎಂದು ಹೇಳುತ್ತಾ ಮತ್ತೆ ಬಾಳಿಗೆ ನಂಬುಗೆ, ಭರವಸೆಯನ್ನು ತುಂಬಿದ್ದಾರೆ.
“ ತಲ್ಲಣಿಸದಿರು ಕಂಡ್ಯ ತಾಳು ಮನವೇ , ಎಲ್ಲರನು ಸಲಹುವನು ಇದಕೆ ಸಂಶಯ ಬೇಡ. ಬೆಟ್ಟದಲ್ಲಿ ಹುಟ್ಟಿದ ಗಿಡ-ಮರಗಳಿಗೆ ನೀರೆದು ಪೋಷಿಸುವ, ಕಲ್ಲಿನ ಪೊಟರಿನಲ್ಲಿ ಹುಟ್ಟಿರುವ ಕ್ರಿಮಿ-ಕೀಟಗಳಿಗೆ ಅಲ್ಲೇ ಆಹಾಋವನ್ನು ತಂದಿತ್ತು ಸಲಹುವ ಭಗವಂತ ನಿನ್ನನ್ನು ಸಲಹದೇ ಇರುತ್ತಾನೆಯೇ ? ” “ ನಂಬು ನಂಬು ಎಲೆ ಮನವೇ ಹಂಬಲಿಸದಿರು ಸಿರುಸಾಂಬ ನೊಲಿವುದು ನಿನ್ನ ನಂಬಿಕೆಯ ಮೇಲೆಯೇ ” ಎಂದAತೆ ಬಾಳಿನಲ್ಲಿ ನಂಬಿಕೆಯನ್ನು ಕಳೆದುಕೊಂಡವರಿಗೆ ನಂಬಿಕೆಯನ್ನು ಮೂಡಿಸಿದ್ದಾರೆ.
ಇಂದು ಎತ್ತನೋಡಿದರು ಮೋಸ, ವಂಚನೆ ತುಂಬಿದೆ ಎಂದು ಗೊಣಗುತ್ತೇವೆ. ಆದರೆ ಆ ಕಾಲದಲ್ಲೂ ಇಂತಹ ಜನರು ಇದ್ದರು. ಇಂತಹ ಜನರನ್ನು ಕಂಡು ಮೋಸ ಮಾಡಿ, ಸುಳ್ಳು ವಂಚನೆ ಮಾಡಿ ಪಾಪ ಪ್ರಜ್ಞೆಯಿಂದ ದಾನ-ಧರ್ಮವ ಮಾಡಿದರೆ, ಪುಣ್ಯಕ್ಷೇತ್ರಗಳ ಸುತ್ತಿ ಹುಂಡಿಗೆ ಧನ-ಕನಕ ಹಾಕಿದರೆ, ದೇವರಿಗೆ ವಸ್ತç-ವಡಗೆ ಕೊಡಿಸಿದರೆ ಮಾಡಿದ ಪಾಪ ತೊಳೆಯುವುದೇ ಎಂದು “ ಮೋಸದಿ ಜೀವರ ಘಾಷಿ ಮಾಡಿದ ಪಾಪ ಕಾಸಿಗೆ ಹೋದರೆ ಹೋದೀತೆ ” “ ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ ” ಎಂದು ಇನ್ನೊಬ್ಬರ ಮನಸ್ಸನ್ನು ನೋಯಿಸಿ, ಒಳ್ಳೆಯವರಿಗೆ ತೊಂದರೆ ಕೊಟ್ಟು ಮಾಡಿದ ಪಾಪವು ಹಣವನ್ನು ಕೊಟ್ಟು ಲೈಸನ್ಸ್ ರಿನಿವಲ್ ಮಾಡಿಸಿದಂತೆ ಮಾಡಲು ಬರುವುದೇ ಎನ್ನುವಂತೆ ಪ್ರಶ್ನಿಸಿದ್ದಾರೆ.
ಹೀಗೆ ಕನಕದಾಸರು ಕೇವಲ ಹರಿಯನ್ನು ಹೊಗಳದೇ “ ಆರು ಬದುಕಿದರು ಹರಿ ನಿನ್ನ ನಂಬಿ ” ಎಂದು ವೈಚಾರಿಕ ನೆಲೆಯಲ್ಲಿ ಪ್ರಶ್ನಿಸಿದ ಇವರು ಬರೀ ಕೀರ್ತನಕಾರರು ಮಾತ್ರವಲ್ಲದೇ ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾಗಿದ್ದಾರೆ. ಮೋಹನ ತರಂಗಿಣಿ, ನಳಚರಿತ್ರೆ , ಹರಿಭಕ್ತಿ ಸಾರ, ರಾಮಧ್ಯಾನ ಚರಿತ್ರೆ ಎಂಬ ವಿಶಿಷ್ಟವಾದ ಕೃತಿ ರತ್ನಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಶ್ರೀಮಂತಗೊಳಿಸಿದ್ದಾರೆ.
ಕನಕದಾಸರು ಕುಲಾತೀತರಾಗಿ, ಕಾಲಾತೀತರಾಗಿ, ಕನ್ನಡ ಸಾರಸ್ವತ ಲೋಕದ ಪ್ರಜ್ವಲ ತಾರೆಯಾಗಿದ್ದಾರೆ. ಕನ್ನಡ ದಾಸ ಸಾಹಿತ್ಯದ ಕೋಗಿಲೆ. ಕೀರ್ತನ ಸಾಹಿತ್ಯದ ಒಂದು ಮಹಾಶಿಖರ. “ ದಾಸದಾಸರ ಮನೆಯ ದಾಸಾನುದಾಸ ನಾನು” “ ಹಲವು ದಾಸರ ಮನೆಯ ಹೊಲೆದಾಸ ನಾನು ” ಎಂದು ಹೇಳುತ್ತಾ ಎಲ್ಲರಿಗೆ ತಲೆಬಾಗಿ, ಎಲ್ಲರೂ ತಲೆ ಬಾಗುವಂತೆ ಮಾಡಿದವರು. ಬದುಕಿನಲ್ಲೂ, ಸಾಹಿತ್ಯದಲ್ಲೂ ಕ್ರಾಂತಿಯನ್ನೂ, ಭಕ್ತಿಯನ್ನೂ ಬೆರೆಸಿದ ಅರೂಪದ ಸಾಹಿತಿ ಸಂತರು.
ಲೇಖನ - ಸಿ.ಮ.ಗುರುಬಸವರಾಜ
ಹವ್ಯಾಸಿ ಬರಹಗಾರರು, ಹಬೊಹಳ್ಳಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ