ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ ಮಾನವ ದಿನಗಳನ್ನು ಸೃಜಿಸಿದರೆ ಪ್ರಯೋಜನವಿಲ್ಲ. ಅದರ ಬದಲಿಗೆ ಆಸ್ತಿ ಸೃಜನೆ, ನೀರಿನ ಸಂರಕ್ಷಣೆಗೆ ಗಮನಹರಿಸಬೇಕು:-ಯೋಜನಾ ನಿರ್ದೇಶಕರಾದ ಪ್ರಕಾಶ್ ವಿ
ಮಸ್ಕಿ : ತಾಲೂಕಿನ ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಗುಡಿಹಾಳದ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಪಂ ಯೋಜನಾ ನಿರ್ದೇಶಕರಾದ ಪ್ರಕಾಶ್ ವಿ ಹೇಳಿದರು.
ನರೇಗಾದಡಿ ನಡೆಯುತ್ತಿರುವ ಕೆರೆ ಹೂಳು ಎತ್ತುವ ಸಮುದಾಯ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ ಮಾನವ ದಿನಗಳನ್ನು ಸೃಜಿಸಿದರೆ ಪ್ರಯೋಜನವಿಲ್ಲ. ಅದರ ಬದಲಿಗೆ ಆಸ್ತಿ ಸೃಜನೆ, ನೀರಿನ ಸಂರಕ್ಷಣೆಗೆ ಗಮನಹರಿಸಬೇಕು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮ (ಎಬಿಪಿ) ದಡಿ ರಾಯಚೂರಿನ ಎಫ್ಇಎಸ್ ನೊಂದಿಗೆ ಚರ್ಚಿಸಿ ಕೆರೆಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು. ಯಂತ್ರಗಳ ಬಳಕೆ ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ನೀಡಲು ಹೂಳು ಸ್ಥಳಾಂತರಕ್ಕೆ ಪಾಮನಕಲ್ಲೂರು ಗ್ರಾಪಂಯ ಸುತ್ತಲಿನ ಕೂಲಿಕಾರರನ್ನು ನಿಯೋಜಿಸಬೇಕು. ಈಗಾಗಲೇ ಹೂಳು ತೆಗೆದ ಸ್ಥಳದಲ್ಲಿ ಕೆಲಸ ನೀಡದೇ ವೈಜ್ಞಾನಿಕವಾಗಿ ಹೂಳು ತೆಗೆಸಬೇಕು. ಎನ್ಎಂಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಹಾಜರಾತಿ ದಾಖಲಿಸಿ, ಸರಿಯಾದ ಸಮಯಕ್ಕೆ ಕೂಲಿ ಪಾವತಿಸಬೇಕು. ಆಧಾರ್ ಮತ್ತು ಜಾಬ್ ಕಾರ್ಡ್ ಜೋಡಣೆಗೆ ಕ್ರಮ ವಹಿಸಬೇಕು ಎಂದರು.
ಬಪ್ಪೂರು ಗ್ರಾಪಂ ಯ ಮಟೂರು ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಕೆರೆ, ನರೇಗಾದಡಿ ಅಭಿವೃದ್ಧಿ ಪಡಿಸುತ್ತಿರುವ ಗದ್ರಟಗಿ ಗ್ರಾಮದ ಗೋಮಾಳವನ್ನು ವೀಕ್ಷಿಸಿದರು. ಗೋಮಾಳದಲ್ಲಿ ಜಾನುವಾರುಗಳಿಗಾಗಿ ಕುಡಿಯುವ ನೀರಿಗೆ ಕೆರೆ ನಿರ್ಮಿಸಬೇಕು ಎಂದರು. ಗುಂಡ ಗ್ರಾಪಂಯ ಗುಡಿಹಾಳ ಕೆರೆ ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಉಮೇಶ್, ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರಾಮಯ್ಯ, ಸುಧೀರ್, ತಾಂತ್ರಿಕ ಸಂಯೋಜಕರಾದ ಶಿವಲಿಂಗಯ್ಯ ಹಿರೇಮಠ, ಎಡಿಪಿಸಿ ಮಲ್ಲಮ್ಮ, ಜಿಐಎಸ್ ಸಂಯೋಜಕರಾದ ಜಗದೀಶ್, ಎಫ್ ಇ ಎಸ್ ಜಿಲ್ಲಾ ಸಂಯೋಜಕರಾದ ಶಂಕರಗೌಡ , ತಾಂತ್ರಿಕ ಸಹಾಯಕ ಅಭಿಯಂತರರಾದ ರಾಘವೇಂದ್ರ, ಪ್ರದೀಪ್, ಶಿವಕುಮಾರ ಯಾದವ್ , ಬಿಎಫ್ಟಿ, ಕಂಪ್ಯೂಟರ್ ಆಪರೇಟರ್ ಗಳು , ಗ್ರಾಪಂ ಸದಸ್ಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ