ಭರತ್ ರೆಡ್ಡಿ ಭೇಟಿ - ಒತ್ತುವರಿ ತೆರವಿಗೆ ಒಪ್ಪಿಗೆ ನೀಡಿದ ಸ್ಥಳೀಯರು
Ballari news: ಬಳ್ಳಾರಿ ನಗರದ ಒಂದನೇ ವಾರ್ಡ್‍ನ ಶಾಸ್ತ್ರಿ ನಗರದ ಈಶ್ವರ ಗುಡಿ ಬಳಿಯ ಕೊಳಚೆ ಪ್ರದೇಶಕ್ಕೆ ನಗರ ಶಾಸಕ ನಾರಾ ಭರತ್ ರೆಡ್ಡಿ(Ballari city MLA Bharath Reddy)ಭಾನುವಾರ ಮಧ್ಯಾಹ್ನ ಭೇಟಿ ನೀಡಿದರು.
ಈ ವೇಳೆ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿದರು. ಪ್ರದೇಶದ ಚರಂಡಿ ನೀರು ಮುಂದೆ ಹರಿಯದೆ ದುರ್ನಾತ ಬೀರುತ್ತಿದ್ದು, ಸ್ಥಳೀಯರು ರೋಗಪೀಡಿತರಾಗುತ್ತಿರುವ ವಿಷಯವನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಸ್ಥಳದಲ್ಲೇ ಪಾಲಿಕೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ ಚರಂಡಿ ನೀರು ಸರಾಗವಾಗಿ ಸಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ತದನಂತರ ಇಡೀ ಪ್ರದೇಶವನ್ನು ಸುತ್ತಾಡಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು. ಒತ್ತುವರಿ ತೆರವು ಮಾಡುವುದಕ್ಕೆ ಸಂಬಂಧಿಸಿ ಸಂಜೆ ಶಾಸಕರ ಖಾಸಗಿ ಕಚೇರಿಯಲ್ಲಿ ಸಂಜೆ ಸಭೆಗೆ ಹಾಜರಾಗುವಂತೆ ಪ್ರಮುಖರಿಗೆ ತಿಳಿಸಲಾಯಿತು.
ಈ ವೇಳೆ ರಾಜ್ಯ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ, ದಲಿತ ಮುಖಂಡ ಮಾನಯ್ಯ, ಪಾಲಿಕೆ ಸದಸ್ಯ ನೂರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದು ಸೇರಿದಂತೆ ಸ್ಥಳೀಯರಾದ ರಾಜೇಶ್ ಮತ್ತಿತರರು ಹಾಜರಿದ್ದರು. ತಮ್ಮ ಪ್ರದೇಶಕ್ಕೆ ಶಾಸಕರಾದ ನಂತರ ಮೊದಲ ಬಾರಿಗೆ ಭೇಟಿ ನೀಡಿದ ನಾರಾ ಭರತ್ ರೆಡ್ಡಿ ಅವರಿಗೆ ಸ್ಥಳೀಯರು ಸನ್ಮಾನಿಸಿದರು.
ಒತ್ತುವರಿ ತೆರವಿಗೆ ಸ್ವಯಂಪ್ರೇರಣೆಯಿಂದ ಒಪ್ಪಿಗೆ: ಕಳೆದ ಮೂರು ದಶಕಗಳಿಂದ ಸಮಸ್ಯೆ ಎದುರಿಸುತ್ತಿದ್ದ ಈಶ್ವರ ಗುಡಿ ಪ್ರದೇಶದ ನಿವಾಸಿಗಳ ಬಹುದಿನದ ಸಂಕಷ್ಟಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಭಾನುವಾರ ತಮ್ಮ ಖಾಸಗಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ಒದಗಿಸುವ ಮೂಲಕ ಈಶ್ವರಗುಡಿ ಪ್ರದೇಶದ ಜನರ ಆತಂಕವನ್ನು ದೂರ ಮಾಡಿದರು. ರಸ್ತೆ ಪರಂಪೋಕು ಜಾಗದಲ್ಲಿ ಮನೆ ಕಟ್ಟಿಕೊಂಡಿರುವುದಾಗಿ ಆರೋಪ ಎದುರಿಸುತ್ತ ಬಂದಿದ್ದ ನಿವಾಸಿಗಳು ಕಳೆದ ಮೂರು ದಶಕಗಳಿಂದ ತಮ್ಮ ಮನೆಗಳನ್ನು ಒತ್ತುವರಿ ತೆರವಿನಿಂದ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿದ್ದರು. ಅದೇ ರೀತಿ ತಮ್ಮ ಮನೆಗಳಿಗೆ ಪಟ್ಟಾ ಪಡೆಯಲು ಹೋರಾಡಿದರೂ ಕೂಡ ಯಾವುದೇ ಫಲ ಸಿಕ್ಕಿರಲಿಲ್ಲ. ಪ್ರತಿ ವರ್ಷ ಎರಡು ವರ್ಷಕ್ಕೊಂದು ಸಾರಿ ಒತ್ತುವರಿ ತೆರವಿನ ಹೆಸರಿನಲ್ಲಿ ಇಡೀ ಪ್ರದೇಶದ ಐವತ್ತಕ್ಕೂ ಹೆಚ್ಚು ಮನೆಗಳನ್ನು ತೆರವು ಮಾಡುವುದಾಗಿ ಅಧಿಕಾರಿಗಳು ಹೇಳುತ್ತ ಬಂದಿದ್ದರು. ಅದೇ ರೀತಿ ಪಕ್ಕದ ಬ್ಯಾಂಕರ್ಸ್ ಕಾಲೋನಿಯ ನಿವಾಸಿಗಳು ರಸ್ತೆ ಒತ್ತುವರಿಯಾಗಿದ್ದು, ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸ್ಥಳ ಪರಿಶೀಲನೆ ಮಾಡಿದ ಶಾಸಕ ನಾರಾ ಭರತ್ ರೆಡ್ಡಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಂಜೆ ತಮ್ಮ ಕಚೇರಿಯಲ್ಲಿ ಸ್ಥಳೀಯರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದರು.
ಶಾಸಕರೊಂದಿಗೆ ಚರ್ಚಿಸಿದ ಸ್ಥಳೀಯರು ಒತ್ತುವರಿ ತೆರವಿಗೆ ಒಪ್ಪಿಗೆ ನೀಡಿದರು. ಅಲ್ಲದೇ ಸ್ಥಳೀಯ ಜನರ ಬಹು ದಿನಗಳ ಬೇಡಿಕೆಯಾದ ಮನೆಗಳಿಗೆ ಪಟ್ಟಾ ಕೊಡಿಸುವಂತೆ ಮನವಿ ಮಾಡಿದರು. ಒತ್ತುವರಿ ತೆರವಿನ ನಂತರ ರಸ್ತೆ ಅಭಿವೃದ್ಧಿಪಡಿಸಿ, ಅಲ್ಲಿನ ಎಲ್ಲ ನಿವಾಸಿಗಳಿಗೆ ಕಾನೂನು ರೀತ್ಯ ಪಟ್ಟಾ ಕೊಡಿಸುವುದಾಗಿ ಶಾಸಕ ನಾರಾ ಭರತ್ ರೆಡ್ಡಿ ಜನರಿಗೆ ಭರವಸೆ ನೀಡಿದರು.
ಶಾಸಕರ ಭರವಸೆಗೆ ಸ್ಥಳೀಯರು ಸಂತೋಷ ವ್ಯಕ್ತಪಡಿಸಿ, ಶ್ಲಾಘಿಸಿದರು.
ಈ ವೇಳೆ ರಾಜ್ಯ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ, ದಲಿತ ಮುಖಂಡ ಮಾನಯ್ಯ, ಸ್ಥಳೀಯರಾದ ರಾಜೇಶ್ ಮತ್ತಿತರ ಮುಖಂಡರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ