ಬೆಲ್ಲದ ಮರಡಿಯಲ್ಲಿ ಹೊಸ ಶಾಸನ ಶೋಧ
ಮಸ್ಕಿ : ತಾಲ್ಲೂಕಿನ ಬೆಲ್ಲದ ಮರಡಿಯಲ್ಲಿ ಹೊಸ ಶಾಸನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಯವರು ಶೋಧಿಸಿದ್ದಾರೆ.
ಈ ಗ್ರಾಮದಲ್ಲಿ ಕಾವಲುಕಮಾನು ಕಟ್ಟಡ (ಹುಡೇವು) ಮಾರುತಿ, ಸೋಮನಾಥ, ದ್ಯಾಮಮ್ಮ, ಇಂದಿರಮ್ಮ, ದುರ್ಗಮ್ಮ ದೇವಿ ಮಂದಿರಗಳು, ನಾಗಶಿಲ್ಪಗಳು, ಅಗಸೆಯ ಕಟ್ಟೆಯ ಮೇಲೆ ಕಪ್ಪು ಶಿಲೆಯ ನಾಗಯಂತ್ರ ಕಲ್ಲು ಶಿಲ್ಪ ಮೊದಲಾದ ಅವಶೇಷಗಳಿವೆ. ಇವುಗಳೊಂದಿಗೆ ಗ್ರಾಮದ ಮಾರುತಿ ದೇವಾಲಯದ ಮುಂದೆ ಇರುವ ಕಪ್ಪು ಶಿಲೆಯ ಸ್ತಂಭಕ್ಕೆ ಶಾಸನವಿದೆ .ಇದು ಕನ್ನಡ ಭಾಷೆ,ಕನ್ನಡಲಿಪಿಯಲ್ಲಿದೆ ಈ ಸ್ತಂಭದ ಎರಡು ಬದಿಗಳಲ್ಲಿ ಅಕ್ಷರಗಳಿದ್ದು, ಒಟ್ಟು ಹನ್ನೊಂದು ಸಾಲುಗಳಿಂದ ರಚಿತಗೊಂಡಿದೆ. ಇದರಲ್ಲಿ ಶಕ ವರ್ಷ972 ನೇಯ ವಿಕೃತ ಸಂವತ್ಸರ ಪ್ರವರ್ತ್ತಿನ ಬದ್ಯವೀಶ್ವರಿ ಸತ್ಯಮದೇವ ರಾಜ್ಯಂಗ್ಯಯುತ್ತಿರ ಚೈತ್ರಸುದ್ಧ 9 ಆದಿತ್ಯವಾರವಂದಿದ್ದು, ಇದು ಕ್ರಿ.ಶ.1050 ಮಾರ್ಚ್ ನಾಲ್ಕನೇ ತಾರೀಖಿಗೆ ಸರಿಹೊಂದುತ್ತದೆ. ಈ ಸಮಯದಲ್ಲಿ ಕಲ್ಯಾಣ ಚಾಳುಕ್ಯ ಸಾಮ್ರಾಜ್ಯವನ್ನು 1 ನೇ ಸೋಮೇಶ್ವರನು (ಕ್ರಿ.ಶ.1044-1068) ರಾಜ್ಯಭಾರ ಮಾಡುತ್ತಿದ್ದನು. ಈತನ ಬಗ್ಗೆ ಈ ಹಿಂದೆ ಕರ್ನಾಟಕ ರಾಜ್ಯದೊಂದಿಗೆ ಹೊರ ರಾಜ್ಯಗಳ ಶಾಸನಗಳಲ್ಲಿ ಆಹವಮಲ್ಲ ಮತ್ತು ತ್ರೈಳೋಕ್ಯಮಲ್ಲನೆಂಬ ಬಿರುದುಗಳು ದಾಖಲಾಗಿವೆ. ಆದರೆ ಬೆಲ್ಲದಮರಡಿ ಗ್ರಾಮದ ಶಾಸನದಲ್ಲಿ ಮೇಲೆ ತಿಳಿಸಿದ ಎರಡು ಬಿರುದುಗಳ ಬಗ್ಗೆ ಪ್ರಸ್ತಾಪಿಸದೇ ಹೊಸ ಬಿರುದಾದ ಸತ್ಯಮದೇವನೆಂದು ಉಲ್ಲೇಖಸಿರುವುದು ಗಮನಾರ್ಹವಾಗಿದೆ, ಹಾಗೆಯೇ ಶಾಸನ ಮುಂದುವರಿದು 1 ನೇ ಸೋಮೇಶ್ವರನ ಸಾಮಂತ ಅರಸನಾಗಿ ( ಪಂಚ ಮಹಾಶಬ್ದ) ಬೆಲ್ಲದ ಮರಡಿಯ ಸುತ್ತ ಮುತ್ತಲಿನ ಪ್ರದೇಶವನ್ನು ನೊಳಂಬವಾಡಿಯ ಪಲ್ಲವ ಕುಲ ತಿಲಕ ಅಮೋಘ ವಾಕ್ಯನಾದ ಶ್ರೀ ಪೆರ್ಮ್ಮಾಡಿದೇವರಸನು ಆಳ್ವಿಕೆ ಮಾಡುತ್ತಿದ್ದನು.ಈತನು ಇಲ್ಲಿನ ವೆಬ್ಬೇಶ್ವರ ದೇವರು ( ಪ್ರಸ್ತುತ ಮಾರುತಿ ದೇಗುಲ), ಮತ್ತು ಕೆರೆಯನ್ನು ಕಟ್ಟಿಸಿದನು. ಪೆರ್ಮಾಡಿದೇವನು ಸ್ಥಳೀಯ ಬಡಿಗ ಜನಾಂಗದ ವ್ಯಕ್ತಿಗೆ ಭೂಮಿಯನ್ನು ಮತ್ತರುಗಳಲ್ಲಿ ಅಳೆದುದಾನ ನೀಡಿದನು. ಇದರೊಂದಿಗೆ ವ್ಯಕ್ತಿಗಳಾದ ಕಪ್ಪಡಿಯ ಚಂಡಮಯ್ಯ ಮತ್ತು ಸಬಟಮಯ್ಯ ಹಾಗೂ ಭಂಡ( ಸರಕು, ಸಾಗಾಣಿಕೆ) ಅಂಗಡಿ, ಕರಿಯನೆಲ ಮೊದಲಾದ ವಿಷಯಗಳು ಶಾಸನದಲ್ಲಿ ಪ್ರಸ್ತಾಪಿತಗೊಂಡಿವೆ.
ಮೆದಿಕಿನಾಳ ಗ್ರಾಮದ ಕ್ರಿ.ಶ.18-19 ನೇ ಶತಮಾನದ ಶಾಸನದಲ್ಲಿ ಬಾಲೈಮರೆ ( ಬೆಲ್ಲದ ಮರಡಿ) ಸೀಮೆಯೆಂಬ ಆಡಳಿತ ಘಟಕ ವಾಗಿತ್ತು. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ಗ್ರಾಮದ ನಾಯಕ ಜನಾಂಗ ಗುಜ್ಜಲ ಗೋತ್ರ (ಬೆಡಗು) ದ ದೇಸಾಯಿ ಮನೆತನದವರು ಬೆಲ್ಲದ ಮರಡಿ ಸುತ್ತ ಮುತ್ತಲಿನ 32 ಹಳ್ಳಿಗಳನ್ನು ಆಳ್ವಿಕೆ ಮಾಡುತ್ತಿದ್ದರೆಂದು ತಿಳಿಸಿರುತ್ತಾರೆ.ಈ ಸ್ಥಳವು ಚಿಕ್ಕ ಬೆಟ್ಟದ ( ಮರಡಿ)ಮೇಲ್ಲಿದ್ದು ಇಲ್ಲಿನ ಜಮೀನು ಕಬ್ಬಿನ ಬೆಳೆಗೆ ಪ್ರಸಿದ್ಧ ವಾಗಿತ್ತು. ಆದುದರಿಂದ ಬಹುತೇಕ ಗ್ರಾಮದ ಜನರು ತಾವು ಬೆಳೆದ ಕಬ್ಬನ್ನು ಬೆಲ್ಲ ತಯಾರಿಕೆಗೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಇಂತಹ ಬೆಲ್ಲಕ್ಕೆ ಹೆಸರುವಾಸಿಯಾದ ಗ್ರಾಮವು ಮರಡಿಯಲ್ಲಿದ್ದು
ಬೆಲ್ಲದ + ಮರಡಿ = ಬೆಲ್ಲದ ಮರಡಿಯಾಗಿರಬೇಕು.
ಈ ಗ್ರಾಮದ ಕ್ಷೇತ್ರ ಕಾರ್ಯದಲ್ಲಿ ಪರಪ್ಪ ಬಂಡಾರಿ ಹಂಚಿನಾಳ, ಬಸವರಾಜ ನಾಯಕ ದೇಸಾಯಿ ಕೋಳಬಾಳ, ಸ್ಥಳೀಯರಾದ ವೀರಭದ್ರಪ್ಪ ಹೂಗಾರ, ದೇವಿಂದ್ರಪ್ಪ ಗ್ರಾಮ ಪಂಚಾಯತಿ ಸದಸ್ಯರು, ಸೋಮನಾಥ ಕಾಟಗಲ್,ವೆಂಕೋಬ ಹುಲ್ಲೇರು (ದೇಸಾಯಿ),ಅಮರೇಶ ಹೂಗಾರ, ಮೊದಲಾದವರು ನೆರವಾಗಿದ್ದಾರೆ ಎಂದು ಸಂಶೋಧಕರು ಪತ್ರಿಕೆಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ