ದಿನಕ್ಕೊಂದು ವಚನ- ಲಿಂಗವಿದ್ದೆಡೆ
ದಿನಕ್ಕೊಂದು ವಚನ- ಲಿಂಗವಿದ್ದೆಡೆ
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ?
ಕುಲವುಂಟೆ ಜಂಗಮವಿದ್ದೆಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ ಸೂತಕವೇ ಪಾತಕ!
ನಿಷ್ಕಳ ನಿಜೈಕ್ಯ, ತ್ರಿವಿಧನಿರ್ಣಯ
ಕೂಡಲ ಸಂಗದೇವಾ, ನಿಮ್ಮ ಶರಣರಿಗಲ್ಲದಿಲ್ಲಾ
ಲಿಂಗ ಇದ್ದಲ್ಲಿ ಹೊಲೆಯುಂಟೆ ಎಂಬ ವಚನದ ಮೊದಲ ಸಾಲು ಸಾಕಷ್ಟು ವಿಚಾರಗಳನ್ನು ಹೊರಗೆಡುವುತ್ತದೆ. ಬಸವಣ್ಣ ಸ್ಪೃಶ್ಯ, ಆಸ್ಪೃಶ್ಯ ಎಂಬ ಧರ್ಮದ ಕಟ್ಟಳೆಯನ್ನು ಕಟುವಾಗಿ ವಿರೋಧಿಸಲು ಈ ಮಾತು ಹೇಳುತ್ತಾರೆ. ದೇವರು ಇದ್ದಲ್ಲಿ ಹೊಲೆಯ ಎಂಬ ಮಾತು ಯಾಕೆ? ಲಿಂಗ ಎಂಬುದು ಆತ್ಮಲಿಂಗ ಅದನ್ನು ಧರಿಸಿದೊಡೆ ಹೊಲೆಯತ್ವ ಇರದು ಎಂಬ ಮಾತನ್ನು ಹೇಳುತ್ತಾರೆ.
ಜಂಗಮವಿದ್ದೆಡೆ ಕುಲವೆಲ್ಲಿಂದ ಬರುತ್ತದೆ ಎಂಬ ಮಾತು ಸಹ ಇದೇ ಧಾಟಿಯದ್ದು. ಇಲ್ಲಿ ಜಂಗಮ ಎಂದರೆ ತಪ್ಪು ಅರ್ಥಮಾಡಿಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಜಂಗಮ ಎಂಬುದು ನಿತ್ಯ ನಿರಂತರ ಬದಲಾವಣೆಗೆ ಒಪ್ಪಿಕೊಳ್ಳುವ ಮನಸ್ಥಿತಿ. ಶಿವಯೋಗ ಅನುಸರಣೆ ವೇಳೆ ದಾಸೋಹ ಅರ್ಪಿಸುವುದಕ್ಕೂ ಜಂಗಮ ಎನ್ನುತ್ತಾರೆ. ಇಂತಹ ಜಂಗಮತ್ವ ಇರುವವರ ಮಧ್ಯೆ ಕುಲ ಶ್ರೇಷ್ಠತೆ ಯಾಕೆ? ಎಂದು ಬಸವಣ್ಣ ಎರಡನೆಯ ಸಾಲಲ್ಲಿ ಪ್ರಶ್ನಿಸುತ್ತಾರೆ.
ಪ್ರಸಾದದ ವಿಷಯದಲ್ಲೂ ಮಡಿವಂತಿಕೆಯನ್ನು ಬಸವಣ್ಣ ಖಂಡಿಸುತ್ತಾರೆ. ಅನ್ನಕ್ಕೆ ಎಂಜಲು ಉಂಟೆ. ಪ್ರಸಾದ ಎಂಬುದು ಲಿಂಗಕ್ಕೆ ಅರ್ಪಿಸುವುದಾದರೆ ಅದರ ವಿಷಯದಲ್ಲಿ ಯಾಕೆ ಮಡಿವಂತಿಕೆ ಎಂಬುದನ್ನು ಬಸವಣ್ಣ ಪ್ರಶ್ನಿಸುತ್ತಾರೆ.
ಸೂತಕ, ಪಾತಕ ಎಂಬುದು ದೇವರ ಹೆಸರಲ್ಲಿ ಅಪವಿತ್ರ ನುಡಿ ನುಡಿಯುವುದೇ ಆಗಿದೆ. ಇಲ್ಲಿ ಅಪವಿತ್ರ ಎಂದರೆ ಸುಳ್ಳು, ಪವಿತ್ರವಲ್ಲದ್ದು ಎಂಬುದಾಗಿದೆ.
ಕೂಡಲ ಸಂಗಮದೇವ ನಿನ್ನ ಶರಣರು ಆಗಲು ಲಿಂಗವಂತರು ಈ ಅನಿಷ್ಠಗಳನ್ನು ಬಿಡಬೇಕು. ನಿಷ್ಕಳಂಕವಾಗಿ, ನಿಜವಾಗಿಯೂ ನಿಮ್ಮಲ್ಲಿ ಐಕ್ಯವಾಗುವ ಮನಸ್ಸಿನೊಂದಿಗೆ ಈ ಮೂರು ನಿರ್ಣಯಗಳನ್ನು ಪಾಲಿಸುವಂತವರಾಗಬೇಕು. ಆಗ ಮಾತ್ರ ಲಿಂಗವಂತನೆನ್ನಿಸಿಕೊಳ್ಳುತ್ತಾನೆ ಎಂದು ಬಸವಣ್ಣ ಹೇಳುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ