ಪತ್ರಕರ್ತರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಬೇಕು| ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ

ಮಂಡ್ಯ : ಪೂರ್ವಾಗ್ರಹ ಪೀಡಿತರಾಗಿ, ದ್ವೇಷದ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಮುಖ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಾದವರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕೆ.ವಿ. ಶಂಕರಗೌಡರ ಶತಮಾನೋತ್ಸವ ಭವನದಲ್ಲಿ ನಡೆದ ಸಾಧನೆಗೈದ ಪತ್ರಕರ್ತರಿಗೆ ಅಭಿನಂದನೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದು ಕೇವಲ ಎರಡು ತಿಂಗಳಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲ ಕಾರ್ಯಕ್ರಮಗಳಿಗೂ ವೇಗ ನೀಡಲಾಗುತ್ತಿದೆ. ಇದಕ್ಕೆ ಕೆಲವರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ಕೆಲಸ ಮಾಡಿದರೂ ಅಪವಾದ, ಮಾಡದಿದ್ದರೂ ಅಪವಾದ ಎಂಬಂತೆ ಬಿಂಭಿಸುವುದು ಸರಿಯಲ್ಲ ಎಂದು ಹೇಳಿದರು.


ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇನಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಹೆದ್ದಾರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ನೀಡದೆ ಸಾರ್ವಜನಿಕ ಸೇವೆಗೆ ಆತುರಾತುರವಾಗಿ ಲೋಕಾರ್ಪಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಯಾವುದೇ ಯೋಜನೆ ರೂಪಿಸಬೇಕಾದರೂ ಅದಕ್ಕೆ ಸಂಬಂಧಿಸಿದ ಎಲ್ಲ  ಕಾರ್ಯಕ್ರಮಗಳನ್ನೂ ಪೂರ್ಣಗೊಳಿಸಿದ ಬಳಿಕವಷ್ಟೇ ಸಾರ್ವಜನಿಕ ಸೇವೆಗೆ ಅರ್ಪಿಸಬೇಕು. ಈ ಬಗ್ಗೆ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.


ಈ ಹೆದ್ದಾರಿಯಲ್ಲಿ ಬರುವ 5ನಗರ ಮತ್ತು ಪಟ್ಟಣಗಳ ಅಭಿವೃದ್ಧಿಗೆ ಕೇಂದ್ರಕ್ಕೆ 150 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಈ ಬಗ್ಗೆ ಕ್ರಮ ವಹಿಸಿ ಹೆದ್ದಾರಿಯನ್ನು ಸಂಪೂರ್ಣ ಅಭಿವೃದ್ಧಿಗೆ ನಮ್ಮ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗಳೇ ಖುದ್ದು ಹೆದ್ದಾರಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಹೆದ್ದಾರಿಯಲ್ಲಿ ತಿಂಗಳಿಗೆ 30 ರಿಂದ 50 ಅಪಘಾತಗಳು ಸಂಭವಿಸುತ್ತಿದ್ದವು. ಈ ಬಗ್ಗೆ ಪೊಲೀಸ್ ಇಲಾಖೆಗೆ ಸಿಎಂ ಸೂಚನೆ ನೀಡಿದ ನಂತರ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸುಮಾರು 10 ಬಾರಿ ಪರಿಶೀಲನೆ ನಡೆಸಿವೆ. 10ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಿ ಈಗ ಅಪಘಾತಗಳಾಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯಲಾಗಿದೆ. ಇದರಿಂದ ಸಾವು ನೋವುಗಳ ಸಂಖ್ಯೆಯೂ ಇಳಿಮುಖವಾಗಿದೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ನಾವು ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ. ಸರ್ಕಾರದ ಒಳ್ಳೆಯ  ಕಾರ್ಯಕ್ರಮಗಳನ್ನು ಬೆಂಬಲಿಸಬೇಕು. ತಪ್ಪುಗಳಿದ್ದಲ್ಲಿ ಸಲಹೆ ಕೊಟ್ಟರೆ ಅದನ್ನು ನಾವು ಸ್ವೀಕಾರ ಮಾಡಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಎನ್. ಜಯರಾಮ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಾಧ್ಯಮ ನಾಗಾಲೋಟದಲ್ಲಿ ಓಡುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮವೂ ಪೈಪೋಟಿ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳೂ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವರ‍್ಯತೆಯೂ ಇದೆ. ಆದರೂ ತಪ್ಪು ಮಾಹಿತಿಗಳನ್ನು ನೀಡುವುದು ಸರಿಯಲ್ಲ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ವರದಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಸರ್ಕಾರದ ಒಳ್ಳೆಯ ಕಾರ್ಯಕ್ರಮಗಳನ್ನೂ ತಿಳಿಸುವುದರ ಜೊತೆಗೆ ಸಾರ್ವಜನಿಕರ ಹಿತರಕ್ಷಣೆಯೂ ಮುಖ್ಯವಾಗಿರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಹಿತರಕ್ಷಣೆಯನ್ನೂ ಸರ್ಕಾರ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮದವರ ಬಗ್ಗೆ ಅಪರವಾದ ಪ್ರೀತಿ ಇದ್ದು, ಮುಂದಿನ ಬಜೆಟ್‌ನಲ್ಲಿ 500 ಕೋಟಿ ರೂ.ಗಳನ್ನು ಒದಗಿಸಬೇಕೆಂಬ ಇಚ್ಚೆ ಇದೆ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಒಳ್ಳೆಯ ಬೆಳವಣಿಗೆಗಳು ಆಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜು, ಶಾಸಕ ಪಿ. ರವಿಕುಮಾರ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಾಧ್ಯಮ ಸಮನ್ವಯಾಧಿಕಾರಿಯಾಗಿರುವ ಸೋಮಶೇಖರ್ ಕೆರಗೋಡು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಿ.ಎಲ್. ಲಿಂಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿ ಮತ್ತೀಕೆರೆ ಜಯರಾಂ, ಪದಾಧಿಕಾರಿಗಳಾದ ಬಿ.ಪಿ. ಪ್ರಕಾಶ್, ಕೆ.ಎನ್. ನವೀನ್‌ಕುಮಾರ್, ನಂಜುಂಡಸ್ವಾಮಿ, ರವಿ ಸಾವಂದಿಪುರ, ಪಿ.ಜೆ. ಚೈತನ್ಯಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ