ಉಡುಪಿ ಪ್ರಕರಣ ಮಕ್ಕಳ ಆಟ ಎನ್ನುವುದು ಸಲ್ಲ - ಕಣ್ಣಿಗೆ ಕಣ್ಣು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಲ್ಲ



ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳ ಬಾತ್‌ರೂಂ ಚಟುವಟಿಕೆಗಳನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎಂಬುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ ಇದರ ದನಿ ಎತ್ತಿದ್ದರ ಸಂಬಂಧ ಬಿಜೆಪಿ ಮಹಿಳಾ ಮುಖಂಡರೊಬ್ಬರನ್ನು ಬಂಧಿಸಿ, ಬಿಡುಗಡೆ ಸಹ ಮಾಡಲಾಗಿದೆ.

ಪ್ರಕರಣದ ವಿಷಯದಲ್ಲಿ ಸರ್ಕಾರ ನಡೆದುಕೊಂಡಿದ್ದರ ಬಗ್ಗೆ ತೀವ್ರ ಪರ ವಿರೋಧ ಚರ್ಚೆ ಸಹ ನಡೆದಿವೆ. ಇದು ನಿಜಕ್ಕೂ ಖೇದಕರ ಸಂಗತಿ. ರಾಜ್ಯದ ಮಹಿಳೆಯರು ಎಲ್ಲರೂ ಒಂದೇ ಸ್ಥಾನಮಾನ ಪಡೆದವರು. ಯಾರು ಹೆಚ್ಚಲ್ಲ, ಯಾರು ಕಡಮೆ ಅಲ್ಲ. ಪ್ರಕರಣಕ್ಕೆ ಸಂಬಂಧ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್ ನೀಡಿದ ಹೇಳಿಕೆ ಕೂಡ ಅಚ್ಚರಿಮೂಡಿಸಿರುವುದಂತೂ ಸುಳ್ಳಲ್ಲ. ಅವರು ಇದನ್ನು ಮಕ್ಕಳ ಆಟ ಎಂದಿರುವುದು ಖಂಡಿತಾ ಅವರ ಸ್ಥಾನಮಾನಕ್ಕೆ ಯುಕ್ತವಾದುದಲ್ಲ. ವಿದ್ಯಾರ್ಥಿನಿಯರ ಖಾಸಗಿ ವೀಡಿಯೋವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಖಂಡಿತಾ ಮಕ್ಕಳ ಆಟವಲ್ಲ ಎಂಬುದನ್ನು ನಮ್ಮ ಗೃಹಮಂತ್ರಿಗಳು ಅರ್ಥಮಾಡಿಕೊಳ್ಳದೇ ಇರುವುದು ನಿಜಕ್ಕೂ ಅಚ್ಚರಿ ಅನ್ನಿಸಿದೆ ಇರದು.

ಇನ್ನು ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕಿ ಶಕುಂತಲಾ ಅವರು ಬಹಿರಂಗವಾಗಿ ಟ್ವೀಟ್ ಮೂಲಕ ಮುಖ್ಯಮಂತ್ರಿ ಮನೆಯ ಸೊಸೆ, ಮಕ್ಕಳನ್ನು ಇಂತಹ ಆಟಕ್ಕೆ ಕಳುಹಿಸಿ ಎಂದು ಹೇಳಿಕೆ ನೀಡಿದ್ದೂ ಕೂಡ ಖೇದಕರವೇ. ಮಕ್ಕಳ ಆಟ ಎಂದು ಗೃಹಮಂತ್ರಿ ಹೇಳಿದ್ದಕ್ಕೆ ಟೀಕೆಮಾಡುವಾಗ ಒಂದು ಕಣ್ಣಿಗೆ ಮತ್ತೊಂದು ಕಣ್ಣು, ಒಂದು ಕೈಗೆ ಮತ್ತೊಂದು ಕೈ ಎಂಬ ತತ್ವದ ಆಧಾರದಲ್ಲಿ ನಡೆದುಕೊಳ್ಳುವುದು ನಾಗರಿಕ ಸಮಾಜದ ಲಕ್ಷಣ ಖಂಡಿತಾ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಿತ್ತು. ಯಾರೋ ಒಬ್ಬ ಮತ್ತೊಬ್ಬನ ಕಣ್ಣು ಕಳೆದ ಎಂಬ ಕಾರಣಕ್ಕೆ ಆತನ ಕಣ್ಣು ಕೀಳಿಸುವುದು ನ್ಯಾಯ ಅಲ್ಲ. ಹಾಗೆಯೇ ಒಬ್ಬರ ಮರ್ಯಾದೆ ಹೋಗಿದೆ ಎಂಬ ಕಾರಣಕ್ಕೆ ಮತ್ತೊಬ್ಬರ ಮರ್ಯಾದೆ ತೆಗೆಯುವುದು ನಾಗರಿಕ ಸಮಾಜ ಮತ್ತು ಪ್ರಜಾಪ್ರಭುತ್ವಕ್ಕೆ ಒಪ್ಪುವಂತಹುದ್ದು ಅಲ್ಲ.

ರಾಜಕಾರಣದಲ್ಲಿ ಕುಟುಂಬ ಸದಸ್ಯರ ಎಳೆತಂದು ಅದರಲ್ಲೂ ಮನೆಯ ಮಹಿಳೆಯರ ಮಾನ ಮರ್ಯಾದೆ ಹರಾಜು ಹಾಕುವ ಮಟ್ಟಕ್ಕೆ ಹೋಗುವ ಮುನ್ನ ಅವರೂ ಸಹ ಹೆಣ್ಣುಮಕ್ಕಳು ಎಂಬುದನ್ನು ಮರೆಯಬಾರದು. ಕೆಲ ವಿಷಯಗಳನ್ನು ಟೀಕಿಸುವಾಗ ಬಹು ಎಚ್ಚರಿಕೆಯಿಂದ ಇರಬೇಕಾದುದು ಅತೀ ಅವಶ್ಯ.

ಶೌಚಾಲಯ, ಸ್ನಾನದ ಗೃಹದಲ್ಲಿನ ಚಟುವಟಿಕೆಗಳನ್ನು ವೀಡಿಯೋ ಮಾಡಿದ್ದ ಸಹಪಾಠಿಗಳು ನಿಜವಾಗಿಯೂ ಮಕ್ಕಳಾಟಕ್ಕೆ ಹೀಗೆ ಮಾಡಿದ್ದರೆ ಎಂಬುದನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು ಎಂಬುದು ಪ್ರಮುಖ ಒತ್ತಾಯ ಆಗಿರಬೇಕು. ಅದರ ಬದಲು ಟಿಟ್ ಫಾರ್ ಟ್ಯಾಟ್ ಅನ್ನುವ ಹಾಗೆ ನಡೆದುಕೊಂಡರೆ ಅದನ್ನು ಕಾನೂನಾತ್ಮಕ ಆಡಳಿತ ಎನ್ನಲಾಗದು. ಇಲ್ಲಿ ನಮ್ಮ ವಿದ್ಯಾರ್ಥಿಗಳ ನಡೆದುಕೊಂಡಿದ್ದರ ಬಗ್ಗೆ ಅತ್ಯಂತ ಗಂಭೀರವಾಗಿ ಯೋಚಿಸಬೇಕು. ಯಾರೇ ಆಗಲಿ ಅವರು ಕನ್ನಡ ನಾಡಿನ ಮಹಿಳಾ ಮಣಿಗಳು. ವಿದ್ಯಾರ್ಥಿನಿಯರ ವಿಷಯದಲ್ಲಿ ಕೊಂಚ ಎಡವಟ್ಟಾದರೂ ಅವರ ಇಡೀ ಜೀವನ ಸಮಸ್ಯೆಗೆ ಈಡಾಗುವ ಎಲ್ಲಾ ಸಾಧ್ಯತೆ ಇರುತ್ತದೆ ಎಂಬುದನ್ನು ನಾವು ಮನನಮಾಡಿಕೊಳ್ಳಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು ನಡೆದ ನಂತರ ಅದನ್ನು ಕಾನೂನು ಚೌಕಟ್ಟಿನಲ್ಲಿ ಇರಿಸಿ, ನ್ಯಾಯ ತೀರ್ಮಾನ ಮಾಡಬೇಕು. ಅದನ್ನು ಬಿಟ್ಟು ವಿವೇಚನಾಧಿಕಾರ ಆಧರಿಸಿ ತೀರ್ಮಾನ ಕೈಗೊಳ್ಳುವುದಲ್ಲ. ಇಂತಹ ಆಡಳಿತವನ್ನು ನಾವು ಪ್ರಜಾಸತ್ತೆ ಎನ್ನಲಾಗದು.

ಇನ್ನು ಸಿದ್ದರಾಮಯ್ಯ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಮೂದಲಿಸಿದ್ದರಲ್ಲಾ? ಎಂಬ ಪ್ರಶ್ನೆಗಳು ಸಹ ಇದೇ ವೇಳೆ ಎದ್ದಿವೆ. ಇದು ಸಹಜ ಸಹ. ಇಲ್ಲೂ ಸಹ ಅದೇ ಕಾನೂನು ಚೌಕಟ್ಟು ಹಾಕಿಕೊಂಡು ನಡೆದುಕೊಳ್ಳಬೇಕು. ನಾವು ನಾಲಿಗೆ ಹರಿಬಿಟ್ಟು ಮಾತನಾಡುವ ಬದಲು ಕಾನೂನು ಬಳಸಿ ಅಂತಹ ತಪ್ಪುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದೇ ಹೋದರೆ ಹಿಂದೆ ಇದ್ದ ಅನಾಗರಿಕ ಸಮಾಜದ ರೀತಿಯಲ್ಲಿ ನಾವೂ ಸಹ ಆದರೆ ಅಚ್ಚರಿ ಇಲ್ಲ.

135 ಸೀಟು ಬಂದಿವೆ ಎಂಬ ಕಾರಣಕ್ಕೆ ಆಡಳಿತದ ವಿಷಯ ಬಂದಾಗ ಯಾವುದೋ ಒಂದು ವರ್ಗವನ್ನು ಓಲೈಕೆಮಾಡುವ ಕಾರ್ಯಕ್ಕೆ ಸರ್ಕಾರ ಇಳಿದರೆ ಅದು ಖಂಡಿತಾ ಪ್ರಜಾಪ್ರಭುತ್ವ, ಸಂವಿಧಾನ ಬದ್ಧ ಆಡಳಿತ ವ್ಯವಸ್ಥೆ ಅನ್ನಿಕೊಳ್ಳದು. ಕಾಂಗ್ರೆಸ್ ಪಕ್ಷ ಸದಾ ಬಿಜೆಪಿಯ ಸರ್ವಾಧಿಕಾರಿ, ಸ್ವಜನ ಪಕ್ಷಪಾತ ಧೋರಣೆಯನ್ನು ಕಟುವಾಗಿ ಖಂಡಿಸುತ್ತದೆ. ಆದರೆ, ಅದೇ ಪಕ್ಷ ತನ್ನ ಆಡಳಿತದಲ್ಲಿ ಈ ರೀತಿ ವರ್ತಿಸಿದರೆ ಆಕ್ಷೇಪಗಳು ಏಳುವುದು ಸಹಜ.

ಇನ್ನು ಬಿಜೆಪಿಯ ನಾಯಕರು ಖಂಡತುAಡವಾಗಿ ಕಾಂಗ್ರೆಸ್‌ನ ಧೋರಣೆಯನ್ನು ಖಂಡಿಸುತ್ತಿರುವುದು ಸ್ವಾಗತಾರ್ಹ. ಆದರೆ, ಇದೇ ಕಟುವಾದಿ ನೀತಿಯನ್ನು ಎಲ್ಲಾ ಮಹಿಳೆಯರ ಪರ ಎತ್ತಬೇಕು. ಇದೊಂದು ಗಂಭೀರ ಪ್ರಕರಣ ಅಲ್ಲವೇ ಅಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಖುಷ್ಪೂ ಸುಂದರ್ ಅವರೇ ಹೇಳಿದ್ದಾರೆ. ಇವರು ಬಿಜೆಪಿ ನಾಯಕಿ ಎಂಬುದನ್ನು ಅದೇ ಪಕ್ಷದವರು ಅರಿಯಬೇಕು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ