ಕನ್ನಡ ಭಾಷಾ ಪ್ರೇಮಿಯಾಗಿದ್ದ ರಂಜಾನ್ ಸಾಬ್
ಕೊಟ್ಟೂರು:ಕರ್ನಾಟಕ ಏಕೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬಳ್ಳಾರಿ ಮೈಸೂರು ರಾಜ್ಯದಲ್ಲಿ ಸೇರ್ಪಡೆಗೊಂಡ ನಂತರ ದುಷ್ಕರ್ಮಿಗಳು ಎಸೆದ ಆ್ಯಸಿಡ್ ದಾಳಿಗೆ ತುತ್ತಾಗಿ ಏಕೀಕರಣ ಚಳುವಳಿಯಲ್ಲಿ ಪ್ರಾಣತೆತ್ತ ಏಕೈಕ ಬಲಿದಾನ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರದು ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಅಧ್ಯಕ್ಷ, ಸಾಹಿತಿ ಸಿದ್ದರಾಮ ಕಲ್ಮಠ ಹೇಳಿದರು .
ಅವರು ಪದವಿ ಕಲಾವಿಭಾಗದ ನಾಲ್ಕನೇ ಸೆಮಿಸ್ಟರ್ ನಲ್ಲಿ ಪಠ್ಯವಾಗಿರುವ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರ ವಿಷಯ ಕುರಿತಂತೆ ಆಯೋಜಿಸಿದ್ದ ವಿದ್ಯಾರ್ಥಿ- ಸಂವಾದ ಕಾರ್ಯಕ್ರಮದಲ್ಲಿ ಪಠ್ಯದ ಲೇಖಕರಾಗಿ ಮಾತನಾಡಿದರು.
ಅಂದು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಪರಭಾಷಿಕರ ಒತ್ತಡದ ಮಧ್ಯೆಯೂ ಅನೇಕ ಹಿರಿಯರ ಅವಿರತ ಪರಿಶ್ರಮದಿಂದಾಗಿ ಬಳ್ಳಾರಿ ಪ್ರದೇಶವು ಮೈಸೂರು ರಾಜ್ಯದಲ್ಲಿ ವಿಲೀನಗೊಂಡಿತು. ಮದ್ರಾಸ್ ಪ್ರಾವಿನ್ಸಿಯಲ್ಲಿ ಬೇರೆ ಭಾಷೆಗಳ ಆಕ್ರಮಣದಿಂದ ಗಡಿನಾಡು ಅತಂತ್ರ ಸ್ಥಿತಿಯಲ್ಲಿತ್ತು ಅಂತಹ ಸಂದರ್ಭದಲ್ಲಿ ಅಪ್ಪಟ ಕನ್ನಡ ಭಾಷಾ ಪ್ರೇಮಿಯಾಗಿದ್ದ ರಂಜಾನ್ ಸಾಬ್ ರವರು ತಮ್ಮ ಸಮಕಾಲೀನ ಧುರೀಣರ ಹೋರಾಟದಲ್ಲಿ ಜೊತೆ ಜೊತೆಗೆ ಸಾಗಿ ದಿಟ್ಟವಾಗಿ ಹೋರಾಟ ನಡೆಸಿದರು.ನೇಪಥ್ಯದಲ್ಲಿರುವ ಇವರ ಹೆಸರನ್ನು ಕನ್ನಡಿಗರು ಸದಾ ಸ್ಮರಿಸಬೇಕಿದೆ ಎಂದರು. ಈ ವಿಷಯವನ್ನು ನಾಲ್ಕನೇ ಸೆಮಿಸ್ಟರ್ ಗೆ ಪಠ್ಯಕ್ರಮವಾಗಿ ಅಳವಡಿಸಿದ್ದು ಸೂಕ್ತವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ,ಡಾ. ಸಿದ್ದನಗೌಡ , ಶ್ರೀ ಕೃಷ್ಣಪ್ಪ ಹಾಗೂ ಕನ್ನಡ ವಿಭಾಗದ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಈ ಪಠ್ಯದ ಲೇಖಕರೇ ಸ್ವತಃ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ಈ ಸಂವಾದವು ಏಕೀಕರಣ ಚಳವಳಿಯನ್ನು ಕುರಿತು ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸಿಕೊಟ್ಟಿತು.
ವಿದ್ಯಾರ್ಥಿಗಳು ಹುತಾತ್ಮನಾದ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ರವರ ಬಗ್ಗೆ ತಿಳಿದುಕೊಳ್ಳಲು ತುಂಬಾ ಅನುಕೂಲವಾಯಿತು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ