ಶಿಷ್ಯರಿಗೆ ಜ್ಞಾನದ ಧಾರೆಯನ್ನು ಎರೆದ ಗುರುವೆಗೆ ಶಿಷ್ಯರಿಂದ ಗೌರವ ಸಮರ್ಪಣೆ

1939 ರಂದು ಪ್ರಾರಂಭಗೊಂಡ ಸರ್ಕಾರಿ ಶಾಲೆ|ಅಂದಿನಿಂದ ಇಂದಿನವರೆಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲಾ ಗುರುಗಳನ್ನು ಒಂದೇ ವೇದಿಕೆಯಲ್ಲಿ ಕರೆ

ಕೊಟ್ಟೂರು:ಶಿಷ್ಯರಿಗೆ ಜ್ಞಾನದ ಧಾರೆಯನ್ನು ಎರೆದು ಸಾಮಾಜಿಕವಾಗಿ ಬದುಕಲು ಹೇಳಿದ ಗುರುಗಳಿಗೆ ಶಿಷ್ಯರಿಂದ ಗೌರವ ಸಮರ್ಪಣೆ ನೀಡುವ ಕಾರ್ಯಕ್ರಮ ಇತಿಹಾಸ ಮರಳಿ ಕಳಿಸುವಂತಹ ಘಟನೆ ಹ್ಯಾಳ್ಯಾ ಗ್ರಾಮದಲ್ಲಿ ಜರುಗಿತು.

ಹ್ಯಾಳ್ಯಾ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ಬದುಕು ರೂಪಿಸಿಕೊಂಡಿರುವ ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತ, ವರ್ಗಾವಣೆ, ಪ್ರಸ್ತುತ ಇರುವ ಎಲ್ಲಾ ಶಿಕ್ಷಕರಿಗೆ ಪೂರ್ಣ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇತಿಹಾಸ:1939 ರಂದು ಪ್ರಾರಂಭಗೊಂಡ ಸರ್ಕಾರಿ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲಾ ಗುರುಗಳನ್ನು ಒಂದೇ ವೇದಿಕೆಯಲ್ಲಿ ಕರೆ ತಂದಿದ್ದು ಸುತ್ತ ಮುತ್ತಲಿನ ಶಾಲೆಗಳಿಗೆ ಮಾದರಿಯಾದಂತಾಯಿತು.  ನಂತರ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮ ಕುರಿತು ಶಿಕ್ಷಕ ಈಶ್ವರಪ್ಪ ತುರಾಕಾಣಿ ಮಾತಾನಾಡಿ, ಹೆತ್ತವರು ಜನ್ಮ ನೀಡಿದರೆ, ಗುರುಗಳು ಜ್ಞಾನ ದೀಕ್ಷೆ ನೀಡಿ, ಸಂಸ್ಕಾರವನ್ನು ಧಾರೆ ಎರೆದು, ಸುಂದರ ಮೂರ್ತಿಯನ್ನಾಗಿ ತೀಡಿ ತಿದ್ದಿದ ಶಿಲ್ಪಿಗಳು, ನಿಮ್ಮ ಬದುಕಿನಲ್ಲಿ ಮಾತಪಿತೃರು ಮೊದಲಿಗರಾದರೆ, ಗುರುಗಳು ನಂತರ ಸ್ಥಾನದಲ್ಲಿ ನಿಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುತ್ತಾರೆ. ಅದಕ್ಕಾಗಿಯೆ ಗುರುಗಳನ್ನು ಸಕಲ ಜ್ಞಾನಿ ಬ್ರಹ್ಮನಿಗೆ ಹೊಲಿಸುವುದು ಎಂದರು. 

ಶಿಕ್ಷಕರಾದ ಕೆ. ಬಸವರಾಜಪ್ಪ, ಚಂದ್ರೇಗೌಡ, ವೀರಭದ್ರಪ್ಪ, ಪ್ರಭಾಕರ, ರೇಣುಕಾಚಾರ್ಯ ಹ್ಯಾಳ್ಯಾ ಗ್ರಾಮಸ್ಥರು ಶೈಕ್ಷಣಿಕ ಪ್ರಗತಿಗೆ ನೀಡುತ್ತಿದ್ದ ಉತ್ತೇಜನ, ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ತೋರುತ್ತಿದ್ದ ಆಸಕ್ತಿಯಿಂದಾಗಿ ಗ್ರಾಮದಲ್ಲಿ ಸಾಕಷ್ಟು ಜನರು ನೌಕರಿಯಲ್ಲಿದ್ದಾರೆ. ಇದು ಗ್ರಾಮದ ಪ್ರಗತಿಯ ದ್ಯೋತಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲಿ ಶಿಕ್ಷಕರು ಭೋಧಿಸಿದ ಪಾಠ, ಹೇಳಿಕೊಟ್ಟ ಹಿತವಚನ, ಸಮಾಜ ಮುಖಿ ಚಿಂತನೆಗಳು ಅಂದಿನ ಶಿಕ್ಷಣದ ಪ್ರಗತಿ, ಸ್ಕೌಟ್ಸ ಮತ್ತು ಗೈಡ್ಸನಲ್ಲಿ ರಾಜ್ಯ ಮತ್ತು ರಾಷ್ಟ್ರಮಟದಲ್ಲಿ ಖ್ಯಾತಿ ಗಳಿಸಿದ್ದು, ಕ್ರೀಡೆಯಲ್ಲಿ ವಿಕ್ರಮ ಸಾಧಿಸಿದ್ದನ್ನು ನೆನಪುಮಾಡಿಕೊಂಡು ಭಾವುಕರಾದರು.

ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ವರಗಳ ಬಸವೇಶ್ವರ ದೇವಸ್ಥಾನದಿಂದ ನಾಲ್ಕು ಟ್ಯಾಕ್ಟರ್‌ಗಳಲ್ಲಿ ನಿವೃತ್ತಿಯಾದ ಶಿಕ್ಷಕರು, ಇಲ್ಲಿಂದ ವರ್ಗವಾದವರು, ಹಾಲಿ ಶಿಕ್ಷಕರು ಸೇರಿ ಸುಮಾರು 45 ಕ್ಕೂ ಹೆಚ್ಚು ಶಿಕ್ಷಕರನ್ನು  ಸಕಲ ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಿದರು.

ಟ್ರಾಕ್ಟರ್‌ನಲ್ಲಿ ಶಿಕ್ಷಕರು ಸಾಗುತ್ತಿರುವ ವೇಳೆ ಹಳೆ ವಿದ್ಯಾರ್ಥಿಗಳು ಪಾಠ ಕಲಿಸಿದ ಗುರುಗಳ ಮೇಲೆ ಹೂವುಗಳನ್ನು ಎರಚಿ ಸಂಭ್ರಮಿಸಿದರು. ಇಡೀ ಊರೇ ತಳಿರು ತೋರಣಗಳಿಂದ ಶೃಂಗಾರಗೊಂಡಿತ್ತು.

ಮೆರವಣಿಗೆ ಹಾದು ಹೋಗುವ ರಸ್ತೆಯ ಎರಡು ಬದಿಯಲ್ಲಿಯೂ ತಮ್ಮ ತಮ್ಮ ಮನೆಗಳ ಮುಂದೆ ಕಲರ್ ಕಲರ್ ರಂಗೋಲಿ ಸುಂದರವಾದ ರಂಗೋಲಿ ಹಾಕಿ ನೆಚ್ಚಿನ ಗುರುಗಳಿಗೆ ಸ್ವಾಗತ ಕೋರಿದ್ದರು.

ರಸ್ತೆ ಪಕ್ಕದ ಕಂಬಗಳಿಗೆ ಬಾಳೆಗಿಡಗಳನ್ನು ಕಟ್ಟಿದ್ದರು. ಒಂದು ಫಾರ್ಲಾಂಗೂ ಹೆಚ್ಚು ದೂರು ಮೆರವಣಿಗೆ ಸಾಗುತ್ತಿದ್ದರೆ, ಪಟಾಕಿ ಸಿಡಿಸಿ ಊರಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಲಾಗಿತ್ತು.

ಮೆರವಣಿಗೆ ನಂತರ ಶಿಕ್ಷಕರು ವೇದಿಕೆಗೆ ಆಗಮಿಸುವಾಗ ವೇದಘೋಷಗಳ ಮೂಲಕ ಆಹ್ವಾನಿಸುತ್ತಿದ್ದಾಗ ಶಿಕ್ಷಕರ ಮೇಲೆ ಹೂವಿನ ಮಳೆಯನ್ನು ಸುರಿಸಲಾಯಿತು.

ಹಳೆ ವಿದ್ಯಾರ್ಥಿನಿಯರು ಒಂದೇ ಮಾದರಿಯ ಹೊಸ ಸೀರೆಗಳಿಂದ ಕಂಗೋಳಿಸಿದರೆ, ವಿದ್ಯಾರ್ಥಿಗಳು ಶ್ವೇತ ಬಟ್ಟದ ಶರ್ಟ, ಮೇರೂನ್ ಕಲರ್ ಪ್ಯಾಂಟ್ ಧರಿಸಿದ್ದು, ವೇದಿಕೆ ಮದುವೆ ಮಂಟಪದಂತೆ ರಂಗೇರಿತ್ತು.

ವೇದಿಕೆಯಲ್ಲಿದ್ದ 45 ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳು ಗುರುವಂದನಾ ಅಂಗವಾಗಿ ವಿಶೇಷ ಪೇಟೆ ತೊಟ್ಟುಕೊಂಡು ಮಿಂಚುತ್ತಿದ್ದ ಶಿಕ್ಷಕರಿಗೆ ಸನ್ಮಾನಿಸಿ ಕೃತಾರ್ಥರಾದಾಗ, ಕೆಲ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕಣ್ಣುಗಳು ತೇವಗೊಂಡಿದ್ದವು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಚ್. ವೀರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆ ವಿದ್ಯಾರ್ಥಿಗಳಾದ ಮಂಗಳ, ಕೊಟ್ರೇಶ ಸ್ವಾಗತಿಸಿದರು. ವೀರಣ್ಣ, ನಾಗರತ್ನಮ್ಮ ನಿರೂಪಿಸಿದರು. ಹರೀಶ ವಂದಿಸಿದರು. ಈ ಕಾರ್ಯಕ್ರಮವು  ಸ್ನೇಹ ಸಮ್ಮಿಲನವಾಗಿ ಮಾರ್ಪಟ್ಟಿತ್ತು. 

ಈ ಸಂದರ್ಭದಲ್ಲಿ ಈಶ್ವರಪ್ಪ ತುರಾಕಾಣಿ, ಬಸವರಾಜಪ್ಪ, ಚಂದ್ರೇಗೌಡ, ಪ್ರಭಾಕರ್, ಮಹಿಳಾ ಶಿಕ್ಷಕಿಯರು ಸೇರಿದಂತೆ 45 ಕ್ಕೂ ಹೆಚ್ಚು ಶಿಕ್ಷಕರಿದ್ದರು

ಪ್ರಶಂಸೆ-ಮೆಚ್ಚುಗೆ:
ಸುಮಾರು ೩ ಲಕ್ಷ ರೂ. ವೆಚ್ಚವಾದ ಗುರುವಂದನಾ ಕಾರ್ಯಕ್ರಮ ಸಂಪೂರ್ಣ ರಾಜಕೀಯದಿಂದ ಮತ್ತು ರಾಜಕಾರಣಿಗಳಿಂದ ದೂರವಿದ್ದದ್ದು, ಗ್ರಾಮಸ್ಥರು ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಶಾಸಕ, ಸಚಿವರ ತನಕ ಯಾರೊಬ್ಬರನ್ನು ಆಹ್ವಾನಿಸದೆ ಅತ್ಯಂತ ಶಿಸ್ತು ಸಂಭ್ರಮದಿಂದ ಕಾರ್ಯಕ್ರಮ ಯಶಸ್ವಿಯಾಯಿತು. 
ಕಾರ್ಯಕ್ರಮಕ್ಕೆ ವೆಚ್ಚವಾದ ಸುಮಾರು ಮೂರು ಲಕ್ಷ ರೂ.ಗಳನ್ನು ಯಾರಿಂದಲೂ ಹಣವನ್ನು ಕೇಳದೆ ತಮ್ಮ ತಮ್ಮಲ್ಲಿ ಹಣವನ್ನು ಸಂಗ್ರಹಿಸಿ ಯಾರಿಗೂ ಹೊರೆಯಾಗಿದಿರುವುದನ್ನು ಗ್ರಾಮಸ್ಥರು ಮುಕ್ತಕಂಠದಿಂದ ಹೊಗಳಿದರು.  

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ