ಕಂಪ್ಲಿ ತಾಲ್ಲೂಕಿನಲ್ಲಿ ಕಳೆಗಟ್ಟಿದ ಮೊಹರಂ ಹಬ್ಬ-ಮಡಿಕೆ- ಬೆಳ್ಳಿ ಕುದುರೆ ವ್ಯಾಪಾರ ಜೋರು.
ಕಂಪ್ಲಿ:ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬದ ಸಡಗರ ಸಂಭ್ರಮಗಳು ತಾಲ್ಲೂಕಿನಾದ್ಯಂತ ಕಳೆಗಟ್ಟಿದ್ದು, ಎಲ್ಲಿ ನೋಡಿದರೂ ತಮಟೆಗಳ ಸದ್ದು, ಅಲಾಯಿ ಕುಣಿಯುವವರ ದೃಶ್ಯಗಳು ಕಂಡು ಬರುತ್ತಿವೆ.
ಒಂಬತ್ತನೇ ದಿನ ನೌಕಾನ್(ಕತಲ್ ರಾತ್)ಹಬ್ಬದ ದಿನದಂದು ಅಂದರೆ ಜು.28ರಂದು ಹಿಂದೂ ಹಾಗೂ ಮುಸ್ಲಿಂರು ಪೀರಲದೇವರಿಗೆ ಕೆಂಪು ಸಕ್ಕರೆ ಮತ್ತು ಬೆಲ್ಲದ ಪಾನಕ ಓದಿಸುವುದು ಪದ್ದತಿ ಅದಕ್ಕಾಗಿ ಬೆಲ್ಲದ ಹಾಲಿನ ಬಿಂದಿಗೆ ಕೊಳ್ಳುವಲ್ಲಿ ಭಕ್ತರು ಸಂಭ್ರಮದಿAದ ನಿರತರಾಗಿದ್ದು ಕಂಡು ಬಂದಿತು. ಬೆಲ್ಲದ ಹಾಲಿನ ಬಿಂದಿಗೆಗಳು, ದೇವರಿಗೆ ಹರಕೆ ತೀರಿಸಲು ಬೆಳ್ಳಿ ಕುದುರೆ,ಛತ್ರಿ, ಹಲಗೆಗಳ ವ್ಯಾಪಾರ ಜೋರಾಗಿತ್ತು. ಪಟ್ಟಣದಲ್ಲಿ ಮಡಿಕೆಗಳ ತಯಾರಿಕೆ ನಿಂತು ಅನೇಕ ವರ್ಷಗಳಾಗಿದ್ದವು ಆದರೆ ಇತ್ತೀಚೆಗೆ ಪಟ್ಟಣದ ಅಲ್ಲಲ್ಲಿ ಕುಂಬಾರರು ಮಡಿಕೆಗಳನ್ನು ತಯಾರಿಸುತ್ತಿದ್ದರೂ ಸಹಿತ ಬೇರೆಡೆಯ ಕುಂಬಾರರಿಂದ ಮಾಡಲ್ಪಟ್ಟ ಮಣ್ಣಿನ ಗಡಿಗೆಗಳನ್ನು ತಂದು ಮಾರಾಟ ಮಾಡಬೇಕಿದ್ದರಿಂದ ಹೆಚ್ಚಿನ ಬೆಲೆಗೆ ಅನಿವಾರ್ಯವಾಗಿ ಮಾರಾಟಮಾಡಬೇಕಿದೆ ಎಂದು ಹೆಸರೇಳಲಿಚ್ಚಿಸದ ಮಹಿಳೆಯರು, ಅಲವೊತ್ತುಕೊಂಡರು.
ಮೆಟ್ರಿ, ಹೊಸಪೇಟೆ, ಕೂಡ್ಲಿಗಿ, ಸಂಡೂರು ಸೇರಿ ಅನೇಕ ಕಡೆಗಳಿಂದ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳ ಕುಂಬಾರರು ಬಿಂದಿಗೆ ವ್ಯಾಪಾರದಲ್ಲಿ ತೊಡಗಿದ್ದರು. ಈಮೊದಲು ಪಟ್ಟಣದಲ್ಲಿಯೇ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು,ಆದರೆ ಇದೀಗ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹಿತ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದು, ಸಮೀಪದ ದೇವಸಮುದ್ರ, ಮೆಟ್ರಿ,ರಾಮಸಾಗರ, ನಂ10 ಮುದ್ದಾಪುರ ಗ್ರಾಮಗಳಲ್ಲಿ ಕುಂಬಾರ ಸಮುದಾಯದ ಮಹಿಳೆಯರು ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂತು. ಜೊತೆಗೆ ಪಟ್ಟಣದಲ್ಲಿ ಹಬ್ಬದ ಕುಣಿತಕ್ಕೆ ಬೇಕಾದ ಹಲಗೆಗಳನ್ನು ಹಾಗೂ ಕೆಂಪು ಸಕ್ಕರೆ, ಲಾಡಿ, ಬೆಳ್ಳಿ ಕುದುರೆ ಮತ್ತು ಛತ್ರಿಗಳನ್ನು ಮಾರಾಟ ಮಾಡುವುದು ಹಾಗೂ ಸಿಹಿ ಕಾರಾ ಪದಾರ್ಥಗಳನ್ನು ಮಾರಾಟ ಮಾಡುವುದು ಅಲ್ಲಲ್ಲಿ ಕಂಡು ಬಂತು.
ಪೀರಲು ದೇವರಿಗೆ ಶುಕ್ರವಾರ ಹೊಸ ಬಿಂದಿಗೆಯಲ್ಲಿ ಬೆಲ್ಲದ ಹಾಲನ್ನು, ಸಜ್ಜೆ ರೊಟ್ಟಿ, ಮಾದ್ಲಿ, ಬದನೆ ಕಾಯಿ ಅನ್ನ, ಕಿಚಡಿ ಬದ್ನೆಕಾಯಿ, ಪಲಾವ್, ಕೆಲವರು ಕಂದೂರಿ ಬೇಟೆಯನ್ನು ಎಡೆಯಾಗಿ ಅರ್ಪಿಸುತ್ತಾರೆ. ಮಂಗಳವಾಧ್ಯಗಳೊಂದಿಗೆ ಬೆಲ್ಲದ ಬಿಂದಿಗೆ, ಎಡೆಯೊಂದಿಗೆ ಮಸೀದಿಗೆ ಆಗಮಿಸಿ ಪೀರಲು ದೇವರಿಗೆ ಹೊದಿಕೆ ಅರ್ಪಿಸಿ, ಅಲಾಯಿ ಕುಣಿಯಲ್ಲಿ ಕಟ್ಟಿಗೆ ಉಪ್ಪು ಹಾಕಿ ತಮ್ಮ ಭಕ್ತಿ ಅರ್ಪಿಸುತ್ತಾರೆ. ಹರಕೆ ಹೊತ್ತ ಕೆಲವರು ಹುಲಿ ವೇಷಧರಿಸಿ ನಾಳೆ ಅಂದರೆ ಕತಲ್ ರಾತ್ ದಿನ ಹುಲಿ ಆಡಿ ತಮ್ಮ ಹರಕೆಯನ್ನು ತೀರಿಸುವ ಹಿನ್ನೆಲೆಯಲ್ಲಿ ಇಂದು ಪಟ್ಟಣದ ಚಿತ್ರಗಾರ ಕುಟುಂಬದ ಮನೆಗಳಲ್ಲಿ ಬಣ್ಣ ಬಳಿಸಿಕೊಳ್ಳುವುದು ಕಂಡು ಬಂತು. ಒಟ್ಟಾರೆ ಮೊಹರಂ ಹಬ್ಬಕ್ಕೆ ಕಳೆಕಟ್ಟಿದ್ದು,ಹಿಂದೂ ಮುಸ್ಲಿಂರು ಭಾವೈಕ್ಯತೆಯನ್ನು ಮೆರೆಯುತ್ತಿದ್ದಾರೆ.
ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಮಣ್ಣಿನ ಬಿಂದಿಗೆಗಳ ಮಾರಾಟ ಭರ್ಜರಿಯಾಗಿ ನಡೆದಿದ್ದರೆ, ಪಟ್ಟಣದ ಮುಖ್ಯ ಬೀದಿಯಲ್ಲಿ ಪೀರಲ ದೇವರಿಗೆ ಅರ್ಪಿಸುವ ಬೆಳ್ಳಿಯ ಕುದುರೆ, ಛತ್ರಿ , ದೇವರಿಗೆ ಓದಿಸುವ ಕೆಂಪು ಸಕ್ಕರೆಯ, ವಿವಿಧ ರೀತಿಯ ಲಾಡಿಗಳು ಹಾಗೂ ಮೊಹರಂ ಹಬ್ಬದ ವಿಶೇಷವಾದ ಜಾನಪದ ವಾದ್ಯವಾಗಿರುವ ಹಾಗೂ ಇತ್ತೀಚಿನ ವರ್ಷಗಳಲ್ಲಿ ಆಧುನಿಕತೆಯ ಮೆರಗನ್ನು ಪಡೆದಿರುವ ತಮಟೆ(ಹಲಗೆ)ಗಳ ಮಾರಾಟ ಭರ್ಜರಿಯಾಗಿ ನಡೆದಿದೆ.ಹಲಗೆಗಳನ್ನು 300 ರೂಗಳಿಂದ 3ಸಾವಿರ ರೂಗಳವರೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂತು. ಹಲಗೆ ಮಾರಾಟಗಾರ ಜಹೀರ್ ಮಾತನಾಡಿ ಕಳೆದ ಹಲವು ವರ್ಷಗಳಿಗಿಂತ ಈ ವರ್ಷ ಹಲಗೆಗಳ ಮಾರಾಟ ಉತ್ತಮವಾಗಿದೆ, ಗ್ರಾಮೀಣ ಪ್ರದೇಶಗಳ ಸರ್ವಜನಿಕರು ವಿವಿಧ ಅಳತೆಯ ಹಲಗೆಗಳನ್ನು ಕೊಂಡುಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ