ಕೊಪ್ಪಳದ ಬಹಾರ ಪೇಟೆ ಶಾಲೆಯ ವಿದ್ಯಾರ್ಥಿಗಳಿಗೆ ಶೀಘ್ರ ಕನ್ನಡ ಸನ್ನೆ ಬರಹ ತರಬೇತಿ - ಎಸ್.ಜಿ.ಎಮ್. ಪೀರಜಾದೆ.
ಕೊಪ್ಪಳ: ಜು. 30. ನಗರದ ಬಹಾರ ಪೇಟೆ ಶಾಲೆಯಲ್ಲಿ ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಕನ್ನಡ ಸನ್ನೆ ಬರಹ ತರಬೇತಿ ನೀಡುತ್ತೇನೆ ಎಂದು ಕನ್ನಡ ಬೋಧನೆಯ ನೂತನ ವಿಧಾನ ಸಂಶೋಧಕ ಹಾಗೂ ಕನ್ನಡ ನಿವೃತ್ತ ಶಿಕ್ಷಕ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಹೇಳಿದರು.
ನಗರದ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಬಹಾರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಸಗಿ ಶಾಲೆಯ ಮಾಲೀಕ ವಿಜಯ್ ಕುಮಾರ್ ಕವಲೂರ ಅವರು ತಮ್ಮ ಮಗಳು ನೇಹಾ (ನಿಧಿ)ಜನ್ಮದಿನದ ಅಂಗವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್. ಪೆನ್ಸಿಲ್.ರಬ್ಬರ್ ಮುಂತಾದ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರು ಮುಂದುವರೆದು ಮಾತನಾಡಿ ನಾನು ಇದೇ ಊರಲ್ಲಿ ಹುಟ್ಟಿ ಬೆಳೆದಿದ್ದು. ಕೊಪ್ಪಳದ ಬಹಾರ ಪೇಟೆ ಶಾಲೆಯಿಂದಲೆ ಕನ್ನಡ ಸರಳವಾಗಿ ಕಲಿಯುವ ಆಸಕ್ತಿ ಹುಟ್ಟಿಸುವ ನೂತನ ಬೋಧನಾ ವಿಧಾನದ ತರಬೇತಿ ನೀಡುತ್ತೇನೆ. ರಾಯಚೂರಿನ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿದ್ದಾಗ ಎರಡನೇ ತರಗತಿಯ ಉರ್ದು ಮಾಧ್ಯಮದ ವಿದ್ಯಾರ್ಥಿನಿ ಕನ್ನಡ ಕಲಿಯಲು ಬಂದಾಗ ನೀನು ನನ್ನ ಕಣ್ಣಿಗೆ ಹೇಗೆ ಕಾಣುತ್ತಿ ಗೊತ್ತಾ ? ಕರ್ರಿಗೆ ಕಪ್ಪಾಗಿ ಕಾಣತಿ ನೀನು ಕಾಲಿ ಕಿಟ್ಟ ಅಂತ ಹೆಸರಿಟ್ಟೆ. ಯಾಕ್ರಿ ಸರ್ ನಾನು ಇಷ್ಟು ಸುಂದರವಾಗಿದ್ದೀನಿ ಅಂದಾಗ ನಾನಂದೆ ನೋಡವ್ವ ಇದು ಬಣ್ಣ ಏನೂ ಇಲ್ಲ. ನಿನ್ನ ಜೊತೆ ವಿದ್ಯೆ ಇದ್ದರೆ ಮಾತ್ರ ನಿನ್ನ ಸೌಂದರ್ಯಕ್ಕೆ ಬೆಲೆ ಬರುತ್ತದೆ ಎಂದು ಹೇಳಿದ್ದೆ.
ಅನೇಕ ವರ್ಷಗಳ ನಂತರ ಬಂದು ನಮಸ್ಕರಿಸಿ ಭೇಟಿಯಾಗಿ ಮಾತನಾಡಿದಾಗ ನನಗೆ ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ನೀವು ನನಗೆ ಕಪ್ಪಾಗಿದ್ದಿ ಎಂದು ಹೇಳಿ ತಮಾಷೆ ಮಾಡಿದ್ದೀರಿ ಅದನ್ನು ನಾನು ಸವಾಲ್ ಆಗಿ ತೆಗೆದುಕೊಂಡು ಹೆಚ್ಚು ಗಮನ ಕೊಟ್ಟು ಓದಿದ್ದರಿಂದ ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಂತೋಷದಿಂದ ಹೇಳಿದ್ದನ್ನು ಕೇಳಿ ನನ್ನ ಬೋಧನೆ ಸಾರ್ಥಕವಾಯಿತೆಂದು ಸಂತೃಪ್ತನಾದೆ ಎಂದು ತಮ್ಮ ಅನುಭವ ಹಂಚಿಕೊಂಡರು. ವಿಜಯ ಕವಲೂರ ಅವರ ಮಗಳು ನೇಹಾ ಹುಟ್ಟುಹಬ್ಬವು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಅರ್ಥವತ್ತಾಗಿ ಆಚರಿಸಿಕೊಳ್ಳುತ್ತಿದ್ದು. ಮುಂದೆ ವಿದ್ಯಾ ನಿಧಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಿ.ಎಸ್.ಗೋನಾಳ ಮಾತನಾಡಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿ ಕೊಡುವ ಮೂಲಕ ಮಗಳ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿದೆ. ಬಹಾರ ಪೇಟೆ ಶಾಲೆಗೆ ಹಲವಾರು ಸೌಲಭ್ಯಗಳು ನಾವೆಲ್ಲರೂ ಕೂಡಿ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡ ಸೈಯ್ಯದ್ ನಸಿರುದ್ದೀನ್ ಹುಸೇನಿ ಮಾತನಾಡಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ತುಂಬಾ ಅಗತ್ಯವಿದೆ. ನಗರ ಸಭೆಯ ಸ್ಥಳೀಯ ಸದಸ್ಯರು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ವಿಜಯ್ ಕುಮಾರ್ ಕವಲೂರ ಈ ಹಿಂದೆ ಕಾರ್ಯಕ್ರಮದಲ್ಲಿ ಬಹಾರ ಪೇಟೆ ಶಾಲೆಯ ಎಲ್ಲಾ ಮಕ್ಕಳಿಗೂ ಶೈಕ್ಷಣಿಕ ಸಾಮಗ್ರಿಗಳನ್ನು ಕೊಡುತ್ತೇನೆ ಎಂದು ಹೇಳಿದಂತೆ ತಮ್ಮ ಮಗಳಾದ ನೇಹಾ (ನಿಧಿ)ಹುಟ್ಟು ಹಬ್ಬದ ಅಂಗವಾಗಿ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ. ಈ ಹಿಂದಿನ ಕಾರ್ಯಕ್ರಮದಲ್ಲಿ ಸೈಯ್ಯದ್ ಮೊಹಮ್ಮದ್ ಹುಸೇನಿ ಅವರು ಒಂದು ನೂರು 'ಕಲಿ ಕನ್ನಡ"ಎಂಬ ಅಂಕಲಿಪಿ ಹಾಗೂ ಸಾಧಿಕ್ ಹುಸೇನ್ ಅತ್ತಾರ್ ಅವರು ಶುದ್ಧ ಕುಡಿಯುವ ನೀರಿನ ಘಟಕ ಒದಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಶಾಲೆಯಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಅನೇಕರಿದ್ದಾರೆ. ಇಲ್ಲಿಯ ಶಿಕ್ಷಕರೂ ಏನೇನೋ ಓದಲು.ಬರೆಯಲು ಬಾರದಂತಹ ಮಕ್ಕಳಿಗೆ ಹೆಚ್ಚು ಒತ್ತು ಕೊಟ್ಟು ಬೋಧಿಸಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗುವಂತೆ ತಯಾರಿಸಬೇಕೆಂದು ಹೇಳಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಮಾತನಾಡಿ ಶಾಲೆ ಪಕ್ಕದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ನಗರ ಸಭೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು. ಎರಡು ವಾರದಲ್ಲಿ ಚಾಲನೆ ಸಿಗಲಿದೆ ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಬಸವರಾಜ್ ಕೊಪ್ಪಳ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ.ಇನ್ನು ಮುಂದೆ ವಿದ್ಯಾರ್ಥಿಗಳು ಮೊಬೈಲ್ ಕಮ್ಮಿ. ಓದೋದು ಹೆಚ್ಚು ಮಾಡಿ. ಉನ್ನತ ಸ್ಥಾನದಲ್ಲಿ ಉತ್ತೀರ್ಣರಾಗಿ ತಂದೆ ತಾಯಿಗಳಿಗೆ ಒಳ್ಳೆ ಹೆಸರು ತರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ.ಉ.ಸುರ್ವೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ನಿವೃತ್ತ ಶಿಕ್ಷಕ ಉಮೇಶ್ ಸುರ್ವೆ ನಿರೋಪಿಸಿದರು. ಕೊನೆಯಲ್ಲಿ ಶಿಕ್ಷಕಿ ಅನುರಾಧ ಕುಲಕರ್ಣಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ