ರಾಮಸ್ವಾಮಿ ವೆಂಕಟರಾಮನ್ ಸ್ಮರಣೆ
ಬಳ್ಳಾರಿ: ದೇಶಭಕ್ತಿ, ದೇಶಾಭಿಮಾನ,ದೇಶಪ್ರೇಮದ ಪಾಠಗಳನ್ನು ಮನೆಯಿಂದಲೇ ಕಲಿತು, ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಜಕಾರಣಿಯಾಗಿ, ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ, ಉಪರಾಷ್ಟ್ರಪತಿಯಾಗಿ ಹಾಗೂ 1987 ರಿಂದ 1992ರ ವರೆಗೆ ದೇಶದ ಎಂಟನೇ ರಾಷ್ಟ್ರಪತಿ ಆಗಿ ಆಡಳಿತ ಮಾಡಿದವರು ರಾಮಸ್ವಾಮಿ ವೆಂಕಟರಾಮನ್ ಅಯ್ಯಂಗಾರ್ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರ್. ವೆಂಕಟರಾಮನ್ ಅವರ ಸಾಧನೆ ಹಾಗೂ ಕಿಶೋರಿಯರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ, ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು ತಮಿಳುನಾಡು ರಾಜ್ಯದ ತಾಂಜಾವೂರು ಜಿಲ್ಲೆಯವರಾದ ವೆಂಕಟರಾಮನ್ ಅವರು ಆ ರಾಜ್ಯದ ಮುಖ್ಯಮಂತ್ರಿಗಳಾದ ಕೆ.ಕಾಮರಾಜ್ ಹಾಗೂ ಭಕ್ತವತ್ಸಲ ಅವರ ಸಂಪುಟದಲ್ಲಿ ಕೈಗಾರಿಕಾ, ಕಾರ್ಮಿಕ ,ಹಣಕಾಸು ಇತರೆ ಖಾತೆಗಳ ಸಚಿವರಾಗಿ ಸೇವೆಸಲ್ಲಿಸಿದರು. ಇವರ ಅವಧಿಯಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಿದ್ದರಿಂದ ತಮಿಳುನಾಡು ರಾಜ್ಯದ ಕೈಗಾರಿಕೀಕರಣ ಪಿತಾಮಹ ಎಂದು ಕರೆಯುತ್ತಾರೆ.
ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ 1980 ರಿಂದ 1982ರ ವರೆಗೆ ಕೇಂದ್ರದ ಹಣಕಾಸು ಸಚಿವರಾಗಿ,1982 ರಿಂದ 1984ರ ವರೆಗೆ ಕೇಂದ್ರದ ರಕ್ಷಣಾ ಸಚಿವರಾಗಿದ್ದಾಗ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಜವಾಬ್ದಾರಿವಹಿಸಿಕೊಂಡು ಆಕಾಶ್,ಪೃಥ್ವಿ, ಅಗ್ನಿ, ತ್ರಿಶೂಲ್,ನಾಗ್ ಕ್ಷಿಪಣಿ ಅಭಿವೃದ್ಧಿ ಪಡೆಸಿದರು.1984 ರಿಂದ 1987ರ ವರೆಗೆ ಉಪರಾಷ್ಟ್ರಪತಿಯಾಗಿ 1987 ರಿಂದ 1992 ರವರೆಗೆ ದೇಶದ ಎಂಟನೇ ರಾಷ್ಟ್ರಪತಿಯಾಗಿ ಆಡಳಿತ ಮಾಡಿದ ಸಚಾರಿತ್ರ್ಯವುಳ್ಳ, ಶುದ್ಧ ಹಸ್ತ ರಾಜಕಾರಣಿ ಹಾಗೂ ಆರ್ಥಿಕ ತಜ್ಞರಾಗಿದ್ದರು ಎಂದು ಹೇಳಿದರು.
ಆದ್ದರಿಂದ ವಿದ್ಯಾರ್ಥಿಗಳು ದೇಶಾಭಿಮಾನದ ಜೊತೆಗೆ ದೂರದೃಷ್ಟಿಯ ಗುರಿ ಹೊಂದಿರಬೇಕು ಎಂದು ಹೇಳಿದರು.
ಕಿಶೋರಿಯರಾದ ಚಂದನ,ಹುಲಿಗೆಮ್ಮ,ಸಹನ,ಚಂದು,ಮೀನಾಕ್ಷಿ ಹಾಗೂ ಮೀನಾಕ್ಷಿ ಅವರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ವಿ.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಚನ್ನಮ್ಮ ಪೂಜೆ ನೆರವೇರಿಸಿದರು.
ಶಿಕ್ಷಕರಾದ ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಸುಮತಿ,ಸುಧಾ, ವೈಶಾಲಿ,ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ,ಸಣ್ಣ ದುರ್ಗೇಶ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ