*ಅಧಿಕಾರಿಗಳೊಂದಿಗೆ ಸಭೆ: ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲನೆ*


ಕೊಪ್ಪಳ ಜುಲೈ 14 (ಕರ್ನಾಟಕ ವಾರ್ತೆ): 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ, ರಸಗೊಬ್ಬರ ವಿತರಣೆ ಸೇರಿದಂತೆ ಇನ್ನಿತರ ವಿಷಯಗಳು ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಜುಲೈ 14ರಂದು ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, 2023-24ನೇ ಸಾಲಿನಲ್ಲಿ ಬೆಳೆವಾರು ಬೀಜ ಬಿತ್ತನೆ ಪ್ರಗತಿ, ತಾಲೂಕುವಾರು ಬಿತ್ತನ ಬೀಜ ದಾಸ್ತಾನು ಮತ್ತು ವಿತರಣೆ, ತಾಲೂಕುವಾರು, ಮಾಹೆವಾರು ರಸಗೊಬ್ಬರ ಹಂಚಿಕೆ, ದಾಸ್ತಾನು ಮತ್ತು ಮಾರಾಟದ ವಿವರ, ಇ-ಕೆವೈಸಿ ಪ್ರಗತಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು.

ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಬಿತ್ತನೆಗೆ ಪೂರಕವಾದಷ್ಟು ಮಳೆ ಬೀಳದಿದ್ದ ಪಕ್ಷದಲ್ಲಿ ಭೂಮಿಗೆ ತಕ್ಕಂತೆ ಬೆಳೆ ತೆಗೆಯಲು, ಸಜ್ಜೆ, ನವಣೆ, ಸಾಮೆಯಂತಹ ಸಿರಿಧಾನ್ಯಗಳನ್ನು ಬಿತ್ತನೆ ಮಾಡಲು, ವಾತಾವರಣಕ್ಕೆ ಹೊಂದಿಕೊಳ್ಳುವ ವಿವಿಧ ತಳಿಯ ಬಹುವಿಧದ ಬೆಳೆಗಳ ಬೀಜ ಬಿತ್ತನೆ ಮಾಡಲು ಮತ್ತು ಈಗಾಗಲೇ ಬಿತ್ತನೆಯಾಗಿ ಮೊಳಕೆ ಸೇರಿದಂತೆ ವಿವಿಧ ಹಂತಗಳಲ್ಲಿ ಇರುವ ಬೆಳೆಗಳಿಗೆ ತಗುಲುವ ರೋಗಗಳ ಬಗ್ಗೆ ಪತ್ತೆ ಹಚ್ಚಿ ಅದಕ್ಕೆ ಔಷಧೋಪಚಾರದ ಬಗ್ಗೆ ರೈತರಿಗೆ ಸಲಹೆ ಮಾಡಬೇಕು ಎಂದು ತಿಳಿಸಿದರು.

ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಸೇರಿದಂತೆ ರೈತರಿಗೆ ಗುಣಮಟ್ಟದ ಕೃಷಿ ಪರಿಕರ ಸಿಗುವುದಕ್ಕೆ ಕ್ರಮ ವಹಿಸಬೇಕು.

2022-23ನೇ ಸಾಲಿನಿಂದ ಜಾರಿ ಇರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ಕೊಡಬೇಕು. ಬೆಳೆ ನಷ್ಟ ಅನುಭವಿಸಿದಲ್ಲಿ ಬೆಳೆವಿಮೆ ಸೌಲಭ್ಯ ಪಡೆಯಲು ರೈತರಿಗೆ ಸಲಹೆ ಮಾಡಬೇಕು. ಬೆಳೆವಿಮೆ ಸೇರಿದಂತೆ ಇನ್ನೀತರ ಕೃಷಿ ಸಂಬಂಧಿ ಸೌಕರ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಫ್‌ಐಡಿ ಹೊಂದುವ ಬಗ್ಗೆ ಸಹ ರೈತ ವರ್ಗಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ಮಾಡಿದರು.

ಮಳೆಯಾದ ಕಡೆಗಳಲ್ಲಿ ಕೊರತೆಯಾಗದಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಾಗಬೇಕು. ಸಹಾಯಧನದಡಿಯಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ 20 ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಹೆಚ್ಚುವರಿ ತೆರೆದಿರುವ ಇತರೆ ಏಳು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತಸ್ನೇಹಿ ವಾತಾವರಣ ಇರಬೇಕು. ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಏನೇ ಸೌಲಭ್ಯ ಕೇಳಿ ಬರುವ ರೈತರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.

ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾದಲ್ಲಿ ಅಧಿಕಾರಿಗಳೇ ಖುದ್ದು ಭೇಟಿ ನೀಡಿ ಬೆಳೆಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ತಹಸೀಲ್ದಾರ ಅವರಿಗೆ ವರದಿ ಸಲ್ಲಿಸಬೇಕು. ಪರಿಹಾರ ಪೋರ್ಟಲನಲ್ಲಿ ಬೆಳೆ ನಷ್ಟದ ವಿವರವನ್ನು ಅಪಲೋಡ್ ಮಾಡುವ ಕಾರ್ಯವು ಸಕಾಲಕ್ಕೆ ನಡೆಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಪತ್ತು ಪರಿಸ್ಥಿತಿ ಎದುರಾದಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಸಮರ್ಪಕ ಮೇವಿನ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಮೇವಿನ ಲಭ್ಯತೆಯ ಬಗ್ಗೆ ಗಮನ ಹರಿಸಬೇಕು. ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವ ಎಲ್ಲಾ ಲಸಿಕಾ ಕಾರ್ಯಕ್ರಮಗಳನ್ನು ನಿಗದಿಪಡಿಸಿದ ಅವಧಿಯಲ್ಲಿಯೇ ಜಿಲ್ಲೆಗೆ ನಿಗದಿಪಡಿಸುವ ಗುರಿಯನುಸಾರ ಪೂರ್ಣಗೊಳಿಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

*ಬೀಜ ಬಿತ್ತನೆ ಪ್ರಗತಿ:* ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳು ಸೇರಿ ಒಟ್ಟು 3,08,000 ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿಯ ಪೈಕಿ ಇದುವರೆಗೆ 1,25,462 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಅಲಸಂದಿ, ಹೆಸರು, ಮಡಿಕೆ, ಶೆಂಗಾ, ಸೂರ್ಯಕಾಂತಿ, ಗುರೆಳ್ಳು, ಔಡಲು, ಹತ್ತಿ, ಕಬ್ಬು ಬೆಳೆಗಳು ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು

*ಬೀಜ-ರಸಗೊಬ್ಬರ ವಿವರ:* ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಜುಲೈ 13ರವರೆಗೆ 563.55 ಕ್ವಿಂಟಲ್ ಭತ್ತದ ಬೀಜ ಮಾರಾಟವಾಗಿದ್ದು 237.70 ಕ್ವಿಂಟಲ್ ದಾಸ್ತಾನು ಇದೆ. 4852.76 ಕ್ವಿಂಟಲ್ ಮೆಕ್ಕೆಜೋಳ ಮಾರಾಟವಾಗಿದ್ದು 1467.24 ಕ್ವಿಂಟಲ್ ದಾಸ್ತಾನು ಇದೆ. 452.56 ಕ್ವಿಂಟಲ್ ಸಜ್ಜೆ ಬೀಜ ಮಾರಾಟವಾಗಿದ್ದು 150.81 ಕ್ವಿಂಟಲ್ ದಾಸ್ತಾನು ಇದೆ. 5.68 ಕ್ವಿಂಟಲ್ ನವಣೆ ಮಾರಾಟವಾಗಿದ್ದು 4.92 ಕ್ವಿಂಟಲ್ ದಾಸ್ತಾನು ಇದೆ. 123.16 ಕ್ವಿಂಟಲ್ ಹೆಸರು ಬೀಜ ಮಾರಾಟವಾಗಿದ್ದು 48.84 ಕ್ವಿಂಟಲ್ ದಾಸ್ತಾನು ಇದೆ. 677.20 ಕ್ವಿಂಟಲ್ ತೊಗರಿ ಬೀಜ ಮಾರಾಟವಾಗಿದ್ದು 282.10 ಕ್ವಿಂಟಲ್ ದಾಸ್ತಾನು ಇದೆ. 22.81 ಕ್ವಿಂಟಲ್ ಸೂರ್ಯಕಾಂತಿ ಬೀಜ ಮಾರಾಟವಾಗಿದ್ದು 105.95 ಕ್ವಿಂಟಲ್ ದಾಸ್ತಾನು ಇದೆ. ಅದೇ ರೀತಿ ಜುಲೈ 13ರವರೆಗೆ ಜಿಲ್ಲೆಯಲ್ಲಿ 23,332 ಮೆ.ಟನ್ ಯೂರಿಯಾ, 12,750 ಮೆ.ಟನ್ ಡಿಎಪಿ, 1325 ಮೆ.ಟನ್ ಎಂಓಪಿ, 32,803 ಮೆ.ಟನ್ ಎನ್‌ಕೆಪಿಎಸ್ ಮತ್ತು 411 ಮೆ.ಟನ್ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

*ಬೆಳೆವಿಮಾ ಯೋಜನೆ ಅನುಷ್ಠಾನ*: ಬೆಳೆವಿಮೆ ಮಾಡಿಸಿದ ಎಲ್ಲಾ ರೈತರು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆವಿಮೆ ನಷ್ಟ ಪಡೆಯಲು ಅರ್ಹರಿದ್ದು, 2023-24ನೇ ಸಾಲಿನಲ್ಲಿ 17,066 ರೈತರು ವಿಮಾ ಕಂತು ಪಾವತಿಸಿದ್ದಾರೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ಅಧಿಸೂಚನೆ ಹೊರಡಿಸಿದಂತೆ ಹತ್ತಿ ಮತ್ತು ಹೆಸರು ಹೊರತುಪಡಿಸಿ ಉಳಿದ ಬೆಳೆಗಳಿಗೆ ಬೆಳೆ ವಿಮೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ಶೇ.76.00 ರೈತರು ಇ-ಕೆವೈಸಿ ಮಾಡಿಸಿದ್ದಾರೆ. ಇ-ಕೆವೈಸಿ ಮಾಡಿಸಲು ಅವಧಿಯನ್ನು ವಿಸ್ತರಿಸಿದ್ದು, ಬಾಕಿ ಇರುವ 39,189 ರೈತರು ಸಹ ಇ-ಕೆವೈಸಿ ಮಾಡಿಸಿಕೊಳ್ಳಲು ತಿಳಿಸಲಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಕೃಷಿ, ತೋಟಗಾರಿಕಾ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ