ದಿನಕ್ಕೊಂದು ವಚನ-ವೇದಕ್ಕೆ ಒರೆಯ ಕಟ್ಟುವೆ-ಬಸವಣ್ಣನವರ 717ನೆಯ ವಚನ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗವಳನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ,ಆಗಮದ ಮೂಗ ಕೊಯಿವೆ, ನೋಡಯ್ಯಾ
ಮಹಾದಾನಿ ಕೂಡಲ ಸಂಗಮದೇವಾ,ಮಾದಾರ ಚೆನ್ನಯ್ಯನ ಮನೆಯ ಮಗ ನಾನಾಯ್ಯಾ
ವೇದೋಪನಿಷತ್ತುಗಳ ಕುರಿತು ಕಟು ಟೀಕೆಮಾಡಿರುವ ಬಸವಣ್ಣನವರ ೭೧೭ನೆಯ ವಚನ ಇದು. ಇದರ ಅರ್ಥ ವೇದಶಾಸ್ತ್ರಗಳನ್ನು ಅತಿಯಾಗಿ ಬಿಂಬಿಸಲಾಗಿದೆ. ದೇವರಿಗಿಂದ ವೇದಶಾಸ್ತ್ರಗಳು ದೊಡ್ಡವು ಎಂಬಂತೆ ಜನ ನೆದುಕೊಳ್ಳುತ್ತಿದ್ಧಾರೆ. ಇದನ್ನೇ ಬಸವಣ್ಣನವರು ಟೀಕಿಸುತ್ತಾರೆ.ಜೊತೆಗೆ ವರ್ಣ ವ್ಯವಸ್ಥೆಯನ್ನು ಟೀಕಿಸಲು ಜಾತಿಯಲ್ಲಿ ಅತಿ ಕೀಳು ಎಂದು ಅಂದು ಪರಿಗಣಿಸಲ್ಪಟ್ಟ ಮಾದಾರ ಚೆನ್ನಯ್ಯನ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂಬಂತೆ ಬಸವಣ್ಣನವರು ಹೇಳುತ್ತಾರೆ.
ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವ ಪರಿ ಬೆಳೆಸಿಕೊಟ್ಟ ವೇದಗಳನ್ನು ಒರೆಕಟ್ಟುವೆ ಎಂದು ಬಸವಣ್ಣ ಹೇಳುವರು. ಇದರರ್ಥ ನಾನು ಅವಕ್ಕೆ ಬೆಲೆ ಕೊಡಲಾರೆ ಎಂಬುದಾಗಿದೆ.
ಇನ್ನು ಶಾಸ್ತ್ರಗಳನ್ನು ಕಟ್ಟಿಹಾಕುವೆ ಎನ್ನುವ ಬಸವಣ್ಣ ತರ್ಕದ ಬೆನ್ನ ಮೇಲೆ ಬಾರುಕೋಲಿನ ಪೆಟ್ಟು ನೀಡುವೆ ಎನ್ನುತ್ತಾರೆ. ವೇದಗಳ ಮೇಲೆ ಒರೆಕಟ್ಟುವೆ ಎಂದರೆ ಮೊನಚಾದ ಕತ್ತಿ ಮಸೆಯುವೆ ಎಂತಲೂ ಅರ್ಥ ಬರುತ್ತದೆ. ಇನ್ನು ಇದರ ಜೊತೆಗೆ ಆಗಮದ ಮೂಗು ಕೊಯ್ಯುವ ಮಾತನ್ನೂ ಬಸವಣ್ಣ ಇಲ್ಲಿ ಹೇಳುತ್ತಾರೆ.
ಒಟ್ಟಾರೆ ಈ ವಚನದಲ್ಲಿ ಬಸವಣ್ಣನವರು ವೇದ, ಶಾಸ್ತ್ರ, ಆಗಮಗಳು ಮನುಷ್ಯನ ಪ್ರೀತಿಗೆ ಅಡ್ಡಿಯಾಗುವುದಾದರೆ ಅವನ್ನು ನಾನು ಗಾಳಿಗೆ ತೂರುವೆ ಎಂಬಂತೆ ಹೇಳಿದ್ದಾರೆ.
ಮನುಷ್ಯ ಮನುಷ್ಯರ ನಡುವೆ ಮೇಲು, ಕೀಳು ಬಿಂಬಿಸುವ ಯಾವುದೇ ಧಾರ್ಮಿಕ ಗ್ರಂಥಗಳ ಅನುಸರಣೆಯಿಂದ ದೇವರು ಖುಷಿಯಾಗಲಾರ. ಮನುಷ್ಯ ತನ್ನವರೊಂದಿಗೆ ಪ್ರೀತಿಯಿಂದ, ಯಾವುದೇ ಅಡ್ಡಿ, ಆತಂಕ ಇಲ್ಲದೆ ಬದುಕುವಂತೆ ಆಗಬೇಕು. ಅಂತಹ ಪ್ರೀತಿ, ಕಕ್ಕುಲಾತಿಗೆ ಧರ್ಮ, ದೇವರು ಎಂದೂ ಅಡ್ಡಿಯಾಗಲಾರ ಎಂಬುದನ್ನು ಬಸವಣ್ಣ ಈ ಪ್ರತಿಪಾದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ