ಲಿಂಗಾಯತ ಮಠಗಳು ಇರದಿದ್ದರೆ ಶಿಕ್ಷಣ ಮರೀಚಿಕೆ?



ವೀರಶೈವ ಲಿಂಗಾಯತ ಎಂಬ ಧರ್ಮ ಇರದಿದ್ದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಹೇಗಿರುತ್ತಿತ್ತು? ಊಹಿಸಿಕೊಳ್ಳುವುದು ಕಷ್ಟ ಎನ್ನಿಸುತ್ತದೆ. ವೀರಶೈವ ಲಿಂಗಾಯತ ಸಮಾಜದ ಮಠ, ಮಾನ್ಯಗಳು ಇಂದು ಬರೀ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿಲ್ಲ; ಬದಲಿಗೆ ಬಸವಾದಿ ಶರಣರು ಹೇಳಿದ ದಾಸೋಹಗಳ ಸಾಲಿಗೆ ಶಿಕ್ಷಣ ದಾಸೋಹ ಸೇರಿಸಿಕೊಂಡು ನಾಡಿನ ಶಿಕ್ಷಣದ ಕೊರತೆ ನೀಗಿಸಿದ್ದಾರೆ. 

ಇಂದು ನಾಡಿನಲ್ಲಿ ಇರುವ ಪ್ರತೀ ವೀರಶೈವ ಲಿಂಗಾಯತ ಮಠವೂ ತನ್ನದೇ ಆದ ರೀತಿಯಲ್ಲಿ ಶಿಕ್ಷಣಕ್ಕೆ ಕೊಡುಗೆ ನೀಡುತ್ತಾ ಬಂದಿವೆ. ಸಿದ್ಧಗಂಗಾ ಮಠದಲ್ಲಿ ಸಾವಿರಾರು ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ನಾಡಿನಲ್ಲಿ ಮೊಟ್ಟ ಮೊದಲು ವಿದ್ಯಾರ್ಥಿ ನಿಲಯ ಆರಂಭಿಸಿದವರು ಚಿತ್ರದುರ್ಗ ಮುರುಘಾ ಮಠದ ಜಯದೇವ ಜಗದ್ಗುರುಗಳು ಎಂಬುದನ್ನು ಸ್ಮರಿಸಲೇಬೇಕು.

ಇದೇ ಮುರುಘಾ ಮಠ ಇಂದು ಮಧ್ಯ ಕರ್ನಾಟಕದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಶಿಕ್ಷಕರ ತರಬೇತಿ ಕೇಂದ್ರ ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡುತ್ತಾ ಸಾಗಿವೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮೊದಲ ವೈದ್ಯಕೀಯ ಕಾಲೇಜು ಆರಂಭ ಮಾಡಿದ್ದೂ ಸಹ ಇದೇ ಮುರುಘಾ ಮಠ.

ಇನ್ನು ಮೈಸೂರು ಸತ್ತೂರು ಜೆಎಸ್‌ಎಸ್ ಮಠ ಸಹ ಇದೇ ರೀತಿಯ ಶಿಕ್ಷಣ ದಾಸೋಹ ಮಾಡಿಕೊಂಡು ಬಂದಿವೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠ ಸೇರಿದಂತೆ ಹಲವು ಮಠಗಳು ನಿರಂತರವಾಗಿ ಶಿಕ್ಷಣ ಸೇವೆ ಮಾಡಿಕೊಂಡು ಬಂದಿವೆ.

ಸಿರಿಗೆರೆಯ ಮಠದಿಂದ ನಡೆಸಲ್ಪಡುವ ಶಾಲಾ, ಕಾಲೇಜುಗಳಲ್ಲಿಯೇ ಬರೋಬ್ಬರಿ 32 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಇದೇ ರೀತಿ ಮೈಸೂರಿನ ಜೆಎಸ್‌ಎಸ್ ಪೀಠ ನಡೆಸುವ ಸುಮಾರು 300 ಶಾಲಾಕಾಲೇಜಿನಲ್ಲಿ 20 ಸಾವಿರದ ಸನಿಹ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹೀಗೆ ಹೇಳುತ್ತಾ ಹೋದರೆ ನೂರಾರು ಮಠಗಳು ತಮ್ಮದೇ ಆದ ಸಾಮರ್ಥ್ಯದಲ್ಲಿ ಶಿಕ್ಷಣ ದಾಸೋಹ ಮಾಡಿಕೊಂಡು ಬರುತ್ತಿವೆ. ರಾಜ್ಯದ ಪ್ರತೀ ಮೂಲೆಯಲ್ಲೂ ಲಿಂಗಾಯತ ಮಠಗಳು ಇವೆ. ಎಲ್ಲಾ ಮಠಗಳು ಬಹುತೇಕ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿವೆ. ಒಂದು ವೇಳೆ ಈ ಮಠಗಳು ಇಲ್ಲವಾಗಿದ್ದರೆ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆ ಬಹುಶಃ ಉತ್ತರ ಪ್ರದೇಶ, ಬಿಹಾರದಂತೆ ಇರುತ್ತಿತ್ತೋ ಏನೋ ಅಲ್ವಾ? ಇದೇ ಕಾರಣಕ್ಕೆ ನಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕುಂ.ವೀರಭದ್ರಪ್ಪ ಅವರು ಈ ರೀತಿ ಉದ್ಗರಿಸಿದ್ದಾರೆ ಅನ್ನಿಸುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ