ಉದ್ಯೋಗ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಮನವಿ
ಮಸ್ಕಿ : ಎರಡು ದಶಕಗಳ ನರಕಯಾತನೆಗೆ ಕೊನೆಯಾವಾಗ? ರಾಜ್ಯದ ಸರಕಾರಿ ಪದವಿಕಾಲೇಜುಗಳ ಅತಿಥಿ ಉಪನ್ಯಾಸಕರ ಎರಡು ದಶಕಗಳ ಬೇಡಿಕೆಗಳನ್ನು ಈಡೇರಿಸಿ ನಮಗೊಂದು ನೆಮ್ಮದಿಯುತ ಜೀವನ ಕಲ್ಪಿಸಿ ಎಂದು ಕರ್ನಾಟಕ ರಾಜ್ಯ ಸರಕಾರಿ ಪದವಿಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಮಸ್ಕಿ ತಾಲೂಕಾ ಘಟಕದ ತಾಲೂಕಾ ಅಧ್ಯಕ್ಷ ಸುರೇಶ ಬಳಗಾನೂರು ಸರಕಾರಕ್ಕೆ ಒತ್ತಾಯಿಸಿದರು.
ಗುರುವಾರ ಮಧ್ಯಾಹ್ನ ಮಸ್ಕಿಯ ಶಾಸಕರಿಗೆ,ತಹಸಿಲ್ದಾರರಿಗೆ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿಪತ್ರಗಳನ್ನು ನೀಡಿ ಅವರು ಮಾತನಾಡಿದರು.ನಂತರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ರಾಮಣ್ಣ ನಾಯಕ ರಂಗಾಪೂರು ಮಾತನಾಡಿ ದೇಶದ ಭವಿಷ್ಯ ರೂಪಿಸುವ ಉಪನ್ಯಾಸಕರಿಗೇ ಈ ರೀತಿ ಅಭದ್ರತೆಯ ಜೀವನ ಸರಕಾರಗಳು ದಯಪಾಲಿಸಿದರೆ ದೇಶ ಹೇಗೆತಾನೆ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವೆಂದು ಕಳವಳ ವ್ಯಕ್ತಪಡಿಸಿದರು.ನಂತರ ಹಿರಿಯ ಅತಿಥಿ ಉಪನ್ಯಾಸಕರಾದ ಪ್ರಭುದೇವ ಸಾಲಿಮಠ ಮಾತನಾಡಿ ಇದು ಇಂದು ನಿನ್ನೆಯದಲ್ಲ ಕಳೆದ ಇಪ್ಪತ್ತು ವರ್ಷಗಳಿಂದ ಅಭದ್ರತೆ ಶೋಷಣೆ ಅತಿಥಿ ಉಪನ್ಯಾಸಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ, ಪದವೀಧರರು ನೆಲೆಯಿಲ್ಲದೆ ಪರದಾಡುವಂತಾಗಿದೆ.
ಕೂಡಲೆ ಅವರಿಗೆ ಸೇವಾಭದ್ರತೆ ನೀಡಿ ಉತ್ತಮ ಜೀವನಕ್ಕೆ ರಹದಾರಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಹುಚ್ಚೇಶ ನಾಗಲೀಕರ ಮಾತನಾಡಿ ಸಮಸಮಾಜ ನಿರ್ಮಾಣದ ಕನಸನ್ನು ಹೊತ್ತ ಈ ಸರಕಾರ ಹದಿನಾಲ್ಕುಸಾವಿರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಸಮಾಜವಾದಿ ಸರಕಾರ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಕಳೆದೆರಡು ದಶಕಗಳಿಂದ ರಾಜ್ಯದ ಸುಮಾರು 412 ಕ್ಕೂ ಅಧಿಕ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,000 ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಡಿಮೆ ವೇತನಕ್ಕೆ ಅಧಿಕ ಕಾರ್ಯಭಾರ ಮಾಡುತ್ತಿದ್ದಾರೆ.ಎರಡು ದಶಕಗಳಿಂದ ಉದ್ಯೋಗ ಭದ್ರತೆ,ಅಥವಾ ಸೇವಾ ವಿಲೀನಾತಿ,ಅಥವಾ ಖಾಯಮಾತಿಗಾಗಿ ಪ್ರತಿಭಟನೆಗಳು ನಡೆದಿದ್ದರೂ ಸ್ಥಾಪಿತ ಸರಕಾರಗಳು ಅತಿಥಿ ಉಪನ್ಯಾಸಕರ ಬಾಳಿಗೆ ನೆಮ್ಮದಿಯನ್ನು ನೀಡುವ ಮನಸು ಮಾಡುತ್ತಿಲ್ಲ.
ಇದೇ ಜಂಜಾಟದಲ್ಲಿ ಅನೇಕ ಅತಿಥಿ ಉಪನ್ಯಾಸಕರು ಅನಾರೋಗ್ಯದಿಂದ ಬಳಲಿ ಸರಿಯಾದ ಚಿಕಿತ್ಸೆಗೆ ಹಣವಿಲ್ಲದೆ ಅಸುನೀಗಿದರು,ಪ್ರತಿವರ್ಷದ ನೇಮಕಾತಿ ಪ್ರಕ್ರಿಯೆಯಲ್ಲಿ ವಂಚಿತರಾಗಿ ಬದುಕು ದುಸ್ತರವಾಗಿ ಆತ್ಮಹತ್ಯಯಂತಹ ಪಾಪದ ಕೃತ್ಯಕ್ಕೆ ಬಲಿಯಾಗಿದ್ದಾರೆ.ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿ ಬಾರ್,ತರಕಾರಿ,ಬೀದಿಬದಿ ವ್ಯಾಪಾರಿ,ನರೆಗಾ ಕೂಲಿಕಾರ್ಮಿಕರಾಗಿ ಕೆಲಸಮಾಡುತ್ತಿದ್ದಾರೆ. ಈ ದುರ್ಗತಿಗೆ ಯಾರು ಹೊಣೆ? ಈಗ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಲಬುರ್ಗಿ,ರಾಯಚೂರು, ಬಳ್ಳಾರಿ ವಿಶ್ವ ವಿದ್ಯಾಲಯಗಳ ವ್ಯಾಪ್ತಿಗೊಳಪಡುವ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರಾಗಿ ನೇಮಕವಾಗಿರುವ ಉಪನ್ಯಾಸಕರುಗಳಿಗೆ ಕಾರ್ಯಭಾರದ ಕೊರತೆಯಿಂದ ಕೆಲಸವಿಲ್ಲದೆ ಹೊರಗುಳಿಯಬೇಕಾದ ಪರಿಸ್ಥಿತಿ ಬಂದಿದೆ.
ಕಳೆದೆರಡು ತಿಂಗಳುಗಳಿಂದ ವೇತನ ಬಿಡುಗಡೆಯಾಗಿಲ್ಲ ಈಗ ಇದೂ ಇಲ್ಲವೆಂದರೆ ಈ ಗಗನ ಮುಖಿಯಾದ ದಿನಬಳಕೆವಸ್ತುಗಳ ಬೆಲೆಯ ಮುಂದೆ ನಮ್ಮ ಕುಟುಂಬದ ನಿರ್ವಹಣೆ ಸಾಧ್ಯವೆ? ಮಾನ್ಯ ಮುಖ್ಯಮಂತ್ರಿಗಳೆ, ಮಾನ್ಯ ಉನ್ನತಶಿಕ್ಷಣ ಸಚಿವರೆ? ಈ ನಮ್ಮ ನರಕಯಾತನೆ ,ಆರ್ಥನಾದ, ಅರಣ್ಯರೋಧನೆ ನಿಮಗೆ ಕೇಳುತ್ತಿಲ್ಲವೆ? ಕೇಳಿದರೂ ಜಾಣಕುರುಡುತನದ ಪ್ರದರ್ಶನವೆ? ಎಲ್ಲವೂ ಅಯೋಮಯವಾಗಿದೆ. ಸಕಲ ರಂಗವೂ ಸಂಪದ್ಭರಿತವಾಗಿರುವಂತೆ ನೋಡಿಕೊಳ್ಳುವುದು ಸಮಾಜವಾದಿ ಸರಕಾರದ ಆದ್ಯಕರ್ತವ್ಯವಾಗಿರುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು,ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಬಾಳ್ವೆಯ ತತ್ವಗಳು ಕೇವಲ ಭಾಷಣಕ್ಕಷ್ಟೆ ಸೀಮಿತವೆ?
ಘನತೆವೆತ್ತ ಕರ್ನಾಟಕ ಸರಕಾರದ ಸಮಸಮಾಜ ನಿರ್ಮಾಣದ ಕನಸುಗಾರರಾದ ಮಾನ್ಯ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ನವರು ಮತ್ತು ಉನ್ನತಶಿಕ್ಷಣ ಸಚಿವರು ದಯಮಾಡಿ ಅತಿಥಿ ಉಪನ್ಯಾಸಕರ ಹುದ್ದೆ ಖಾಯಂ ಮಾಡಿ ನಮಗೆ ಮರುಜೀವ ನೀಡಿ 14,000 ಕುಟುಂಬಗಳ ಖುಷಿಗೆ ನೀವು ಕಾರಣರಾಗಬೇಕೆಂಬುವುದೆ ನಮ್ಮ ಕಳಕಳಿಯ ಮನವಿ ಎಂದು ಪ್ರಾಂಶುಪಾಲರಿಗೆ,ಕ್ಷೇತ್ರದ ಶಾಸಕರಿಗೆ,ತಹಶೀಲ್ದಾರ್ ರಿಗೆ ತಮ್ಮ ಸಂಘದ ಮನವಿ ಪತ್ರವನ್ನು ಸಲ್ಲಿಸಿದರು.
ಒಂದು ವೇಳೆ ನಮ್ಮ ಮನವಿಗೆ ವ್ಯತಿರಿಕ್ತವಾದ ನಿರ್ದಾರ ಬಂದರೆ ರಾಜ್ಯದಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಬೃಹತ್ ಪ್ರಮಾಣದ ಉಗ್ರಹೋರಾಟಕ್ಕೆ ಇಳಿಯಬೇಕಾಗುತ್ತದೆ.ಎಂಬ ಎಚ್ಚರಿಕೆಯ ಸಂದೇಶಗಳುಳ್ಳ ಮನವಿಪತ್ರಗಳನ್ನು ನೀಡಿ ತಮ್ಮ ಅಸಕ್ರೋಶವನ್ನು ಹೊರಹಾಕಿದರು.
ಈ ಪ್ರತಿಭಟನೆಯಲ್ಲಿ ಮಸ್ಕಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾಗಿರುವ ಡಿ,ಕೆ,ಮುಜಾವರ್,ಕಾರ್ಯದರ್ಶಿಗಳಾಗಿರುವ ಶ್ರೀಮತಿ ಅಶ್ವಿನಿ ಮಸ್ಕಿ,ಖಜಾಂಚಿಗಳಾಗಿರುವ ಚನ್ನನಗೌಡ,ಶ್ರೇದೇವಿ ಬಡಿಗೇರ್,ಹುಚ್ಚೇಶ ನಾಗಲೀಕರ್,ರಾಮಣ್ಣ ನಾಯಕ,ಪ್ರಭುದೇವಸಾಲಿಮಠ,ಭೀಮಣ್ಣ ನಾಯಕ,ಅಮರಣ್ಣ ರಾಥೋಡ್,ಶರಣಬಸವ,ಮಲ್ಲೇಶ,ಮಂಜುನಾಥ,ಸೈಯ್ಯದ್ ಹುಸೇನ್,ಡಾ,ಲೋಕೇಶ,ಡಾ,ವಿರುಪನಗೌಡ,ಸಂಜೀವ ಮೂರ್ತಿ,ಪ್ರಶಾಂತ,ವೀರೇಶ,ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ