ಸಾರ್ವಜನಿಕ ದಾರಿ ಒತ್ತುವರಿ ಮಾಡಿಕೊಂಡಿರುವ ಆಧಾರವಿದ್ದರೂ ತೆರವು ಯಾವಾಗ?
ಕೊಟ್ಟೂರು ಪಟ್ಟಣದಲ್ಲಿ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ಕೊಟ್ಟೂರು ಸರ್ವೆ ನಂ. ೮೧೮/೩ ವಿಸ್ತೀರ್ಣ ೦.೬೫ ಎಕರೆ ಹಾಗೂ ಸರ್ವೆ ನಂ. ೧೨೦೨ ವಿಸ್ತೀರ್ಣ ೨.೩೪ ಎಕರೆ ಒಟ್ಟು ೨.೯೯ ಎಕರೆ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತನೆಯಾಗಿದೆ. ಭೂ ಪರಿವರ್ತನೆ ಮಾಡುವಾಗ ಸಾರ್ವಜನಿಕ ರಸ್ತೆಗಾಗಿಯೇ ಸ್ಥಳ ಮೀಸಲಾಗಿಟ್ಟು ನಿವೇಶನಗಳನ್ನು ಮಂಜೂರು ಮಾಡಲಾಗಿರುತ್ತದೆ. ಆದರೆ ಈ ನಿವೇಶನಗಳಲ್ಲಿ ಸಾರ್ವಜನಿಕ ರಸ್ತೆಗಾಗಿ ಮೀಸಲಿಟ್ಟ ಜಾಗವನ್ನು ಪಟ್ಟಣ ಪಂಚಾಯಿತಿಯ ಗಮನಕ್ಕೆ ತರದೇ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ವಿಷಯ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಹಾಗೂ ಹಲವಾರು ಬಾರಿ ಪತ್ರಿಕೆಗಳಲ್ಲಿ ವಿಷಯ ಪ್ರಸ್ತಾಪವಾಗಿದ್ದರ ಪ್ರಯುಕ್ತ ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಥಳೀಯ ಆಡಳಿತಕ್ಕೆ ಸೂಕ್ತ ಪರಿಶೀಲನೆ ಮಾಡಲು ಸೂಚಿಸಿದ್ದು, ಪರಿಶೀಲನೆಯ ನಂತರ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಆದರೂ ಸಹ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿರುವುದು ಯಾತಕ್ಕಾಗಿ? ಎನ್ನುವುದು ಸಾರ್ವಜನಿಕರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಹಿಂದೆ ಕಾಣದ ಕೈಗಳ ಒತ್ತಡ ಇರುವುದು ಸ್ಪಷ್ಟವಾಗಿ ಎದ್ದುಕಾಣುತ್ತಿದ್ದು ವಿಳಂಬ ನೀತಿ ಯಾಕೆ ಎಂದು ಪಿ.ಚಂದ್ರಶೇಖರ್, ಅಜ್ಜಯ್ಯ, ಮಧುನಾಯ್ಕ, ರಮೇಶ್ ಪತ್ರಿಕೆಗೆ ತಿಳಿಸಿದರು.
ಕೋಟ್-೧
ಸಾರ್ವಜನಿಕ ರಸ್ತೆ ಒತ್ತುವರಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಎಂ.ಸಿ.ದಿವಾಕರ್, ಜಿಲ್ಲಾಧಿಕಾರಿ ವಿಜಯನಗರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ