ಬಳ್ಳಾರಿ ಜಿಲ್ಲೆ ಬರಪೀಡಿತ ಎಂದು ಘೋಷಿಸಲು ಕೃಷ್ಣ ಆಗ್ರಹ

 


ಬಳ್ಳಾರಿ:ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಸಂಪೂರ್ಣ ಸ್ತಬ್ಧ ಆಗಿದ್ದು, ರಾಜ್ಯ ಸರ್ಕಾರ ಜಿಲ್ಲೆಯನ್ನು ಬರ ಜಿಲ್ಲೆ ಎಂದು ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣ ತಿಳಿಸಿದ್ದಾರೆ.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೊಗರಿ, ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ ಬೆಳೆ ಬಿಸಿಲಿಗೆ ಒಣಗಿಹೋಗಿವೆ. ತೋಟಗಾರಿಕೆ ಬೆಳೆ ಸಹ ಒಣಗುತ್ತಿವೆ. ಹೀಗಾಗಿ ಸರ್ಕಾರ ಇತ್ತ ಗಮನ ಹರಿಸಬೇಕು ಎಂದರು.

ಪ್ರಕೃತಿಯ ಮುನಿಸು ಒಂದು ಕಡೆ ಆದರೆ ಇನ್ನೊಂದು ಕಡೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಳಪೆ ಬೀಜ, ಗೊಬ್ಬರ ಪೂರೈಕೆ ಆಗುತ್ತಿದ್ದರೂ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇನ್ನು ಈ ಭಾಗದ ಪ್ರಮುಖ ಬೆಳೆಯಾದ ಮೆಣಸಿನಕಾಯಿ ಬೆಳೆ ಸಹ ಕೈಕೊಡುವ ಹಂತದಲ್ಲಿ ಇದೆ. ಮೆಣಸಿನ ಸಸಿಗೆ ಮುದುರು ರೋಗ ಬಂದಿದೆ. ಎಷ್ಟೇ ಮದ್ದು ಸಿಂಪಡಿಸಿದರು ಪ್ರಯೋಜನ ಆಗುತ್ತಾ ಇಲ್ಲ. ಸರ್ಕಾರ ಇಂಥ ಸಮಯದಲ್ಲಿ ರೈತರ ಪರ ನಿಲುವು ತಾಳಬೇಕು ಎಂದು ಅವರು ತಿಳಿಸಿದರು.

ಕೃಷಿ ಇಲಾಖೆ ರೈತರಿಗೆ ನರ್ಸರಿ ಸ್ಥಾಪನೆ ಮಾಡಲು 30 ಲಕ್ಷ ರು ಅನುದಾನ ನೀಡುತ್ತದೆ. ಇದೇ ಯೋಜನೆಗೆ ಸರ್ಕಾರ 6-7 ಕೋಟಿ ರು. ಅನುದಾನವನ್ನು ತೋಟಗಾರಿಕೆ ಇಲಾಖೆ ಮೂಲಕ ಬಿಡುಗಡೆ ಮಾಡುತ್ತದೆ. ಆದರೆ, ಈ ಅನುದಾನ ಯಾವುದೇ ರೈತರಿಗೆ ಸಿಗುತ್ತಿಲ್ಲ ಎಂದು ಅವರು ಕಿಡಿಕಾರಿದರು.

ತಾಲೂಕು ಅಧ್ಯಕ್ಷ ಯರ್ರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ, ಖಜಾಂಚಿ ಕೆ. ಮಾರೆಣ್ಣ, ಎಸ್.ಕೆ.ಗಡಿಲಿಂಗಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ