ಬರ ನಿರ್ವಹಣೆ ಹಿನ್ನೆಲೆ-ಬೆಳೆ ಪರಿಸ್ಥಿತಿ ಖುದ್ದು ಅವಲೋಕಿಸಿದ ಜಿಲ್ಲಾಧಿಕಾರಿ - ನಲಿನ್ ಅತುಲ್

 

ವರದಿ - ಮಂಜುನಾಥ್ ಕೋಳೂರು ಕೊಪ್ಪಳ

ಕೊಪ್ಪಳ ಆಗಸ್ಟ್ 29:- ಕಂದಾಯ ಇಲಾಖೆಯ ಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಆ- 28 ರಿಂದ ಆರಂಭಗೊಂಡು ಆ- 31ರವರೆಗೆ ನಡೆಯಲಿರುವ ಬರ ನಿರ್ವಹಣೆ ಹಿನ್ನೆಲೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆ- 29ರಂದು ಖುದ್ದು ಪರಿಶೀಲಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆ, ತಹಸೀಲ್ದಾರರು, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಕುಕನೂರ ತಾಲೂಕಿನ ತಳಕಲ್, ಬನ್ನಿಕೊಪ್ಪ ಮತ್ತು ಇಟಗಿ ಗ್ರಾಮಗಳಿಗೆ, ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಮತ್ತು ಬಂಡಿ ಗ್ರಾಮಗಳಿಗೆ, ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ಚಳಗೇರಿ ಸೇರಿದಂತೆ ಇನ್ನೀತರ ಗ್ರಾಮಗಳ ರೈತರ ಜಮೀನಿಗೆ ತೆರಳಿ ಬೆಳೆ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದರು.

ತಳಕಲ್ ಗ್ರಾಮದ ರೈತರಾದ ತಿಮ್ಮಾರೆಡ್ಡಿ ಹುನಗುಂದ ಅವರ ಈರುಳ್ಳಿ ಬೆಳೆ, ಮುದಿಯಪ್ಪ ಅವರ ಮುಸುಕಿನ ಜೋಳದ ಬೆಳೆ, ಇಟಗಿ ಗ್ರಾಮದ ರೈತರಾದ ಮಂಜುಯ್ಯ ಸಶಿಮಠ ಅವರ ಈರುಳ್ಳಿ ಬೆಳೆ, ಕಮಲಾಕ್ಷಿ ಅವರ ಮುಸುಕಿನ ಜೋಳದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಹಾನಿಯಾದ ಪ್ರಮಾಣವನ್ನು ಜಿಲ್ಲಾಧಿಕಾರಿಗಳು ಅವಲೋಕಿಸಿದರು. ಯಲಬುರ್ಗಾ, ಕುಷ್ಟಗಿ ತಾಲೂಕುಗಳಲ್ಲಿನ ರೈತರ ಜಮೀನಿಗೆ ಸಹ ತೆರಳಿ ಮೆಕ್ಕೆಜೋಳ, ಸಜ್ಜೆ, ತೊಗರಿ, ಹತ್ತಿ ಮತ್ತು ಶೇಂಗಾ ಬೆಳೆಗಳು ಸಹ ತೇವಾಂಶ ಕೊರತೆಯಿಂದಾಗಿ ಹಾನಿಯಾದ ಬಗ್ಗೆ ವೀಕ್ಷಣೆ ನಡೆಸಿದರು.

ಇದೆ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರದ ಪರಿಷ್ಕೃತ ಬರ ಕೈಪಿಡಿ 2020ರನ್ವಯ ಹಂತ 1 ಮತ್ತು ಹಂತ 2ರಲ್ಲಿ ಸೂಚಿಸಿರುವ ಮಾನದಂಡಗಳ್ವಯ ಪರಿಶೀಲಿಸಿ ಪ್ರಸಕ್ತ ಮುಂಗಾರು ಜೂನ್ 1ರಿಂದ ಆಗಸ್ಟ್ 19ರ ಅವಧಿಯಲ್ಲಿ ರಾಜ್ಯದಲ್ಲಿ ತೀವ್ರ ಬರ ಮತ್ತು ಸಾಧಾರಣ ಬರ ಪರಿಸ್ಥಿತಿ ಕಂಡು ಬಂದಿರುವ ವಿವಿಧ ತಾಲೂಕುಗಳನ್ನು ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳೆಂದು ಗುರುತಿಸಲಾಗಿದೆ. ಮೂರನೇ ಹಂತದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕುಗಳಲ್ಲಿ ಶೇ.10ರಷ್ಟ ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 ಸೈಟ್ಸನ್ನು ಇ ಆಡಳಿತ ಇಲಾಖೆಯ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಮಾಡಲು ತಿಳಿಸಿದ ಪ್ರಕ್ರಿಯೆಯು, ಈ ಹಿಂದೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಆಗಸ್ಟ್ 31ರೊಳಗೆ ಪೂರ್ಣವಾಗಬೇಕು ಎಂದು ಅವರು ಗಡುವು ವಿದಿಸಿದರು.

ಬರ ನಿರ್ವಹಣೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡು ಈಗಾಗಲೇ ರಚಿಸಲಾಗಿರುವ ಜಂಟಿ ಸಮೀಕ್ಷೆ ತಂಡಗಳು, ಕಂದಾಯ ಇಲಾಖೆಯು ಜಂಟಿ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕು. ಮತ್ತು ಸುತ್ತೋಲೆಯಲ್ಲಿ ತಿಳಿಸಿದ ವೇಳಾಪಟ್ಟಿಯನುಸಾರ ನಿಗದಿತ ಅವಧಿಯೊಳಗೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

2023-24ನೇ ಸಾಲಿನಲ್ಲಿ ಬರ ನಿರ್ವಹಣೆ ಕುರಿತಂತೆ ಕೊಪ್ಪಳ ಜಿಲ್ಲೆಯಲ್ಲಿ ನಿಗದಿತ ತಾಲೂಕುಗಳಲ್ಲಿ ಜಂಟಿ ಸಮೀಕ್ಷೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಕೃಷಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡು ರಚನೆಯಾಗಿರುವ ತಂಡಗಳು ವಿವಿಧೆಡೆ ಕಾರ್ಯಪ್ರವೃತ್ತವಾಗಿವೆ. ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಸಲು ಯಲಬುರ್ಗಾ ತಾಲೂಕಿನಲ್ಲಿ 9, ಗಂಗಾವತಿ ತಾಲೂಕಿನಲ್ಲಿ 7, ಕುಷ್ಟಗಿ ತಾಲೂಕಿನಲ್ಲಿ 18, ಕುಕನೂರ ತಾಲೂಕಿನಲ್ಲಿ 6, ಕನಕಗಿರಿ ತಾಲೂಕಿನಲ್ಲಿ 8 ಸೇರಿ ಒಟ್ಟು 48 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ತಲಾ ಒಂದು ಹಳ್ಳಿಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಿ ಮೇಲುಸ್ತುವಾರಿ ನಡೆಸಲಾಗುತ್ತಿದೆ ಎಂದು ಇದೆ ವೇಳೆ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಕುಕನೂರ, ಯಲಬುರ್ಗಾ ಮತ್ತು ಕುಷ್ಟಗಿ ತಹಸೀಲ್ದಾರರು, ಕೃಷಿ ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಕಂದಾಯ ನಿರೀಕ್ಷಕರು ಮತ್ತು ಇನ್ನೀತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ