ರಾಜ್ಯ ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ : ಖಾಸಿಂ ಸರ್ದಾರ್
ವರದಿ ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಆಗಸ್ಟ್ 23 : --ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ದೇಶದಾದ್ಯಂತ ಆ.24ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಭಾಗವಾಗಿ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಹೋರಾಟ ನಡೆಯಲಿದೆ.
'ಬಾಕಿ ಇರುವ 2021-22ನೇ ಶೈಕ್ಷಣಿಕ ಸಾಲಿನ ಅರ್ಜಿಗಳಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು, ಕಾರ್ಮಿಕ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಹಾಗೂ ಹಾಜರಾತಿ ಪಟ್ಟಿ ಕಡ್ಡಾಯ ಮಾಡಲಾಗಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಇದನ್ನು ವಾಪಸ್ ಪಡೆಯಬೇಕು ಎಂದು ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಖಾಸೀಂ ಸರ್ದಾರ್ ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೂ ಜಾರಿಗೊಳಿಸಬೇಕು. ಕಾರ್ಮಿಕರಿಗೆ ನೀಡಲಾಗುತ್ತಿರುವ ಕಾರ್ಡ್‌ಗಳಲ್ಲಿ ನಕಲಿ ಹಾವಳಿ ವ್ಯಾಪಕವಾಗಿದ್ದು, ಗ್ರಾಮ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಹೊಸ ಕಾರ್ಡ್ ನೀಡುವಿಕೆ ಮತ್ತು ನವೀಕರಣ ಪ್ರಕ್ರಿಯೆ ಸ್ಥಗಿತ ಮಾಡಬೇಕು ಎಂದು ಹೇಳಿದರು.
ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಸರ್ಕಾರ ತ್ವರಿತವಾಗಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಹಂತಹಂತವಾಗಿ ಇನ್ನಷ್ಟು ಹೋರಾಟಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹನುಮೇಶ್ ಭೋವಿ, ಇಸ್ಮಾಯಿಲ್ , ಷಣ್ಮುಖಪ್ಪ ಹಿರೇಬಿಡನಾಳ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ