*ಶಿಕ್ಷೆ ಮತ್ತು ಶಿಕ್ಷಣ ಅಪರಾಧವಲ್ಲ:ಅದು ಅರಿವು ಮೂಡಿಸುವ ಬೆಳಕಿನ ಮಳೆ*
ಒಂದು- ಎರಡು ಬಾಳೆಲೆ ಹರಡು,ಅ ಅಮ್ಮ,ಆನೆ ಎಂದು ಪ್ರಾರಂಭವಾಗುತ್ತಿದ್ದ ಪ್ರಾಥಮಿಕ ಹಂತದ ಶಿಕ್ಷಣ ಮತ್ತು ಶಿಕ್ಷಯೊಂದಿಗೆ ಚಡಿ ಚಮಚಮ ವಿದ್ಯೆ ಗಮಗಮ ಎನ್ನುವ ಮಾಸ್ತರನ ಏರು ದ್ವನಿಯಲ್ಲಿ ಬರುತ್ತಿದ್ದ ಕಲಿಸುವ ಕಳಕಳಿ ದ್ವನಿಯಲ್ಲಿ ಭಯದಿಂದ ಕಲಿತ ಎಲ್ಲಾ ಪಾಠಗಳು ಧೀರ್ಘಕಾಲ ಅವರನ್ನು ಮತ್ತು ಪಾಠಗಳನ್ನು ಬದುಕಿನಲ್ಲಿ ಅನ್ವಯಿಸಿಕೊಂಡು ಬಂದ ಕಾಲಮಾನ ನಮ್ಮದು.ಶಿಕ್ಷೆಗಿಂತ ಶಿಕ್ಷಣದ ಮಹತ್ವದ ಗುರಿ ತಲುಪಿಸುವಲ್ಲಿ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕರು ಕಣ್ಣ ಮುಂದೆ ಈಗಲೂ ಇರುವಂತೆ ತೋರುತ್ತದೆ.ಅನ್ನ ಕೊಟ್ಟು ಬದುಕು ಕಟ್ಟಲು ನೆರವಾದ ಶಿಕ್ಷಣ ಅನೇಕ ಬದಲಾವಣೆಗಳ ಏಣಿಯನ್ನಿತ್ತು ಸಾಧನೆಯತ್ತೆ ನಮ್ಮನ್ನು ನಡೆಯುವಂತೆ ಮಾಡುತ್ತಿದ್ದರು ಅದರೆಲ್ಲ ಶ್ರಮವು ಶಿಕ್ಷಕರಿಗೆ ಸಲ್ಲುವಂತದ್ದೆ.ಅವರು ಪಡುತ್ತಿದ್ದ ಆನಂದ ನಮ್ಮ ಮಕ್ಕಳು ಎಂದು ಕೂಗಿ ಹೇಳುವ ಮಾತುಗಳು ಕಣ್ಣಲ್ಲಿ ನದಿ ಹರಿಸದೆ ಇರುವುದಿಲ್ಲ.ಆದರೂ ನಾವಿಂದು ಇರುವ ನವ ಯುಗದ ಶಿಕ್ಷಣ ಹೇಗಿದೆ? ಶಿಕ್ಷಕ ನಿಜವಾಗಿಯೂ ಕಲಿಸುವ ತಾಯಿಯಾಗಿದ್ದಾನೆಯೇ? ಅದುನಿಕರಣ ಈ ದುರಂತ ಕಾಲದಲ್ಲಿ ಮಕ್ಕಳಿಗೆ ದೇಶಭಕ್ತಿ,ಸಾಂಸ್ಕೃತಿಕ ಪ್ರಜ್ಞೆ,ನಾಡು ನುಡಿಯ ಗೌರವ ಎಲ್ಲವೂ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹರಿದಾಡುವ ಮಟ್ಟಿಗೆ ನಿಂತಿದ್ದೆ ಆದರೆ ಶಿಕ್ಷಣ ಮೌಲ್ಯವನ್ನು ಹೇಗೆ ನವೀಕರಣಗೊಂಡಿದೆ? ನಾವು ಯಾವುದನ್ನು ತಪ್ಪು ಎಂದು ಹೇಳುವಂತಿಲ್ಲ ಎಲ್ಲ ತಂತ್ರಜ್ಞಾನದ ಯುಗವೆಂದು ಸುಮ್ಮನಿದ್ದರೆ ಈ ರೀತಿಯ ಅನೇಕ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ವಿಶ್ವಾಸನಿಯ ಶಿಕ್ಷಕರು ಮಕ್ಕಳ ಪ್ರೀತಿಯನ್ನು ಗಳಿಸದಿದ್ದರೆ ಮಗು ಓದಿನಲ್ಲಿ ಹಿಂದೇಟು ಹಾಕುತ್ತದೆ.ಈಗಂತ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಇದೆ ತರ ಇದ್ದಾರೆ ಎನ್ನುವುದು ವಾದವಲ್ಲ,ಇದು ನಿರಂತರವಾದ ಪ್ರಕ್ರಿಯೆ ಕಾಲದೊಂದಿಗೆ ಹೆಜ್ಜೆ ಹಾಕುವ ಜರೂರತ್ತು ಇದೆ ಅದರ ನಡುವೆ ಮಾನವೀಯ ಗುಣವನ್ನು ಬೆಳೆಸುವ ಮತ್ತು ಅನ್ನದ ದಾರಿ ಹೇಳಿಕೊಡುವ ಶಿಕ್ಷಕರ ಜವಬ್ದಾರಿ ತುಂಬಾ ಇದೆ.ಕಲಿಕೆಯನ್ನು ಅಪರಾದವಾಗಿ ಏರುವ ಬದಲು ಅಕ್ಷರಗಳು ಬಾಳ ಬೆಳಗುವ ಹಣತೆಗಳೆಂದು ಮಕ್ಕಳನ್ನು ಕರೆತರುವಲ್ಲಿ ಎಲ್ಲರ ಪಾತ್ರವೂ ಬಹುಮುಖ್ಯ.
ಪಾಲಕರು ಶಿಕ್ಷಕರ ತಪ್ಪುಗಳನ್ನು ತೋರಿಸುವ ಬದಲು ಮಕ್ಕಳ ಸರಿಗಳನ್ನು ಗಮನಿಸಬೇಕು.ಮನೆಯೇ ಮೊದಲ ಪಾಠ ಶಾಲೆ ಆದ್ದರಿಂದ ತಾಯಿ ತಾನೆ ಗುರುವಾಗಿ ಸಂಬಂಧ ಸಂಪ್ರದಾಯಗಳ ತಿಳಿ ಹೇಳಿ ಬುದ್ದಿ ಕಲಿಸಿದರೆ ನೈತಿಕವಾಗಿ ಬಲಗೊಳ್ಳುವಲ್ಲಿ ಮಕ್ಕಳು ಎಚ್ಚರವಗುತ್ತಾರೆ.
"ಕಲಿಕೆ ಹುಟ್ಟಿನಿಂದ ಚಟ್ಟದ ಹೊರೆಗೆ ನಿರಂರತವಾಗಿ ನಡೆಯುತ್ತದೆ" ಕ್ರೋ&ಕ್ರೋ ಹೇಳುವಂತೆ ದಿನನಿತ್ಯದ ಪ್ರತಿಕ್ಷಣವು ಅನುಭವಕ್ಕೆ ದಕ್ಕುವ ಕಲಿಕೆ ಮನಕ್ಕೆ ನಾಟಿದಾಗ ಮಾತ್ರ ಅದರ ಆಳದ ಅರಿವು ರೆಕ್ಕೆ ಮೂಡಿಸಿಕೊಳ್ಳುತ್ತಾ ಹೋಗುತ್ತದೆ.ಬದುಕಿನಲ್ಲಿ ಒಬ್ಬರಿಲ್ಲ ಒಬ್ಬರಿಂದ ಕಲಿಯುತ್ತಾ ಹೋಗುತ್ತೇವೆ.ಆಡುವ ಮಗುವಿನ ಮುಂದೆ ದೀಪದ ಹಣತೆ ಹಚ್ಚಿಟ್ಟು ನೋಡಿದಾಗ ಆಡುತ್ತ ಅದನ್ನು ಬೆರಳು ತಾಗಿಸಿ ಕೈ ಸುಟ್ಟುಕೊಳ್ಳುತ್ತದೆ.ಇದರಿಂದ ಮತ್ತೆ ಅದೆ ಪ್ರಯೋಗ ಕೈಗೊಂಡಾಗ ಮಗುವಿಗೆ ಸುಟ್ಟ ಅನುಭವವಾಗಿ ಮತ್ತೆ ಅದನ್ನು ಮುಟ್ಟದೆ ಹಿಂದೆ ಸರಿಯುವುದು ಸಹಜ ಸ್ಥಿತಿಯ ಮೂಲಕ ಮಗು ಎಚ್ಚರವಾಗುತ್ತದೆ.ಹೀಗೆ ಇಂದಿನ ಕಲಿಕಾ ಮಟ್ಟವನ್ನು ಗಮನಿಸಿದಾಗ ಬರೊಬ್ಬರಿ ತರಗತಿಯ ಹತ್ತು ಮಕ್ಕಳ ಪೈಕಿ ಒಬ್ಬ ಮಗು ಆಳವಾಗಿ ವಿಷಯ ತಿಳಿದದ್ದು ಕೇವಲ ಕ್ಷಣಿಕ ಗ್ರಹಿಕೆಯದ್ದಾಗಿ ಉಳಿಯುವುದು ಕಾಣುತ್ತದೆ.ಹಿಂದಿನ ಕಾಲದ ಶಿಕ್ಷೆಯಿಂದ ಕಲಿತ ಪಾಠ ಬದುಕಿನುದ್ದಕ್ಕೂ ಅರಿವಿನ ದೀಪ ಹಚ್ಚುತ್ತಾ ಬರುತ್ತಿದೆ.ಅಜ್ಜಿಯ ಜಂಬ,ಏಕಲವ್ಯ,ಹೂವಾಡಗಿತ್ತಿ,ಕರಡಿಯ ಕುಣಿತ,ಅನೆ ಬಂತೊಂದಾನೆ,ನದಿಯಲೊಂದು ಬಕ,ಪುಣ್ಯಕೋಟಿಯ ಕತೆ,ಮೊಲ ಸಿಂಹವನ್ನು ಕೊಂದ ಕತೆ,ಜಾನಪದ ಹಾಡುಗಳು,ಚದುರಂಗ,ಲಗೋರಿ,ಕಬ್ಬಡ್ಡಿ,ಕಣ್ಣಾಮುಚ್ಚಾಲೆ,ಖೋ ಖೋ ಕಪ್ಪೆ ಆಟ ಎಲ್ಲವನ್ನು ಕಲಿಸುತ್ತಿದ್ದ ಅನುಭವಿ ಶಿಕ್ಷಕರ ಪಾಠದಿಂದ ಜ್ಞಾನದ ಬುತ್ತಿ ತುಂಬುತ್ತಿತ್ತು.ಪಿ.ಟಿ ಮಾಸ್ಟರನ ಚಡಿ ಏಟಿಗೆ ಕುಣಿಯುತ್ತಿದ್ದ ಕೈ ಕಾಲು ನೋವು, ಪ್ರಾರ್ಥನೆಯ ಸಮಯಕ್ಕೆ ಸರಿಯಾಗಿ ಹಾಜರಾಗದಿದ್ದಾಗ ಕುಂಡಿಗೆ ಬೀಳುತ್ತಿದ ಏಟು ಸಮಯ ಪ್ರಜ್ಞೆ ರಾಷ್ಟಗೀತೆ,ನಾಡಗೀತೆಗಳ ಗೌರವವನ್ನು ಮೂಡಿಸಿ ಶಿಸ್ತನ್ನು ಮೂಡಿಸುತ್ತಿದ್ದ ಶಾಲೆಯ ಶಿಕ್ಷಕರು ಎಂದೂ ಕಳಪೆ ಮಟ್ಟದ ಬೋಧನೆ ನೀಡಿದವರಲ್ಲ.ಮಧ್ಯಾಹ್ನ ಊಟದ ನಂತರ ನಿರರ್ಗಳವಾಗಿ ಓದುತ್ತಿದ್ದ ಮಗ್ಗಿ ಗಣಿತ ಮಾಸ್ತರನು ಗದರಿಸಿ ಚೂಟಿ,ಕಿವಿ ಹಿಂಡಿ ಕಲಿಸುತ್ತಿದ್ದ ಮಗ್ಗಿ ದಿನಗಳು ಕಳೆದಂತೆ ಬುದ್ದಿಯ ಅಲಮಾರಿನಲ್ಲಿ ಜಾಗ ಪಡೆಯುತ್ತಿದ್ದವು.ಶಿಕ್ಷೆ ಅಪರಾದವಲ್ಲ ಅದು ಕತ್ತಲೆಗೆ ಅರಿವು ಮೂಡಿಸುವ ಬೆಳಕಿನ ಮಳೆ,ಎಂದು ಪಾಠ ಹೇಳುತ್ತಿದ್ದ ಅಂದಿನ ಶಿಕ್ಷಣ ಇಂದು ಕಪ್ಪು ಹಲಗೆಯನ್ನು ತಿಂದು ಹಾಕಿದ ಸ್ಮಾರ್ಟ್ ಬೋರ್ಡಿಗೆ ಮೊರೆ ಹೋಗಿದೆ, ಪೆಟ್ಟುತಿಂದು ಕಲೆಯುತ್ತಿದ್ದ ಮಕ್ಕಳು ಇಂದು ಪ್ರಜ್ಞೆ ಇಲ್ಲದ ಮಷಿನ್ ಗಳಂತೆ ಶಿಕ್ಷಣ ಪಡೆಯುತ್ತಿದ್ದಾರೆ.ಶಿಸ್ತು ಕಲಿಸಬೇಕಿದ್ದ ಇಂದಿನ ಕೆಲವು ಶಿಕ್ಷಣದ ವಿಧಾನಗಳು ಬದಲಾಗಿ ಶಿಕ್ಷೆಯಾಗಿ ಕಾಡುತ್ತಿವೆ.ಮಗುವಿನ ಬೌದ್ದಿಕ ಮಟ್ಟವನ್ನು ತಿಳಿದು ಪಾಠ ಮಾಡಬೇಕಿದ್ದ ಪಾಠಗಳು ಅಳೆತೆಗೆ ಮೀರಿ ಬೋಧಿಸಲಾಗುತ್ತಿದೆ.ಕಡ್ಡಾಯವಾಗಿ ಕಲಿಯ ಬೇಕಿದ್ದ ಮಗು ಶಾಲೆಯ ಕೋಣೆಯನ್ನು ಬಿಟ್ಟು ಮೊಬೈಲ್ ಕ್ಲಾಸ್ ಗಳ ಮೂಲಕ ಕಲಿತು ಅತೃಪ್ತಿಯ ಅನುಭವವನ್ನು ಪಡೆಯುತ್ತಿದೆ. ಆಫ್ ಲೈನ್ ನಲ್ಲಿ ಸಿಗುತ್ತಿದ್ದ ಅನುಭವ ಆನ್ಲೈನ್ ನಲ್ಲಿ ಜ್ಞಾನ ಪ್ರಸರಣ ಕಡಿಮೆ ಮಾಡುತ್ತಿದೆ. ಅವ್ಯಕತೆಗೆ ಅನುಕೂಲವಾಗಿ ಬದಲಾಗಿರುವ ಶಿಕ್ಷಣವು ನಲಿಯುತ್ತ ಕಲಿಯುವ ವಿಧಾನಕ್ಕೆ ಮತ್ತೆ ಮರಳಬೇಕು. ಇದರಿಂದ ಮಕ್ಕಳು ಮತ್ತು ಶಿಕ್ಷಕರ ನಡುವೆ ಇರುವ ಸಂಬಂಧಗಳು,ಗೌರವಗಳು ಕಡಿಮೆಯಾಗಿ, ಮಕ್ಕಳಲ್ಲಿ ಆತ್ಮ ವಿಸ್ವಾಸ ಮೂಡಿಸುವ ಅನುಭವಿ ಶಿಕ್ಷಕರ ನಲಿ-ಕಲಿ ಬೋಧನೆ ಮಕ್ಕಳನ್ನು ಮರಳಿ ಶಾಲೆಗೆ ತರುವ ಕನಿಷ್ಠ ಪ್ರಯತ್ನವಾದೂ ಮಾಡುತ್ತದೆ.ಹಾಗಂತ ಆನ್ಲೈನ್ ಶಿಕ್ಷಣವನ್ನು ದೂರುವುದು ತಪ್ಪಲ್ಲ. ತಂತ್ರಜ್ಞಾನದ ಯುಗದಲ್ಲಿ ಬದಲಾಗುತ್ತಿರುವ ಶಿಕ್ಷಣ ಗುಣಮಟ್ಟವನ್ನು ಮನಮುಟ್ಟುವಂತೆ ಹೇಳುವ ಪಾಠ ಅದಾಗಲಾರದು ಇಂತಹ ಶಿಕ್ಷಣವು ಮಕ್ಕಳಲ್ಲಿ ಕೆಲವು ಕಾಲ ಉಳಿಸುತ್ತದೆ.ಅನುಭವವನ್ನು ಕೊಡದ ಶಿಕ್ಷೆ ಮತ್ತು ಶಿಕ್ಷಣ ಬದುಕನ್ನು ಕಟ್ಟಲಾಗದು.ಇಂದಿನ ಯುಗದಲ್ಲಿ ಶಿಕ್ಷಕರು ನೀಡುವ ಶಿಕ್ಷಣವು,ಶಿಕ್ಷಿಸುವುದು ಅಪಾರಾಧ ಎಂದು ತಿಳಿದು ದೂರುವ ಬದಲು ಮಕ್ಕಳಿಗೆ ಮನ ಮುಟ್ಟುವಂತೆ ಮನೆಯ ಪಾಲಕರೂ ಕೂಡ ಜವಬ್ದಾರರಾಗಬೇಕಿದೆ.
ದಿನದ ಅಷ್ಟೂ ಸಮಯ ತರಗತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ಮಕ್ಕಳು ಮಕ್ಕಳು ಶಾಲೆಯಿಂದ ಇಂದು ಹೊರೆಗೆ ಉಳಿಯಲು ಅನೇಕ ಕಾರಣಗಳು ಸಿಗುತ್ತವೆ.ಆದರೆ ಬಡತನ,ನಿರುದ್ಯೋಗ,ಅಸಮಾನತೆ,ಅನಕ್ಷರತೆಯಂತಹ ಮಾರಕವಾದ ಇಂತಹ ಸಮಸ್ಯಗಳಿಗೆ ಶಿಕ್ಷಣವೊಂದೆ ದಿವ್ಯ ಔಷದವೆಂದು ನಾವು ಮಕ್ಕಳಿಗೆ ಮನವರಿಕೆಯಾಗುವಂತೆ ಮಹಾನ್ ವ್ಯಕ್ತಿಗಳ ಸಾಧನೆಯ ಹಿಂದಿನ ಕಷ್ಟ-ಕಾರ್ಪಣ್ಯಗಳ,ಏಳು-ಬೀಳುಗಳ ನಿಜ ಜೀವನವನ್ನು ಅವರುಗಳಿಗೆ ತಿಳಿಸಬೇಕಿದೆ.ಪ್ರತಿ ಮಗುವಿನಲ್ಲಿಯೂ ಅಡಗಿರುವ ಒಬ್ಬ ಸಾಧಕನನ್ನು ಪತ್ತೆ ಹಚ್ಚಿ ಬೆಳೆಸುವ ಕೆಲಸವನ್ನು ಮಾಡಿದಾಗ ಮಾತ್ರ ನಾವು ಹೆತ್ತ ಮತ್ತು ಶಿಕ್ಷಣಕೊಟ್ಟದ್ದು ಸಾರ್ಥಕವೆನಿಸಿಕೊಳ್ಳುತ್ತದೆ.ರೊಟ್ಟಿ ಉಂಡು ಬೊಳ್ಳಳ್ಳಿ ಖಾರ ಮೊಸರು ತಿಂದು ಗಟ್ಟಿಯಾಗಿ ನಡೆಯುತ್ತಿದ್ದ ಅಂದಿನ ಕಾಲದ ಮಕ್ಕಳಿಗಿಂತ ಇಂದಿನ ಮೊಬೈಲ್ ಹಾಗೂ ಮ್ಯಾಗಿ ಯುಗದ ಮಕ್ಕಳು ಆಹಾರದ ದೃಷ್ಠಿಯಿಂದಲು ಕಲಿಕೆಯಲ್ಲಿ ಹಿಂದೇಟು ಹಾಕುತ್ತಿರುವುದು ನೋಡಬಹುದು.ದಯವಿಟ್ಟು ಗುಣಮಟ್ಟದ ಆಹಾರ ಮತ್ತು ಉತ್ತಮ ನಡವಳಿಕೆಯ ಪಾಠಗಳನ್ನು ಹೇಳುವ ಪುರುಷೊತ್ತಿನಲ್ಲಿ ನಾವು ಮುಂದಾಗೋಣ ಬನ್ನಿ.......!
*ರವಿ ರಾಯಚೂರಕರ್ ದೇವದುರ್ಗ*
*ಹವ್ಯಾಸಿ ಬರಹಗಾರ,ಯುವ ಸಾಹಿತಿ*
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ . ಸದ್ಯದ ಸ್ಥಿತಿಯನ್ನ ಚೆನ್ನಾಗಿ ಬಿಂಬಿಸಿದಿರಿ
ಪ್ರತ್ಯುತ್ತರಅಳಿಸಿ