ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕರ್ನಾಟಕ ರಾಜ್ಯ ಮಂಡಳಿ ಖಂಡನೆ
"ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕರ್ನಾಟಕ ರಾಜ್ಯ ಅಧ್ಯಕ್ಷೆ ಜ್ಯೋತಿ ಎ "
ಕೊಟ್ಟೂರು: ಉದ್ಯೋಗಸ್ಥ ಮಹಿಳೆಯರಿಗೆ ವೇತನಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾವವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರು ಸಾರಾಸಗಟಾಗಿ ತಳ್ಳಿಹಾಕಿರುವುದನ್ನು ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕರ್ನಾಟಕ ರಾಜ್ಯ ಮಂಡಳಿ ಖಂಡಿಸುತ್ತದೆ. ಹಾಗೂ ದೇಶದ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಎರಡು ದಿನಗಳು ವೇತನಸಹಿತ ಮುಟ್ಟಿನ ರಜೆ ನೀಡುವ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.
ಸಚಿವೆ ಸ್ಮತಿ ಇರಾನಿಯವರು ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡುತ್ತ ಹೇಳಿರುವಂತೆ ಮುಟ್ಟು ಅಂಗವೈಕಲ್ಯವಲ್ಲ ಎನ್ನುವುದನ್ನು ನಾವು ಒಪ್ಪುತ್ತೇವಾದರೂ ಆ ದಿನಗಳಲ್ಲಿ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ವ್ಯತಿರಿಕ್ತ ಬದಲಾವಣೆಗಳು ಆಗುವುದು ವಾಸ್ತವ ಮತ್ತು ಆ ಸಂದರ್ಭದಲ್ಲಿ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿರುವ ಕಾರಣ ಅವರ ಕಾರ್ಯಕ್ಷಮತೆ ಕ್ಷೀಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಮಹಿಳೆಯರ ನೋವು, ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಲಾರದ ಸಚಿವೆ ದೇಶದ ಮಹಿಳೆಯರನ್ನು ಪ್ರತಿನಿಧಿಸುತ್ತಾರೆನ್ನುವುದು ದುರಂತ.
ಇತರ ಹಲವು ದೇಶಗಳಲ್ಲಿ ಈಗಾಗಲೇ ಮುಟ್ಟಿನ ರಜೆಯನ್ನು ಶಾಸನಾತ್ಮಕವಾಗಿ ಮಹಿಳೆಯರಿಗೆ ವಿಶೇಷವಾಗಿ ನೀಡಲಾಗಿದೆ. ನಮ್ಮ ದೇಶದಲ್ಲೂ ಕೆಲವು ರಾಜ್ಯಗಳ ಕಂಪನಿಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಲ್ಪಿಸಲಾಗಿದೆ. ನಾರಿಯರನ್ನು ಪೂಜಿಸುತ್ತೇವೆನ್ನುವ ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರನ್ನು ಮುಟ್ಟಿನ ರಜೆಯೂ ಇಲ್ಲದೆ ಹೆಚ್ಚು ಕಾಲ ದುಡಿಸಿಕೊಳ್ಳುವ ಸರ್ಕಾರದ ಶೋಷಣಾತ್ಮಕ ನೀತಿಯನ್ನು ಎನ್‌ಎಫ್‌ಐಡಬ್ಲ್ಯು ತೀವ್ರವಾಗಿ ವಿರೋಧಿಸುತ್ತದೆ.
"ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ "
ಮುಟ್ಟಿನ ರಜೆ ನೀಡಿದರೆ ಮಹಿಳೆಯರ ನಡುವೆ ತಾರತಮ್ಯ ಮಾಡಿದಂತೆ ಎಂದು ಸಚಿವರು ಹೇಳಿರುವುದಾಗಿ ವರದಿಯಾಗಿದೆ. ಇದು ಹಾಸ್ಯಾಸ್ಪದ. ರಜೆ ಅಗತ್ಯವಿದ್ದ ಮಹಿಳೆಯರು ಅದರ ಅನುಕೂಲವನ್ನು ಪಡೆಯುತ್ತಾರೆ. ಬೇಡದವರು ಕೆಲಸಕ್ಕೆ ಹಾಜರಾಗಿ ರಜೆ ಸಂಚಯನ ಮಾಡಿಕೊಳ್ಳುತ್ತಾರೆ ವಿನಾ ಅದರಿಂದ ಅನನುಕೂಲವೇನೂ ಆಗುವುದಿಲ್ಲ.
ಮಹಿಳೆಯರ ನೋವುಗಳಿಗೆ ಸ್ಪಂದಿಸದ, ಕಲ್ಲಾಗಿರುವ, ಸೂಕ್ಷತೆಯಿಲ್ಲದ, ಸಂವೇದನೆಯಿಲ್ಲದ ಸಚಿವರನ್ನು ಹೊಂದಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಇನ್ನೆಂತಹ ಅಭಿವೃದ್ಧಿ ಸಾಧಿಸಬಲ್ಲುದೋ ಏನೋ ತಿಳಿಯದಾಗಿದೆ. ಕೇಂದ್ರ ಸರ್ಕಾರವೂ ಅದೇ ದಾರಿಯಲ್ಲಿ ಮಹಿಳಾ ವಿರೋಧಿಯಾಗಿ ಕ್ರಮಿಸುತ್ತಿರುವುದರಿಂದ ದೇಶದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರನ್ನು ಯಂತ್ರಗಳೆಂದು ಪರಿಭಾವಿಸದೆ ಅವರೂ ಮನುಷ್ಯರೆಂಬ ವಾಸ್ತವವನ್ನು ಪರಿಗಣಿಸಿ ಮುಟ್ಟಿನ ರಜೆ ನೀಡಲು ಮುಂದಾಗಬೇಕೆಂದು ಎನ್‌ಎಫ್‌ಐಡಬ್ಲ್ಯು ಕರ್ನಾಟಕ ರಾಜ್ಯ ಮಂಡಳಿ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ. ಎಂದು ಗುರುವಾರ ಪತ್ರಿಕೆಗೆ ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕರ್ನಾಟಕ ರಾಜ್ಯ ಅಧ್ಯಕ್ಷೆ ಜ್ಯೋತಿ ಎ. ,ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ