30 ಲಕ್ಷಕ್ಕೂ ಅಧಿಕ ಭೋಗಸ್ ಬಿಲ್ ಆರೋಪ : ಪಾಮನಕಲ್ಲೂರು ಪಿಡಿಒ ರಾಮಣ್ಣ ಅಮಾನತ್ತಿಗೆ ಕರವೇ ಮನವಿ
ಮಸ್ಕಿ : ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣರವರು 30 ಲಕ್ಷ ರೂಪಾಯಿಗಳಿಗೂ ಅಧಿಕ ಭೋಗಸ್ ಬಿಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯ (ಪ್ರವೀಣ್ ಶೆಟ್ಟಿ ಬಣ)ಮುಖಂಡರು ತಾಲೂಕು ಪಂಚಾಯತಿಯ ಮನವಿ ಸಲ್ಲಿಸಿದರು.
ಕರವೇ ಮಸ್ಕಿ ತಾಲೂಕು ಅಧ್ಯಕ್ಷ ಅಶೋಕ್ ಮುರಾರಿರವರ ನೇತೃತ್ವದಲ್ಲಿ ಮಸ್ಕಿ ಪಟ್ಟಣದ ವಾಲ್ಮೀಕಿ ಭವನದಲ್ಲಿರುವ ತಾಲೂಕು ಪಂಚಾಯತಿ ಕಛೇರಿಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಗುರುವಾರ ತಾಲೂಕು ಪಂಚಾಯತಿ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿರವರಿಗೆ ಸಲ್ಲಿಸಿ, ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
" ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ರಾಮಣ್ಣರವರು ಪಿಡಿಒ ಆಗಿ ನೇಮಕಗೊಂಡಾಗಿನಿಂದ ಇಲ್ಲಿಯವರೆಗೂ ಸುಮಾರು 30 ಲಕ್ಷ ರೂ.ಗಳ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.
ರಾಮಣ್ಣರವರು ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಿವಿಧ ಹೆಸರುಗಳಲ್ಲಿ ವಿವಿಧ ಅಂಗಡಿಗಳ ಮೂಲಕ ಬೇರೆ ಬೇರೆಯವರಿಗೆ 15ನೇ ಹಣಕಾಸಿನ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ವಿವಿಧ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಭೋಗಸ್ ಬಿಲ್ ಸೃಷ್ಟಿಯ ಹಿಂದೆ ರಾಮಣ್ಣರವರ ಕೈವಾಡವಿದೆ ಎಂದು ಪಂಚಾಯತಿಗೆ ಸಂಬಂಧಿಸಿದ ಕೆಲವರು ಆರೋಪ ಮಾಡಿದ್ದಾರೆ.
ಅಲ್ಲದೇ ರಾಮಣ್ಣರವರು ನಕಲಿ ಬಿಲ್ ಸೃಷ್ಟಿಸಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಹದಿನೈದನೆಯ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಖರ್ಚು ಮಾಡಲಾಗಿರುವ ಹಣದ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ಕೇಳಿದ್ದೇವೆ. ಆದರೇ ಅವರು ಮಾಹಿತಿ ನೀಡುವ ಬದಲಿಗೆ ಅಸಂಬದ್ಧ ಹೇಳಿಕೆ ನೀಡಿ ದಿನಮುಂದೂಡುತ್ತಿದ್ದಾರೆ.
ಇಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟುವಂತೆ ನಾವು ಈಗಾಗಲೇ ನಿಮಗೂ ಕೂಡ ಮೌಖಿಕ ಮನವಿಯನ್ನು ಮಾಡಿದ್ದೇವೆ.
ಆದರೆ ಇದರ ಮೇಲೆ ನೀವು ಕ್ರಮಕೈಗೊಂಡಿಲ್ಲ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಈಗಾಗಲೇ ಮನವಿ ಪತ್ರ ಸಲ್ಲಿಸುವ ಮೂಲಕ ಲಿಖಿತ ಹಾಗೂ ಮೌಖಿಕವಾಗಿ ಮಾಹಿತಿ ನೀಡಿದ್ದೇವೆ. ಇಷ್ಟಾದರೂ ಕೂಡ ರಾಮಣ್ಣರವರ ಕರಾಮತ್ತು ಕಡಿಮೆಯಾಗುತ್ತಿಲ್ಲ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಅವುಗಳ ಬಗ್ಗೆ ಅವರಿಗೆ ಇದುವರೆಗೂ ನಾಲ್ಕೈದು ಬಾರಿ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಕೂಡ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಾಗಲೊಮ್ಮೆ ಅವರು ಕಾಲಹರಣ ಮಾಡಿಕೊಂಡು ಹೋಗುತ್ತಿದ್ದಾರೆ.
ಅಲ್ಲದೇ ಸಮಸ್ಯೆಗಳನ್ನು ಪರಿಹರಿಸುವಂತೆ ತಾಕೀತು ಮಾಡಿದರೇ, ರಾಜಿ ಸಂದಾನಕ್ಕೆ ಮುಂದಾಗುತ್ತಾರೆ ಎಂಬ ಅನೇಕ ಆರೋಪಗಳು ಅವರ ಮೇಲೆ ಇವೆ.
ಇಷ್ಟೆಲ್ಲಾ ಗಂಭೀರ ಆರೋಪಗಳನ್ನು ಹೊತ್ತುಕೊಂಡಿರುವ ರಾಮಣ್ಣರವನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲವೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಅಥವಾ ಕಡ್ಡಾಯ ರಜೆಯ ಮೇಲೆ ಕಳಿಸಬೇಕು. ಅದರೊಂದಿಗೆ ಅವರ ಕಾಲದಲ್ಲಿ ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಿ, ರಾಮಣ್ಣರವರ ಮೇಲೆ ಮತ್ತು ಅಕ್ರಮದಲ್ಲಿ ಪಾಲ್ಗೊಂಡ ಪಂಚಾಯತಿ ಸಿಬ್ಬಂದಿಗಳ ಮೇಲೆ ಹಾಗೂ ಅಧ್ಯಕ್ಷರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು.
ಅವರ ಮೇಲಿರುವ ಆರೋಪಗಳಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ನಾವು ಈ ಪತ್ರದಲ್ಲಿ ಲಗತ್ತಿಸಿದ್ದೇವೆ. ಅಷ್ಟೇ ಅಲ್ಲದೇ ಈಗಾಗಲೇ ಇದೇ ಮನವಿ ಪತ್ರವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಅವರು ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ಸೂಚಿಸುವ ಭರವಸೆಯನ್ನು ನೀಡಿದ್ದಾರೆ. ದಯವಿಟ್ಟು ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮತ್ತೊಮ್ಮೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ." ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರವನ್ನೂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ ರವರ ಮೂಲಕ ಕರವೇ ಮುಖಂಡರು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ಅಶೋಕ್ ಮುರಾರಿ, ಕರವೇ ಪಾಮನಕಲ್ಲೂರು ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನಿ, ಪ್ರಮುಖರಾದ ಸುಂಡೆಪ್ಪ ಆನಂದಗಲ್, ಮಲ್ಲಪ್ಪ ಅರಕೇರಿ, ಅಮರೇಶ್ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ