ಹಿರೇದಿನ್ನಿ, ಮಲ್ಲದಗುಡ್ಡ ಗ್ರಾ.ಪಂ ಗಳಿಗೆ ಭೇಟಿ
ಮಸ್ಕಿ : ತಾಲೂಕಿನ ಹಿರೇದಿನ್ನಿ, ಮಲ್ಲದಗುಡ್ಡ ಗ್ರಾಮ ಪಂಚಾಯತಿಗೆ ಸೋಮವಾರ ಮಸ್ಕಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಅವರು ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಹಿರೇದಿನ್ನಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ಸ್ವತಃ ನೀರು ಕುಡಿದು ಪರೀಕ್ಷಿಸಿದರು. ಕಡ್ಡಾಯವಾಗಿ ನೀರಿನ ಪರೀಕ್ಷೆ ಕೈಗೊಳ್ಳಬೇಕು. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಗ್ರಾ.ಪಂಯಿಂದ ಕೆರೆಯ ಸುತ್ತಲಿನ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ತಕ್ಷಣ ಕೆರೆಯನ್ನು ಭರ್ತಿ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸದಾ ಚಾಲ್ತಿಯಲ್ಲಿರಬೇಕು. ಪ್ರತಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನ ಕೈಗೊಂಡು, ಗುರಿ ಸಾಧಿಸಬೇಕು. ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿದ ಫಲಾನುಭಗಳಿಗೆ ಅನುದಾನ ಪಾವತಿಸಿ, ಹೊಸದಾಗಿ ಶೌಚಾಲಯ ನಿರ್ಮಾಣಕ್ಕೆ ತಂತ್ರಾಂಶ ಮೂಲಕ ಬೇಡಿಕೆ ಸ್ವೀಕರಿಸಬೇಕು. ಸ್ಥಳೀಯ ಕೂಲಿಕಾರರ ಬೇಡಿಕೆ ಅನುಸಾರ ಬೇಸಿಗೆ ಅವಧಿಯಲ್ಲಿ ನರೇಗಾದಡಿ ಕೆಲಸ ಒದಗಿಸಬೇಕು. ಕುಡಿಯುವ ನೀರು ಸರಬರಾಜು ಮಾಡುವ ಜಲ ಮೂಲಗಳು, ನೀರಿನ ತೊಟ್ಟಿಗಳನ್ನು ಶುಚಿಗೊಳಿಸಬೇಕು ಎಂದು ಸೂಚಿಸಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮಣ, ಬಸವಲಿಂಗಪ್ಪ, ಗ್ರಾಪಂ ಸಿಬ್ಬಂದಿ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ