ಅಮಿತ್ ಶಾ ಅವರ ರಾಜೀನಾಮೆ ಹಾಗೂ ಅವರ ಮೇಲೆ ಶಿಸ್ತು ಕಾನೂನೂ ಕ್ರಮ ಜರುಗಿಸಲು ಒತ್ತಾಯ
ಮಸ್ಕಿ : ರಾಜ್ಯಸಭೆಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ರಾಜೀನಾಮೆ ಪಡೆಯಲು ಒತ್ತಾಯಿಸಿ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪಟ್ಟಣದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿ ಸಂಸತ್ ಭವನದಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಅಮಿತ್ ಷಾ ಅವರು 'ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ನೆನಪಿಸುವುದು, ನೆನೆಸಿಕೊಳ್ಳುವುದು ಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ಫ್ಯಾಷನ್ ಆಗಿದೆ'.
ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳುವಷ್ಟು ದೇವರನ್ನು ನೆನೆದಿದ್ದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು,ಎನ್ನುವಂತಹ ವಿವಾದಾತ್ಮಕ ಮಾತನ್ನು ಹೇಳಿ ಬಾಬಾ ಸಾಹೇಬರಿಗೆ ಹಾಗೂ ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳಿಗೆ ಅವಮಾನವನ್ನುಂಟು ಮಾಡಿದ್ದಾರೆ.
ಇದು ಅವರ ವೈಯಕ್ತಿಕ ಅಭಿಪ್ರಾಯವಲ್ಲ ಒಂದು ಸರ್ಕಾರದ ಘನತೆವೆತ್ತ ಮಂತ್ರಿಯಾಗಿ, ಸರ್ಕಾರದ ಪ್ರತಿನಿಧಿಯಾಗಿ ಈ ಮಾತನ್ನು ಹೇಳಿದ್ದಾರೆ. ಹಾಗಾಗಿ ಇದು ಅಸಂವಿಧಾನಿಕ ನಡೆ ಮತ್ತು ಇದು ಖಂಡನೀಯ.
ಒಂದು ಸಂವಿಧಾನವನ್ನು ರಚನೆ ಮಾಡಿದಂತಹ ನಿರ್ಮಾತೃ ಎಂದು ಇಡೀ ದೇಶವೇ ಘನತೆಯಿಂದ ಅಂಬೇಡ್ಕರ್ ಬಗ್ಗೆ ಮಾತಡುವಾಗ,ಚರ್ಚೆ ಮಾಡುವಾಗ ಮತ್ತು ಸಂವಾದ ಮಾಡುವಾಗ ಎಷ್ಟೋ ದಮನಿತ ಸಮುದಾಯಗಳು ಇವತ್ತು ಅಂಬೇಡ್ಕರ್ ಅವರನ್ನು ದೊಡ್ಡ ಜ್ಞಾನದ ಭಂಡಾರವೆಂದು ಅವರಿಗೆ ಗೌರವವನ್ನು ಸಲ್ಲಿಸುವ ಇಂತಹ ಸಂದರ್ಭದಲ್ಲಿ, ಇದರ ತದ್ವಿರುದ್ಧವಂತೆ ಆಳುವ ಸರ್ಕಾರಗಳು ಅದರಲ್ಲೂ ಕೋಮುವಾದಿ ಶಕ್ತಿಗಳು ಬಾಬಾ ಸಾಹೇಬರ ಆಶಯಗಳನ್ನು ಕನಸು ಮತ್ತು ಗುರಿಗಳನ್ನು ಬುಡಮೇಲು ಮಾಡುವ ಹುನ್ನಾರವನ್ನು ಮಾಡುತ್ತಾ ಬರುತ್ತಿವೆ.
ಸಂಘ ಪರಿವಾರ ಪ್ರೇರಿತ ಬಿಜೆಪಿ ಸರ್ಕಾರದ ಕೇಂದ್ರ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬರ ಬಗ್ಗೆ ಹೊಂದಿರುವ ಕೀಳು ಮನಸ್ಥಿತಿಯ ಭಾವನೆಯನ್ನು ಹೊರ ಹಾಕಿರುವುದು ಅವರ ಅಂತರಂಗದಲ್ಲಿರುವ ಕೋಮುವಾದಿ ಮನಸ್ಥಿತಿಯ ಬಣ್ಣವನ್ನು ಬಹಿರಂಗಪಡಿಸಿದಂತಾಗಿದೆ.
ಇವತ್ತು ಸಂವಿಧಾನ ಮತ್ತು ಕಾನೂನು ಇದೆ ಎಂದು ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗುವನು, ಮತದಾನದ ಮುಖಾಂತರ ರಾಜ್ಯ ಹಾಗೂ ರಾಷ್ಟ್ರ ಪ್ರಭುತ್ವವನ್ನು ಪಡೆಯುವನು ಎಂದರೆ ಅದಕ್ಕೆ ಬಾಬಾ ಸಾಹೇಬರು ಕೊಡ ಮಾಡಿರುವ ಭಾರತದ ಸಂವಿಧಾನವೇ ಕಾರಣ ಮತ್ತು ಈ ದೇಶದ ಬಡವರು, ರೈತರು ,ಕೂಲಿಕಾರರು,ದಲಿತರು, ಮಹಿಳೆಯರು,ಶೋಷಿತರು ಈ ಸಮಾಜದ ಮುಖ್ಯವಾಹಿನಿಗೆ ಬಂದು ನಿಲ್ಲಲು ಕಾರಣವೇ ಬಾಬಾ ಸಾಹೇಬರು. ಈ ದೇಶದ ಹೆಮ್ಮೆಯ ಕಿರೀಟವಾದ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ, ಅವರ ಬಗ್ಗೆ ವಿವಾದಾತ್ಮಕ ಮಾತನಾಡುವ ಅಮಿತ್ ಶಾ ಅವರ ರಾಜೀನಾಮೆಯನ್ನು ಪಡೆದು ಅವರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಡಾ.ಮಲ್ಲಪ್ಪ. ಕೆ.ಯರಗೋಳ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ಯ ಸರ್ವರು ಭಾಗಿಯಾಗಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ