ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಅವಾರ್ಡ್‌ಗೆ ವಿದ್ಯಾರ್ಥಿಸ್ನೇಹಿ ಅಮರೇಶ ವೆಂಕಟಾಪೂರ ಭಾಜನ...!
ಲಿಂಗಸೂಗೂರು: ಪ್ರತಿವರ್ಷದಂತೆ ದೆಹಲಿಯ ಪಂಚಶೀಲ ಆಶ್ರಮದಲ್ಲಿ ಆಯೋಜನೆಗೊಳ್ಳುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ವತಿಯಿಂದ ನಡೆಯುವ ವಾರ್ಷಿಕ ದಲಿತ ಲೇಖಕರ 40ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಲಿಂಗಸೂಗೂರು ಪಟ್ಟಣದ ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ, ಸಮಾಜ ಸೇವಕರಾದ ಅಮರೇಶ ವೆಂಕಟಾಪೂರ ಅವರಿಗೆ ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಅವಾರ್ಡ್-2024 ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗುವುದೆಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟೀಯ ಅಧ್ಯಕ್ಷ ಡಾ. ಎಸ್. ಪಿ ಸುಮನಾಕ್ಷರ ತಿಳಿಸಿದರು.
ಲಿಂಗಸೂಗೂರಿನ ಶ್ರೀ ಸಿದ್ಧಗಂಗಾ ನವೋದಯ ತರಬೇತಿ ಕೇಂದ್ರದ ಸಂಚಾಲಕ, ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಮರೇಶ ವೆಂಕಟಾಪೂರ ಅವರಿಗೂ, ಈಗಾಗಲೇ ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಮಾಜಮುಖಿಯಾಗಿ ತುಳಿತಕ್ಕೊಳಗಾದವರ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿರುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರ ಸೇವೆಯು ಇನ್ನೂ ಹೆಚ್ಚಾಗಲಿ ಎಂಬ ಸದುದ್ದೇಶದಿಂದ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ, ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ನಾವು ಪ್ರತಿವರ್ಷದಂತೆ ಈ ವರ್ಷವೂ ಡಿ. 08, 09 ರಂದು ನಡೆಯುವ ಸಮ್ಮೇಳನದಲ್ಲಿ ಗೌರವಿಸಲಿದ್ದೇವೆ ಹಾಗೂ ದೀನದಲಿತರಿಗೆ ಸಂಬಂಧಿಸಿದ ವಿವಿಧ ಸಂಶೋಧನಾ ಪ್ರಬಂಧಗಳನ್ನು, ಸಮಸ್ಯೆಗಳ ಬಗ್ಗೆಯೂ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಲಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯ್ ಸುಮನಾಕ್ಷರ್ ಹೇಳಿದರು.
ಇವರ ಕೈಯಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳು ಇಂದು ಒಂದಲ್ಲ ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಸಮಾಜಮುಖಿಯಾಗಿ ಮುನ್ನಡೆಯುತ್ತಿರುವ ಅಮರೇಶ ವೆಂಕಟಾಪೂರು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ವಿವಿಧ ಜನಪರ ಸಂಘಟನೆಗಳು, ಮುಖಂಡರು, ವಿದ್ಯಾರ್ಥಿಗಳು, ಹಿತೈಷಿಗಳು, ಕುಟುಂಬ ವರ್ಗದವರು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ