ಇದು ಯಾವ ಜನ್ಮದ ಋಣವೋ?

 

ಭಾವದಂಗಳ -21

ಒಳ್ಳೆಯವರಿಗೆ ಒಳ್ಳೆಯದೇ ಆಗುವುದು,ನಾವು ಮಾಡಿದ ಒಳ್ಳೆಯ ಕೆಲಸಗಳು,ದಾನ, ಧರ್ಮ ನಮ್ಮನ್ನು ಕಾಯುವುದು,ಸತ್ಯಕ್ಕೆ ಸಾವಿಲ್ಲ,ನ್ಯಾಯ ಎಂದಿಗೂ ಗೆದ್ದೇ ಗೆಲ್ಲುವುದು,ಎಂಬಿತ್ಯಾದಿ ಮಾತುಗಳು ಒಂದಲ್ಲ ಒಂದು ಸಂದರ್ಭದಲ್ಲಿ ಕೇಳುತ್ತಲೇ ಇರುತ್ತೇವೆ.ನ್ಯಾಯ,ಸತ್ಯ,ಪ್ರಾಮಾಣಿಕತೆಯ ಬಗ್ಗೆ ಬಹಳಷ್ಟು ನೀತಿ ಕಥೆಗಳು ಕೂಡ ಇಂತಹ ವಿಚಾರಗಳನ್ನು ನಂಬಲು ಇಂಬು ನೀಡುತ್ತವೆ. 

ಜನ್ಮ ,ಪುನರ್ಜನ್ಮದ ಬಗ್ಗೆ ಸಮಾಜದಲ್ಲಿ ಸಾಕಷ್ಟು ನಂಬಿಕೆಗಳಿವೆ.ನಾವು ಇಂದು ಏನಾಗಿದ್ದೇವೋ ಅದು ನಮ್ಮ ಹಿಂದಿನ ಜನ್ಮದ ಕರ್ಮ ಫಲ,ಮುಂದೆ ಏನಾಗ ಬೇಕೋ ಅದೆಲ್ಲವೂ ನಾವು ಮಾಡಿದ ಪಾಪ ಪುಣ್ಯದ ಫಲ ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ.ಇದು ಬಹಳಷ್ಟು ಬಾರಿ ನಮ್ಮ ಅನುಭವಕ್ಕೆ ಬಂದಿರುತ್ತದೆ.ಆಗೆಲ್ಲಾ ಈ ಮಾತುಗಳು ಎಷ್ಟು ಸತ್ಯ ಎಂದು ನಮಗೆ ನಾವೇ ಹೇಳಿ ಕೊಳ್ಳುತ್ತೇವೆ.ಆದರೆ ಇದೆಲ್ಲಾ ಕೇಳುವಾಗ ಮನಸ್ಸಿನಲ್ಲಿ ಒಂದು ಜಿಜ್ಞಾಸೆ ಮೂಡುವುದು.ಜನ್ಮ ,ಪುನರ್ಜನ್ಮ ಎನ್ನುವುದು ಸತ್ಯವೇ?ಅಥವಾ ಇದೆಲ್ಲಾ ಮನುಷ್ಯನನ್ನು ದಿಕ್ಕು ತಪ್ಪಿಸುವ ಮಾತುಗಳೇ? ಎನ್ನುವುದು ಅರ್ಥವಾಗುವುದಿಲ್ಲ. 

*ಪಾಪವೋ? ಪುಣ್ಯವೋ?* 

ಕೆಲವೊಮ್ಮೆ ಜೀವನದಲ್ಲಿ ಅನುಭವಿಸಲಾಗದ ಕಷ್ಟಗಳು ಎದುರಾಗುತ್ತದೆ.ಒಂದರ ಮೇಲೊಂದು ಸವಾಲುಗಳು ಬೆನ್ನಟ್ಟಿ ಬರುತ್ತವೆ. ಅಬ್ಭಾ ಒಂದು ಮುಗಿಯಿತು ಎಂದು ನಿಟ್ಟುಸಿರು ಬಿಡುವಷ್ಟಲ್ಲಿ ಇನ್ನೊಂದು ತಯಾರಾಗಿ ಕಾದು ಕುಳಿತಿರುತ್ತವೆ.ನಾವೇನು ತಪ್ಪು ಮಾಡಿಲ್ಲ,ಯಾವುದೇ ಪಾಪವೂ ಮಾಡಿಲ್ಲ,ಘೋರ ಅಪರಾಧ ಮಾಡಿದವರೇ ರಾಜಾರೋಷದಿಂದ ಓಡಾಡುತ್ತಿರುವಾಗ ತನಗೇಕೆ ಈ ಪರಿಯ ಶಿಕ್ಷೆ ಎಂದು ಪರಿತಪಿಸುತ್ತೇವೆ.ಅದೆಷ್ಟೋ ಬಾರಿ ಎಲ್ಲರ ಕಷ್ಟಕ್ಕೆ ನೆರವಾದ ನಮ್ಮ ಬಾಳು ನೀರಿನಲ್ಲಿರುವ ದೋಣಿಯಂತೆ ಆಗುವುದು.ಎಲ್ಲರನ್ನೂ ನದಿಯಿಂದ ಪಾರು ಮಾಡಿದ ದೋಣಿ ಕೊನೆಗೆ ನೀರಲ್ಲೇ ಉಳಿದು ದಡ ಸೇರದ ದೋಣಿಯಾಗಿ ಬಿಡುತ್ತದೆ.ಇದೇ ರೀತಿ ಎಲ್ಲರನ್ನೂ ಸಮಸ್ಯೆಯ ಸುಳಿಯಿಂದ ಪಾರು ಮಾಡಿದ ನಾವು ಮಾತ್ರ ಕಷ್ಟದಲ್ಲೇ ಜೀವನ ಸಾಗಿಸ ಬೇಕಾದ ಪರಿಸ್ಥಿತಿ ಬರುತ್ತದೆ.ಆಗೆಲ್ಲಾ ಮನಸ್ಸು ಪಾಪ ಪುಣ್ಯಗಳ ಲೆಕ್ಕಾಚಾರದಲ್ಲಿ ಎದ್ದು ಬಿದ್ದು ಪರೋಪಕಾರವೇ ಪುಣ್ಯ ಎನ್ನುವ ಮಾತು ಸತ್ಯಕ್ಕೆ ದೂರವಾದುದು ಎಂದೆನಿಸುವುದು.ನಮ್ಮ ಬಳಿ ಎಲ್ಲವೂ ಇದ್ದಾಗ ಬಂಧು ಮಿತ್ರರು ಜೊತೆಗಿರುವುದು ದೊಡ್ಡ ವಿಚಾರವಲ್ಲ. ಅದೇ ನಮ್ಮ ಬಳಿ ಏನೂ ಇಲ್ಲದೆ ಖಾಲಿ ಕೈಯಾದಾಗ ಅನಿರೀಕ್ಷಿತವಾಗಿ ನಮ್ಮ ಬದುಕಿಗೆ ಇನ್ಯಾರೋ ಅಧಾರವಾಗುತ್ತಾರಲ್ಲ! ಅದೇ ವಿಸ್ಮಯ.

*ಯಾವ ಜನ್ಮದ ಮೈತ್ರಿ*

ಜೀವನದಲ್ಲಿ ನಾವು ಅದೆಷ್ಟು ಜನರಿಗೆ ಸಹಾಯ ಮಾಡಲಿ, ಅದೆಂಥಾ ಕಷ್ಟದ ಸಂದರ್ಭದಲ್ಲಿ ಹೆಗಲಿಗೆ ಹೆಗಲಾಗಿ ನಿಲ್ಲಲಿ ನಮಗೆ ಕಷ್ಟ ಎಂದು ಬಂದಾಗ,ತೊಂದರೆಗೆ ಸಿಲುಕಿದಾಗ ಅವರಾರು ನಮ್ಮ ಕಷ್ಟಕ್ಕಾಗದೆ ಮತ್ಯಾರೋ ನಮ್ಮ ಪಾಲಿಗೆ ನೆರವಾದಾಗ ಮನದಲ್ಲಿ ಮೂಡುವ ಭಾವ ಪದಗಳಿಗೂ ನಿಲುಕದ್ದು.ನಾವು ಒಬ್ಬರಿಗೆ ಸಹಾಯ ಮಾಡಿದರೆ,ನಮಗೆ ಇನ್ಯಾರೋ ಸಹಾಯ ಮಾಡುತ್ತಾರೆ,ಎನ್ನುವುದು ನಿಜ ಎಂದು ಬಲವಾಗಿ ನಂಬುವಂತೆ ಆಗುವುದು.ಪ್ರತಿಯೊಬ್ಬರ ಬದುಕಿನಲ್ಲೂ ನಡೆದಿರುವ ಇಂತಹ ಘಟನೆಗಳು ನಮ್ಮೊಳಗೆ ನಾವು ಇಣುಕಿ ನೋಡುವಂತೆ ಮಾಡುವುದು.

*ಬದಲಾವಣೆಯ ಬದುಕು*

ಯಾವ ಜನ್ಮದ ಮೈತ್ರಿಯೋ? ಕೆಲವೊಂದು ಪರಿಚಯಗಳು ಎಲ್ಲೋ ಕಳೆದು ಹೋಗಿರುವ ನಗುವನ್ನು ಮತ್ತೆ ಮರಳಿ ಅರಳಿಸುತ್ತದೆ.ಜೀವನದಲ್ಲಿ ನೆಮ್ಮದಿಯಾಗಿರಲು ದೊಡ್ಡ ದೊಡ್ಡ ಉಡುಗೊರೆಗಳು ಬೇಕಿಲ್ಲ ಸಣ್ಣ ಸಣ್ಣ ಖುಷಿಗಳೇ ಸಾಕು. ಜೀವನದಲ್ಲಿ ನಾವು ಬಯಸಿದ್ದೆಲ್ಲಾ ಸಿಗದೇ ಹೋಗಬಹುದು.ಕೆಲವೊಂದು ವ್ಯಕ್ತಿಗಳನ್ನು ,ವಸ್ತುಗಳನ್ನು ಇಷ್ಟ ಪಡಬಹುದೇ ಹೊರತು ಪಡೆದುಕೊಳ್ಳಲು ಸಾಧ್ಯವಿಲ್ಲ. ಬದಲಾವಣೆಗೆ ಒಗ್ಗಿಕೊಂಡಾಗ ಬದುಕು ಸರಳ.ಯಾರಿಗಾಗಿಯೋ ಕಾದು ನಮ್ಮ ಬದುಕನ್ನು ವ್ಯರ್ಥಗೊಳಿಸಬಾರದು.ಋತುಗಳು ಯಾರಿಗೂ ಕಾಯುವುದಿಲ್ಲ,ಗಿಡ ಮರಗಳು ತಮ್ಮ ಪಾಡಿಗೆ ತಾವು ಚಿಗುರುತ್ತವೆ ,ಹೂವುಗಳು ತಮ್ಮ ಪಾಡಿಗೆ ತಾವು ಅರಳುತ್ತವೆ.ಯಾರೂ ಯಾರಿಗೂ ಕಾಯುವ ಅನಿವಾರ್ಯತೆ ಇಲ್ಲ.ಇಲ್ಲಿ ಅನುಭವವೇ ಪ್ರಾಧಾನ್ಯ. ಬದುಕೊಂದು ಭಗವದ್ಗೀತೆ,ಅನುಭವ ಆಗದೇ ಅರ್ಥ ಆಗುವುದಿಲ್ಲ.ಪಾಪ ಪುಣ್ಯಗಳ ಲೆಕ್ಕಾಚಾರವನ್ನು ಪಕ್ಕಕ್ಕಿರಿಸಿ ಬದುಕು ಬಂದಂತೆ ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿ ಕೊಳ್ಳೋಣ. ಅಲ್ಲವೇ?

*ಪ್ರಜ್ವಲಾ ಶೆಣೈ*

*ಕಾರ್ಕಳ*✍️✍️

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*