*ಭಾವದಂಗಳ 20*
*ನಡುವೆ ಅಂತರವಿರಲಿ*
ಪರಿಚಯವಾದ ಹೊಸತರಲ್ಲಿ ಎಲ್ಲವೂ ಸುಂದರ.ಬಿಡುವಿಲ್ಲದ ಮಾತುಕತೆ,ಎಡೆಬಿಡದೆ ರವಾನೆಯಾಗುವ ಸಂದೇಶಗಳು, ಮುಗಿಯದ ಕರೆ ಕಾಳಜಿ,ಆತ್ಮೀಯತೆ. ಇದೆಲ್ಲದರ ನಡುವೆ ಎಷ್ಟು ಬೇಗ ಪರಿಚಿತರಾಗುತ್ತೇವೆಯೋ, ಅಷ್ಟೇ ಬೇಗ ಅಪರಿಚಿತ ರಾಗಿ ಬಿಡುತ್ತೇವೆ ಅನ್ನುವುದು ಸೋಜಿಗ.ಹೀಗೇಕೆ ಎನ್ನುವ ಪ್ರಶ್ನೆ ಸದಾ ಕಾಡುವುದು.
ಕೆಲವರು ಇದ್ದಕ್ಕಿದ್ದ ಹಾಗೆ ಬದಲಾಗುತ್ತಾರೆ.ಇವತ್ತು ನಾವು ಅವರಿಗೆ ಅಗತ್ಯ ಎಂದು ಅನ್ನಿಸಿರಬಹುದು, ಇನ್ನು ಕೆಲವು ದಿನ ಕಳೆದರೆ ನಾವು ಅವರಿಗೆ ಏನೂ ಅಲ್ಲ ,ನಮಗಿಂತಲೂ ಇನ್ನೊಬ್ಬರು ಅಗತ್ಯ ಎಂದು ಅನ್ನಿಸಬಹುದು ಹೀಗಾಗಿ ಯಾವಾಗಲೂ ಏಕಾಂಗಿಯಾಗಿ ಬದುಕಲು ತಯಾರಾಗಿರಬೇಕು, ಇದೇ ಜೀವನ, ಇದೇ ವಾಸ್ತವ.
*ಅನಿವಾರ್ಯತೆ ತಂದ ಬದಲಾವಣೆ*
ಬೆಳೆಯುತ್ತಾ ಬೆಳೆಯುತ್ತಾ ಅನಿವಾರ್ಯತೆಯೋ,
ಅವಶ್ಯಕತೆಯೋ? ಭಯವೋ? ನಾನಾ ರೀತಿಯ ಒತ್ತಡ,ಸಂಕಟಗಳ ಸುಳಿಗೆ ಸಿಲುಕಿ ಒದ್ದಾಡುತ್ತೇವೆ.ಸಹಜವಾಗಿ ಇರಬೇಕಾದ ನಗು,ಖುಷಿ,ಮುಗ್ಧತೆ,ತುಂಟಾಟ ಮರೆಯಾಗಿ ಬಿಡುತ್ತದೆ.ಬದುಕಿನಲ್ಲಿ ಒಮ್ಮೊಮ್ಮೆ ಏನಾಗುತ್ತಿದೆ? ಏಕೆ ಹೀಗಾಗುತ್ತಿದೆ?ಮುಂದೇನು ಮಾಡುವುದು ಎನ್ನುವ ಗೊಂದಲ ಮೂಡುತ್ತದೆ. ವ್ಯಕ್ತಿಗಳು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ? ಎನ್ನುವುದನ್ನುಕಲ್ಪಿಸಿ ಕೊಳ್ಳುವುದೂಕಷ್ಟ.ಪ್ರತಿಯೊಬ್ಬರಿಗೆ ಒಂದಲ್ಲ ಒಂದು ಸಂದರ್ಭದಲ್ಲಿ ನೋವಾಗುತ್ತದೆ,ಭಯವೂ ಆಗುತ್ತದೆ,ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಕುಗ್ಗುತ್ತಾರೆ ಇನ್ನೇನು ಬದುಕು ಮುಗಿದೇ ಹೋಯಿತು ಎನ್ನುವಾಗ ಸೋತ ಮನಸ್ಸಿಗೆ ಭರವಸೆ ತುಂಬುವ ಗೆಳೆತನ ಸಿಕ್ಕರೆ ಅದೇ ಭಾಗ್ಯ.ನಾಳೆಯ ಬದುಕಿಗೆ ಅದೇ ಪ್ರೇರಣೆ.ಸಿಕ್ಕ ಸ್ನೇಹ ಅತಿಯಾದರೆ ಕೆಲವೇ ದಿನಗಳಲ್ಲಿ ಮಾಯ ವಾಗಬಹುದು.ಏನೇ ಆದರೂ ಬದಲಾವಣೆಯನ್ನು ಒಪ್ಪಿಕೊಂಡು ಮುಂದೆ ಸಾಗುವ ಮನಸ್ಥಿತಿ ಬೆಳೆಸಿ ಕೊಳ್ಳಬೇಕು.
*ನನಸಾಗಬಹುದೇ ಕಂಡ ಕನಸು?*
ಒಂದು ದಿನ ಕನಸು ನನಸನ್ನು ಕೇಳುತ್ತದೆ.ನಾನು ಯಾವಾಗಲೂ ಕನಸೇ ಕಾಣುತ್ತಿದ್ದರೆ ನನಸಾಗುವುದು ಯಾವಾಗ? ಎಂದು.ಆಗ ನನಸು ಹೇಳುತ್ತದೆ “ಸಮಯ ಬಂದಾಗ ಸಿಗಬೇಕಾದದ್ದು ನಮ್ಮನ್ನು ಹುಡುಕಿ ಕೊಂಡು ಬಂದೇ ಬರುವುದು”ಎಂದು.ಸಮಯದ ಜೊತೆಗೆ ಪ್ರಯತ್ನ ಬಲವೂ ಇದ್ದರೆ ನಮ್ಮ ಕನಸು ಶೀಘ್ರದಲ್ಲಿಯೇ ನನಸಾಗುವುದು.ಕೆಲವೊಮ್ಮೆ ಸಮಯ ಕೂಡಿ ಬರುವ ವರೆಗೆ ಕಾಯುವುದೇ ನಮ್ಮ ಬದುಕಾಗುತ್ತದೆ.ಆದರೆ ಕಂಡ ಕನಸು ನನಸಾಗಿ ನಮ್ಮ ಬಾಳಿನಲ್ಲಿ ಸಿಹಿ ತುಂಬುವ ಘಳಿಗೆ ಒಂದಲ್ಲ ಒಂದು ದಿನ ಬಂದೇ ಬರುವುದು.
*ಅತಿಯಾದರೆ ಅಮೃತವೂ ವಿಷ*
ಸ್ನೇಹವಾಗಲಿ,ಪ್ರೀತಿಯಾಗಲಿ ಯಾವಾಗಲೂ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ.ಹೆಚ್ಚಿನ ಎಲ್ಲಾ ಸಂಬಂಧಗಳು ಪ್ರೀತಿ,ಸ್ನೇಹ ಅವಶ್ಯಕತೆ ಎನ್ನುವ ಕ್ಷಣಿಕ ಬಂಧಕ್ಕೆ ಸೀಮಿತ.ಅಗತ್ಯ ಇರುವಷ್ಟು ಹೊತ್ತು ಮಾತ್ರ ಬಂಧುತ್ವ.ಅವಶ್ಯಕತೆ ಮುಗಿದ ಬಳಿಕ ಯಾವ ಬಂಧವೆ ಆಗಲಿ ಭಾರವೇ.ನಮ್ಮ ಮನಸ್ಸು ಬಾಧೆ ಪಡಲು ದೊಡ್ಡ ವಿಚಾರಗಳು ಬೇಕಿಲ್ಲ.ನಾವು ಅತಿಯಾಗಿ ಪ್ರೀತಿಸುವವರ ಒಂದು ನಿರ್ಲಕ್ಷ್ಯದ ಮಾತು ಸಾಕು.ಪುಸ್ತಕದ ಮುಂದಿನ ಪುಟದಲ್ಲಿ ಏನಿದೆ ಎಂಬುವುದನ್ನು ತೆರೆದು ನೋಡದ ಹೊರತು ತಿಳಿಯದು. ಅದೇ ರೀತಿ ನಮ್ಮ ಬದುಕಿನ ಮುಂದಿನ ಅಧ್ಯಾಯವೂ ಅರಿವಿಗೆ ಬಾರದು.
*ಬದುಕಿನ ಪುಟ ತೆರೆದಾಗ*
ಮನಸ್ಸಿನ ಒಳಪುಟ ತೆರೆದಾಗ ಅಂತರಾಳದಲ್ಲಿ ಅಡಗಿರುವ ಹತಾಶೆ,ನಿರಾಸೆ, ನೋವುಗಳೆಲ್ಲವೂ ಒಂದೊಂದಾಗಿ ಹೊರಬರುವುದು.ಸಂಬಂಧಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ.ನಾವು ಸಂತೋಷವನ್ನು ಖರೀದಿಸಲಾರೆವು,ದುಃಖವನ್ನು ಮಾರಲಾರೆವು.ಹೀಗಾಗಿ ಸುಖ ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ನಮ್ಮದಾಗಬೇಕು.ಕೋಪ,ತಾಪ,ನಾಳೆಯ ನಿರೀಕ್ಷೆಗಳನ್ನು ,ನಮ್ಮ ನೆಮ್ಮದಿ ಕೆಡಿಸುವ ವಿಚಾರಗಳನ್ನು ಇಂದೇ ಸುಟ್ಟು ಬಿಡಬೇಕು.ಸಿಟ್ಟನ್ನು ಸುಟ್ಟಾಗ ಮಾತ್ರ ಸಂಬಂಧಗಳಲ್ಲಿ ಬಂಧ ಏರ್ಪಡಲು ಸಾಧ್ಯ.
*ಭ್ರಮೆಯ ಪೊರೆ ಕಳಚಿದಾಗ*
ಕಣ್ಣಿಗೆ ಪೊರೆ ಬಂದಾಗ ಜಗತ್ತೇ ಮಬ್ಬಾಗಿ ಕಾಣಿಸುತ್ತದೆ.ಆದರೆ ನೈಜವಾಗಿ ಜಗತ್ತಿನ ಬೆಳಗು ಒಂದಿಷ್ಟು ಕುಂದಿರುವುದಿಲ್ಲ.ಹೀಗೆಯೇ ನಮ್ಮ ಮನಸ್ಸಿಗೆ ಆಗಾಗ ಒಂದು ಭ್ರಮೆ ಎಂಬ ಪೊರೆ ಉಂಟಾಗುತ್ತದೆ. ನಾವೆಂದರೆ ಅವರಿಗೆ ಬಹಳ ಇಷ್ಟ,ನಮ್ಮ ಬಗ್ಗೆ ವಿಶೇಷ ಪ್ರೀತಿ,ಕಾಳಜಿ.ಅವರೆಂದಿಗೂ ನಮ್ಮ ಬೆನ್ನ ಹಿಂದೆ ಮಾತಾನಾಡುವುದಿಲ್ಲ ,ಇತ್ಯಾದಿ ಭ್ರಮೆಗಳು ಕಣ್ಣನ್ನು ಕುರುಡಾಗಿಸುತ್ತದೆ.ಮನಸ್ಸು ಕಪ್ಪೆಯಂತೆ,ಒಂದೆಡೆ ನಿಲ್ಲುವುದೇ ಇಲ್ಲ ಎನ್ನುವ ಸತ್ಯ ಗೊತ್ತಿದ್ದರೂ ಅದ್ಯಾಕೋ ಮನಸ್ಸು ಇಲ್ಲದ ಕನಸುಗಳಿಗೆ ರೆಕ್ಕೆಯಾಗುತ್ತದೆ.ತಕ್ಕಡಿಯಲ್ಲಿ ಕೂರಿಸಿದ ಕಪ್ಪೆಯನ್ನು ಅಳೆಯಲಾಗದು.ಒಂದನ್ನು ಹಿಡಿದಿಟ್ಟು ಕೊಳ್ಳುವಷ್ಟರಲ್ಲಿ ಇನ್ನೊಂದು ಹಾರಿ ಹೋಗುವುದು.ವ್ಯಕ್ತಿಗಳೂ ಹಾಗೆ,ಇಂದು ನಾವು ವಿಶೇಷ ಅನ್ನಿಸಿದರೂ ನಮಗಿಂತಲೂ ವಿಶೇಷ ಎನ್ನುವ ವ್ಯಕ್ತಿಗಳ ಹುಡುಕಾಟ ಸದಾ ಇರುತ್ತದೆ.ಹೀಗಾಗಿ ನಮ್ಮೊಂದಿಗೆ ಎಲ್ಲರೂ ಇದ್ದಾರೆ ಎನ್ನುವ ಭ್ರಮೆ ಕಳಚದ ಹೊರತು ನಮ್ಮ ಗುರಿ ತಲುಪಲು ಸಾಧ್ಯವಿಲ್ಲ.ಸಾವಿರ ಅಡಿಯಿಂದ ನೆಲಕ್ಕೆ ಬಿದ್ದ ಸಾಸಿವೆ ಸದ್ದು ಮಾಡುವುದಿಲ್ಲ,ಆದರೆ ಕೆಲವೇ ದೂರದಿಂದ ಬಾಣಲೆಗೆ ಬಿದ್ದ ಸಾಸಿವೆ ಸಿಡಿದು ಸದ್ದು ಮಾಡುತ್ತದೆ.ಅಂದರೆ ವ್ಯಕ್ತಿಯ ಗುಣ,ಸ್ವಭಾವ ಅರಿವಾಗಬೇಕಾದರೆ ಜಾಗ ಮತ್ತು ಸಮಯ ಬದಲಾಗಬೇಕು. ಒಮ್ಮೆ ನದಿಯಲ್ಲಿ ಸಾಗಬೇಕಾದರೆ ಭಾರ ಹೆಚ್ಚಾಗಿ ದೋಣಿ ಮುಳುಗಲು ಆರಂಭವಾಯಿತು.ಎಂದಿಗೂ ನಿನ್ನ ಜೊತೆಯಾಗಿರುವೆ ಎಂದು ಹೇಳಿರುವ ಬಂಧುಗಳೆಲ್ಲ ಒಬ್ಬೊಬ್ಬರಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿದರು.ಕೊನೆಗೆ ಈಜು ಬಾರದ ಇಬ್ಬರು ಮಾತ್ರ ದೋಣಿಯಲ್ಲೇ ಉಳಿದರು.ಆದರೆ ಆಶ್ಚರ್ಯವೆಂದರೆ ಭಾರ ಕಡಿಮೆಯಾಗಿ ದೋಣಿ ಮುಳುಗಲೇ ಇಲ್ಲ. ನಮ್ಮ ಜೀವನದಲ್ಲೂ ಇಷ್ಟೇ ನಮ್ಮೊಂದಿಗೆ ಕೊನೆಯವರೆಗೆ ಎಲ್ಲರೂ ಇರುತ್ತಾರೆ ಎನ್ನುವುದು ಭ್ರಮೆ.ಅವರವರ ಅಗತ್ಯತೆ ಮುಗಿದಾಗ ಎಲ್ಲರೂ ತೆರಳುವವರೇ.ಹೀಗಾಗಿ ಕೊನೆಗೆ ನಮ್ಮೊಂದಿಗೆ ಉಳಿಯುವವರು ನಾವೊಬ್ಬರೇ. ಈ ಜಗತ್ತಿಗೆ ಬಂದಿರುವುದು ಏಕಾಂಗಿಯಾಗಿಯೇ,ಹೋಗಲಿರುವುದು ಒoಟಿಯಾಗಿಯೇ.ನಮ್ಮ ನಮ್ಮ ಸಮಯ ಬಂದಾಗ ನಾವು ತೆರಳಲೇ ಬೇಕು. ಹೂವುಗಳು ಎಂದಿಗೂ ಇನ್ನೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ.ತಮ್ಮ ಪಾಡಿಗೆ ಅರಳುವುದಷ್ಟೇ ಅವುಗಳ ಕೆಲಸ.ಹೀಗೆಯೇ ನಾವು ಕೂಡ ಹೂಗಳಂತೆ ಸುಂದರವಾದ ವ್ಯಕ್ತಿತ್ವ ರೂಪಿಸಿ ಕೊಳ್ಳೋಣ.ಎಷ್ಟೇ ನಂಬಿಕೆ,ಪ್ರೀತಿ,ವಿಶ್ವಾಸ ಇದ್ದರೂ ನಡುವೆ ಅಂತರ ಕಾಯ್ದುಕೊಂಡು ಧೈರ್ಯದಿಂದ ಜಗತ್ತನ್ನು ಎದುರಿಸೋಣ.ಅಲ್ಲವೇ?
*ಪ್ರಜ್ವಲಾ ಶೆಣೈ*
*ಕಾರ್ಕಳ*

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ