ಹಡಗಲಿ ಗ್ರಾಮದ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತ್ ಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ
ಮಸ್ಕಿ : ತಾಲೂಕಿನ ಹಡಗಲಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ, ಮೃತರ ಗೌರವಯುತ ಅಂತ್ಯಕ್ರಿಯೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ, ಗ್ರಾಮಸ್ಥರು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಅವರ ಮೂಲಕ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಡಗಲಿ ಸೀಮಾದಲ್ಲಿ ಬರುವ ಸರ್ವೆ ನಂ.04*/2 ವಿಸ್ತೀರ್ಣ 27 ಗುಂಟೆ ಜಮೀನಿನಲ್ಲಿ ನೂರಾರು ವರ್ಷಗಳಿಂದ ಗ್ರಾಮದ ಎಲ್ಲ ಸಮುದಾಯದವರು ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ, ಸ್ಮಶಾನ ಜಾಗದ ಪಕ್ಕದಲ್ಲಿ ಜಮೀನು ಹೊಂದಿರುವ ಅಮರಮ್ಮ ಬಸಪ್ಪ ಎಂಬುವವರು ಇತ್ತೀಚಿಗೆ ನಾಲ್ಕೈದು ವರ್ಷಗಳಿಂದ ಸ್ಮಶಾನದ ಭೂಮಿಯನ್ನು ಅತಿಕ್ರಮಿಸಿ ಶವ ಸಂಸ್ಕಾರಕ್ಕೆ ಅವಕಾಶ ಕೊಡದೇ ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್ ಅವರಿಗೆ ನವೆಂಬರ್ 6, 2023ರಂದು ಮನವಿ ಸಲ್ಲಿಸಿ, ವಿವಾದವನ್ನು ಪರಿಹರಿಸಲು ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿಕೊಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಕ್ರಿಯೆ ನೆರವೇರಿಸಲು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರ ಗಮನ ಸೆಳೆದರು.
ಆದಷ್ಟು ಶೀಘ್ರ ಹದ್ದುಬಸ್ತು ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಸ್ಮಶಾನ ಜಾಗದ ವಿವಾದವನ್ನು ಸುಖಾಂತ್ಯಗೊಳಿಸಬೇಕು, ಒಂದು ವೇಳೆ ನಿರ್ಲಕ್ಷ ಮುಂದುವರಿಸಿದ್ದೇ ಆದಲ್ಲಿ ತಹಸೀಲ್ ಕಾರ್ಯಾಲಯದ ಮುಂದೆ ಅನಿರ್ದಿಷ್ಟ ಧರಣಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದುರುಗಪ್ಪ ಕಟ್ಟಿಮನಿ, ಡಿಎಸ್‌ಎಸ್ ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಅಶೋಕ ನಂಜಲದಿನ್ನಿ, ತಿಪ್ಪಣ್ಣ ಕಂಬಾರ, ಮುದ್ದಪ್ಪÀ, ಹೇಮಣ್ಣ ತಳವಾರ, ಹನುಮಂತಪ್ಪ ಕಂಬಳಿ, ಮೌಲಪ್ಪ ನಾಯಕ, ಬಸಪ್ಪ ಕಂಬಳಿ, ಛತ್ರಪ್ಪ ಭಂಗಿ, ಮಹಾದೇವಪ್ಪ, ಚಂದ್ರಶೇಖರ ಕ್ಯಾತ್ನಟ್ಟಿ ಬಸವರಾಜ ಹಳ್ಳಿ, ನಾಗರಾಜ ಕುಣೆಕೆಲ್ಲೂರು, ದಾನಪ್ಪ ಮೆದಿಕಿನಾಳ, ನಾಗರಡ್ಡೆಪ್ಪ ಬುದ್ದಿನ್ನಿ ಸೇರಿದಂತೆ ವಿವಿಧ ಸಂಘಟನೆಗಳ ಹೋರಾಟಗಾರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ