*ಅಂಕಣ: ಭಾವಸ್ಪರ್ಶ* *ಭಾಗ್ಯದ ಬಾಗಿಲು ತೆರೆದಾಗ*

ಅದೃಷ್ಟ,ದುರಾದೃಷ್ಟ ಎನ್ನುವುದು ಇದೆಯೋ ಇಲ್ಲವೋ ತಿಳಿಯದು.ಆದರೆ ನಮ್ಮ ನಿರಂತರ ಪರಿಶ್ರಮ,ಬದ್ಧತೆ,ಪ್ರಯತ್ನವಿದ್ದರೆ ಖಂಡಿತವಾಗಿಯೂ ಗೆಲುವಿನ ಮೆಟ್ಟಿಲನ್ನು ಏರಬಹುದು.ಅವಕಾಶಗಳೆಂಬ ಅದೃಷ್ಟ ಬಾಗಿಲು ಬಡಿದಾಗ ,ಅಯ್ಯೋ! ಇದು ನನ್ನಿಂದ ಸಾಧ್ಯವೇ? ನಾನೇನಾದರೂ ಸೋತು ಹೋದರೆ, ಎದ್ದು ನಿಲ್ಲಲು ಸಾಧ್ಯ ಆಗದೇ ಹೋದರೆ ಎನ್ನುವ ಋಣಾತ್ಮಕ ಯೋಚನೆಗಳು ನಮ್ಮ ಮಸ್ತಕವನ್ನು ಸುತ್ತಿಕೊಂಡರೆ ಅಲ್ಲಿಗೆ ಮುಗಿಯಿತು. ಬಾಗಿಲು ತೆಗೆಯುವ ಧೈರ್ಯವೇ ಹುಟ್ಟುವುದಿಲ್ಲ.ನಾವು ಧೈರ್ಯಮಾಡಿ ಬಾಗಿಲು ತೆರೆಯುವ ನಿರ್ಧಾರ ಮಾಡುವಷ್ಟರಲ್ಲಿ ಅದೃಷ್ಟ ಕೈತಪ್ಪಿ ಅವಕಾಶ ಬೇರೊಬ್ಬರ ಪಾಲಾಗಿರುತ್ತದೆ.

*ಬದಲಾವಣೆಯ ಹಾದಿಯಲ್ಲಿ*

ಎಲ್ಲಾ ಇದ್ದು ಕೊರಗುವ ನಾವುಗಳು ಏನೂ ಇಲ್ಲದವರನ್ನು ನೋಡಬೇಕು.ನಮಗೆ ಇಷ್ಟವಾಗದ ನಮ್ಮ ಬದುಕು ಎಷ್ಟೋ ಜನರ ಪಾಲಿನ ಕನಸು.

ಜೀವನದ ಒಂದು ತಿರುವು,ಬದುಕಿನ ದಿಕ್ಕನ್ನೇ ಬದಲಿಸಬಹುದು.ಬದುಕು ಹೀಗೆಯೇ ಎಂದು ಯಾರೂ ಖಡಾ ಖಂಡಿತವಾಗಿ ಹೇಳಲು ಸಾಧ್ಯವಿಲ್ಲ.ಬದುಕು ವಿಧಿ ಲಿಖಿತ,ಯಾವುದೂ ನಮ್ಮ ಕೈಯಲ್ಲಿಲ್ಲ,ಎಂದು ಎಷ್ಟೋ ಬಾರಿ ಅನ್ನಿಸುವಂತೆ ಘಟನೆಗಳು ನಡೆಯಬಹುದು.ಆದರೂ ಇದನ್ನೆಲ್ಲ ಮೀರಿ ನಿಂತು ನಮ್ಮ ಬದುಕನ್ನು ಸುಂದರವಾಗಿಸುವುದು ಮಾತ್ರ ನಮ್ಮ ಕೈಯಲ್ಲೇ ಇದೆ.ಪ್ರತಿಯೊಂದು ಮುಕ್ತಾಯದ ಹಿಂದೆ ಹೊಸ ಆರಂಭವೊಂದು ಇರುವಂತೆ ತಾಳ್ಮೆಯಿಂದ ಜಗತ್ತನ್ನು ಎದುರಿಸಬೇಕು.

*ಹೆಜ್ಜೆ ತಪ್ಪಿದರೂ ತಾಳ ತಪ್ಪದ ನಿರ್ಧಾರ*

 ಅವನೊಬ್ಬ ಪುಟ್ಟ ಪೋರ.ಆತ ಎಲ್ಲರಂತಲ್ಲ,ವಿಭಿನ್ನ ವಿಸ್ಮಯ,ವಿಚಿತ್ರವೆಂದರೆ ಎಲ್ಲರೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಈತನ ಉತ್ತರ ಪತ್ರಿಕೆಯಲ್ಲಿ ಅಂಕಗಳು ಮಾತ್ರ ಅಲ್ಲಲ್ಲಿ ಒಂದು, ಎರಡು ಸಂಖ್ಯೆಗಳು ಎಣಿಸುತ್ತಿತ್ತು. ನೋಡಲು ಸಾಮಾನ್ಯ ಹುಡುಗರಂತೆ ಕಂಡರೂ ಅಕ್ಷರ ಮಾತ್ರ ತಲೆಗೆ ಹತ್ತುತ್ತಿರಲಿಲ್ಲ. ಅಕ್ಷರ,ಪದ ಗುರುತಿಸುವಲ್ಲಿ ಅದೇನು ಸಮಸ್ಯೆ ಆಗುವುದು ಎಂದು ಯಾರಿಗೂ ಅರ್ಥ ಆಗಲಿಲ್ಲ.ಮನೆಯಲ್ಲಿ ತಾತ್ಸಾರದ ಮಾತುಗಳು,ನಿಷ್ಪ್ರಯೋಜಕ ಎನ್ನುವ ಬಿರುದು ತಾನಾಗಿಯೇ ದೊರೆಯಿತು.ಬಣ್ಣದ ಕುಂಚ ಬದುಕನ್ನೇ ಬದಲಾಯಿಸುವುದೆಂದು ಬಹುಶಃ ಯಾರೂ ಎಣಿಸಿರಲಿಲ್ಲ.ಈತನ ಕೈಯಲ್ಲಿ ಅರಳಿದ ಚಿತ್ತಾರಗಳು ಜಗತ್ತನ್ನೇ ವಿಸ್ಮಯಗೊಳಿಸಿತು.ಕೆಲಸಕ್ಕೆ ಬಾರದವನು ಎಂದು ಮೂದಲಿಸಿದವರೇ ಇಂದು ಮೂಗಿನ ಮೇಲೆ ಬೆರಳಿಟ್ಟು ನೋಡುವ ರೀತಿಯಲ್ಲಿ ಬೆಳೆದನು. ಇದೇ ರೀತಿ ನಮ್ಮ ಜೀವನದಲ್ಲೂ ನೂರು ಅಪಮಾನಗಳು ಸುರಿಮಳೆ ಗೈದರೂ,ನಿಂದನೆಯ ಬಾಣಗಳು ಹೃದಯವನ್ನು ಚುಚ್ಚಿದರೂ ನಾವು ಇಷ್ಟ ಪಟ್ಟ ಕೆಲಸ ಮಾಡುತ್ತಾ ಹೋದರೆ ಭಾಗ್ಯದ ಬಾಗಿಲು ಯಾವಾಗ ತೆರೆಯುವುದೋ ತಿಳಿಯುವುದೇ ಇಲ್ಲ.

*ಭರವಸೆಯೇ ಜೀವನದ ದಿಕ್ಸೂಚಿ*

ಹುದುಗಿಟ್ಟ ಭಾವಗಳ ತೆರೆ ಸರಿಸಿ ಪುಟ್ಟ ಜಗತ್ತನ್ನು ಕಣ್ಣರಳಿಸಿ ನೋಡುವಾಗ ಜಗತ್ತು ಕಿರಿದೆನಿಸುತ್ತದೆ.ಆದರೆ ನಿಜವಾದ ಅರ್ಥದಲ್ಲಿ ಕಿರಿದಾಗಿದ್ದು ನಮ್ಮದೃಷ್ಟಿಯೇ ಹೊರತು ಈ ಜಗತ್ತಲ್ಲ.ಈ ಜಗತ್ತಿನಲ್ಲಿ ಯಾವ ಕೆಲಸವೇ ಆಗಲಿ ಎಲ್ಲರಿಗೂ ಒಂದೇ ರೀತಿ ಕಾಣಿಸುವುದಿಲ್ಲ.ಅಸಾಧ್ಯ ಎಂದು ಭಾವಿಸಿದರೆ ಏನನ್ನೂ ಸಾಧಿಸಲಾಗದು.ಇದು ನಮ್ಮಿಂದ ಆಗದು ಎಂದು ಆರಂಭದಲ್ಲಿಯೇ ನಿರ್ಧಾರ ಕೈಗೊಳ್ಳಬಾರದು. ಕನಿಷ್ಠ ಪ್ರಯತ್ನವಾದರೂ ಪಡಬೇಕು.ದೊಡ್ಡ ದೊಡ್ಡ ತಂತ್ರಜ್ಞಾನಗಳು ಇಂದು ಇಷ್ಟು ಬೆಳೆದಿರುವುದು ನಮ್ಮಪ್ರಯತ್ನ ವೆಂಬ ಚಿಕ್ಕ ಬೀಜದಿಂದಲೇ ಹೊರತು ದೊಡ್ಡ ದೊಡ್ಡ ಯೋಜನೆಗಳಿಂದಲ್ಲ.ಹೀಗಾಗಿ ಯಾವುದೇ ಕೆಲಸ ಇರಲಿ ನಮ್ಮ ಪ್ರಯತ್ನ ಗರಿಷ್ಠವಾಗಿರಲಿ.


 ಭಾವನೆಗಳ ಹತೋಟಿ*


ಅದೆಷ್ಟೋ ಬಾರಿ ನಾವು ಜೀವನದಲ್ಲಿ ಉತ್ಸಾಹ ಕಳೆದು ಕೊಳ್ಳುತ್ತೇವೆ.ಯಾವಾಗಲೂ ಶಾಂತ ಸಾಗರದಂತೆ ಇರುವ ಮನಸ್ಸು ಇದ್ದಕ್ಕಿದ್ದಂತೆ ಸುನಾಮಿಯಂತೆ ಉಕ್ಕಿ ಹರಿಯುತ್ತದೆ.ಭಾವನೆಗಳ ತೆಕ್ಕೆಗೆ ಒಳಗಾದರೆ ಮನಸ್ಸು ದುರ್ಬಲವಾಗುತ್ತದೆ.ನಾನು ಏನೂ ಅಲ್ಲ ಎಂದು ಭಾವಿಸುವುದು ಅಥವಾ ನಾನೇ ಎಲ್ಲಾ ಎಂದು ಅಹಂಕಾರ ಪಡುವುದು ಎರಡೂ ಸರಿಯಲ್ಲ.ತಾನು ಏನು ಬೇಕಾದರೂ ಸಾಧಿಸುವ ಸಾಮರ್ಥ್ಯವಿರುವ ಅಸಾಮಾನ್ಯ ವ್ಯಕ್ತಿ ಎಂದು ನಮ್ಮೊಳಗೆ ನಾವೇ ಶಕ್ತಿ ತುಂಬಿಕೊಳ್ಳುವುದು ಇಂದಿನ ಅಗತ್ಯತೆಯೂ ಹೌದು.ನಮ್ಮಿಂದ ಇದು ಸಾಧ್ಯ ಎಂದು ಕೊಳ್ಳುವವರು ಖಂಡಿತವಾಗಿಯೂ ತನ್ನ ಗುರಿ ಮುಟ್ಟಬಲ್ಲರು.ತನ್ನಿಂದ ಆಗದು ಎಂದು ಕುಳಿತವರು ಸೋಲಿಗೆ ಹತ್ತಿರವಾಗುತ್ತಾರೆ. ತಾನಾಗಿ ಬಂದದ್ದನ್ನು ತಿರಸ್ಕರಿಸದೆ ಸ್ವೀಕರಿಸಿದರೆ ನಮ್ಮ ಕನಸಿನ ಬದುಕು ನನಸಾಗುತ್ತದೆ. ಒಂದಲ್ಲ ಒಂದು ದಿನ ಭಾಗ್ಯದ ಬಾಗಿಲು ತೆರೆದೇ ತೆರೆಯುವುದು ಎನ್ನುವ ಆಶಾವಾದದೊಂದಿಗೆ ಹೆಜ್ಜೆ ಇಡೋಣ.ಅಲ್ಲವೇ?✍️✍️✍️✍️*ಪ್ರಜ್ವಲಾ ಶೆಣೈ* 

*ಕಾರ್ಕಳ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ