*ನವಕೊಟ್ಟೂರು ನಿರ್ಮಾಣ ನಮ್ಮೆಲ್ಲರ ಧ್ಯೇಯ*
ಕೊಟ್ಟೂರು : ನವಕೊಟ್ಟೂರು ನಿರ್ಮಾಣ ಎಂದರೆ ಕೊಟ್ಟೂರಿನಲ್ಲಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡುವುದು, ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ಆರ್ಥಿಕ ಬಲವರ್ಧನೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಶ್ರಮಿಸುವ ಪರಿಕಲ್ಪನೆಯಾಗಿದೆ. ಧಾರ್ಮಿಕ ಕ್ಷೇತ್ರವಾಗಿರುವ ಕೊಟ್ಟೂರು ವ್ಯಾಪಾರ ಮತ್ತು ಶಿಕ್ಷಣಕ್ಕೂ ಹೆಸರುವಾಸಿ. ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ ಹಾಗೆಯೇ ನಮ್ಮ ಕೊಟ್ಟೂರು ಪ್ರತಿಭಾನ್ವಿತರನ್ನೊಳಗೊಂಡಿದ್ದರೂ ನವೀಕರಣಗೊಳ್ಳಬೇಕಿದೆ, ನವಕೊಟ್ಟೂರು ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವುದು ಅತ್ಯಗತ್ಯ.
ನವಕೊಟ್ಟೂರು ನಿರ್ಮಾಣಕ್ಕೆ ಎದುರಾಗುವ ಪ್ರಮುಖ ಸವಾಲುಗಳೆಂದರೆ
*1. ವಲಸೆ:* ಹೌದು ನಮ್ಮ ಕೊಟ್ಟೂರಿನ ಪ್ರತಿಭಾನ್ವಿತ ಯುವ ಜನತೆ ತಮ್ಮ ವಿದ್ಯಾಭ್ಯಾಸದ ನಂತರ ಉದ್ಯೋಗವನ್ನು ಅರಸಿ ನಗರಗಳತ್ತ ಮುಖ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದರ ಪರಿಣಾಮ ಪ್ರತಿಭಾ ಪಲಾಯನವಾಗುತ್ತಿದೆ. ಪ್ರತಿಭಾ ಪಲಾಯನದಿಂದ ಕೊಟ್ಟೂರಿನಲ್ಲಿ ನುರಿತ ಯುವಕ/ಯುವತಿಯರ ಸಂಖ್ಯೆ ಇಳಿಮುಖವಾಗುತ್ತಿರುವುದು ವಿಪರ್ಯಾಸ.
*2. ಆರ್ಥಿಕ ಒತ್ತಡ:* ಭಾರಿ ಸಂಖ್ಯೆಯಲ್ಲಿ ಉದ್ಯೋಗವನ್ನರಸಿ ಯುವಕರು ನಗರಗಳತ್ತ ಮುಖ ಮಾಡುವುದರ ಪರಿಣಾಮ ಕೊಟ್ಟೂರಿನ ಆರ್ಥಿಕತೆ ಒತ್ತಡಕ್ಕೆ ಸಿಲುಕಿ ವ್ಯಾಪಾರ-ವಹಿವಾಟಿನಲ್ಲಿ ಗಣನೀಯವಾಗಿ ಇಳಿಮುಖವಾಗುವುದು ಸಹಜ. ವ್ಯಾಪಾರ-ವಹಿವಾಟು ಇಳಿಮುಖವಾದರೆ ಉದ್ಯೋಗಿಗಳ ವೇತನದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗುವುದು ಖಚಿತ. ಸಾಮಾನ್ಯವಾಗಿ ಇಂತಹ ಸ್ಥಿತಿಯಲ್ಲಿ ಜನತೆ ಹಣ ಖರ್ಚು ಮಾಡುವುದು ವಿರಳ. ಜನತೆ ಹಣ ಖರ್ಚು ಮಾಡದಿದ್ದರೆ ವ್ಯಾಪಾರ ವಹಿವಾಟಿನಲ್ಲಿ ಕುಸಿತ ಉಂಟಾಗುತ್ತದೆ. ಇದರಿಂದ ಆರ್ಥಿಕ ಒತ್ತಡ ಉಂಟಾಗುತ್ತದೆ. ಜನತೆಯನ್ನು ಆರ್ಥಿಕವಾಗಿ ಕಟ್ಟಿಹಾಕಿದಂತಾಗುತ್ತದೆ.
ಪರಿಹರವಿಲ್ಲದೆ ಯಾವ ಸವಾಲುಗಳು ಇರಲಾರವು. ಜನತೆ ವಲಸೆ ಹೋಗುವುದು ಹಾಗೂ ಆರ್ಥಿಕ ಒತ್ತಡ ಒಂದನ್ನೊಂದು ಬಿಟ್ಟಿರಲಾರವು. ಯುವಕರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ತಮ್ಮ ಜಾಣ್ಮೆಯನ್ನು ಬಳಸಿ ಉದ್ಯಮಗಳನ್ನು ಸೃಷ್ಠಿಮಾಡುವತ್ತ ಧಾಪುಗಾಲನ್ನಿಡಬೇಕು ಅಥವಾ ಉದ್ಯೋಗವನ್ನರಸಿ ನಗರಗಳತ್ತ ತೆರಳಿದರೂ ಕೆಲ ವರ್ಷಗಳ ನಂತರ ಹಿಂದಿರುಗಿ ತಮ್ಮ ನೈಪುಣ್ಯತೆ ಹಾಗೂ ಅನುಭವ ಬಳಸಿ ಹೊಸ ಯೋಜನೆಗಳೊಂದಿಗೆ ನವಕೊಟ್ಟೂರು ನಿರ್ಮಾಣಕ್ಕೆ ಕೈ ಜೋಡಿಸಬೇಕು.
ವಾಸ್ತವವಾಗಿ ಉದ್ಯಮಗಳನ್ನು ಸೃಷ್ಟಿಸುವುದು ಕಠಿಣವಾದ ಕೆಲಸ ನಿಜ ಆದರೆ ಅಸಾಧ್ಯವಲ್ಲ. ಉದ್ಯೋಗಗಳನ್ನು ಸೃಷ್ಟಿಸುವುದು ಕೇವಲ ಸರ್ಕಾರದ ಕೆಲಸ ಎನ್ನುವ ಮನಸ್ಥಿತಿಗೆ ನಾವು ಬಂದಿರುತ್ತೇವೆ ಆದರೆ ಇದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಇದು ನಮ್ಮೆಲ್ಲರ ಧ್ಯೆಯ, ಇದು ನಮ್ಮೆಲ್ಲರ ಕರ್ತವ್ಯ. ಯಾವ ಸರ್ಕಾರವಿದ್ದರೇನು ಪ್ರಜೆಗಳು ಸರ್ಕಾರದ ಜೊತೆ ಕೈ ಜೋಡಿಸದಿದ್ದರೆ ಕೇವಲ ಸರ್ಕಾರದಿಂದ ಉದ್ಯೋಗ ಸೃಷ್ಟಿಸುವುದು ಅಸಾಧ್ಯ! ವಾಸ್ತವದಲ್ಲಿ ಪ್ರಜೆಗಳೇ ಸರ್ಕಾರ, ಪ್ರಜೆಗಳಿಂದಲೇ ಸರ್ಕಾರ, ಪ್ರಜೆಗಳ ಸಹಕಾರ ಇಲ್ಲದಿದ್ದರೆ ಸರ್ಕಾರ ಶೂನ್ಯ!.
ದೊಡ್ಡ ಉದ್ಯಮಗಳನ್ನು ಸೃಷ್ಟಿಸಿ ಯಶಸ್ವಿಗೊಳಿಸುವ ಶಕ್ತಿ ಕೊಟ್ಟೂರಿನ ಯುವಕರಲ್ಲಿದೆ ಹೆಚ್ಚಿನ ಜನರು ಒಂದು ಯಶಸ್ವಿ ಉದಾಹರಣೆಯ ಕಿಡಿಗಾಗಿ ಕಾಯುತ್ತಿದ್ದಾರೆ. ಉದಾಹರಣೆಯ ಕಿಡಿಗಾಗಿ ಯಾಕೆ ಕಾಯುತ್ತೀರಿ? ನೀವೇ ಯಶಸ್ಸಿನ ಕಿಡಿಯಾಗಿ! ಒಂದು ಕಿಡಿ ಹತ್ತಿದರೆ ಸಾಕು ಅದು ಕಾಡ್ಗಿಚ್ಚಿನಂತೆ ಯುವಕರಲ್ಲಿ ಹರಡಿ ಹೊಸ ಚೈತನ್ಯವನ್ನು ತುಂಬುತ್ತದೆ. ಒಂದು ಕಿಡಿ ಸಾಕು ಯುವಕರ ವಲಸೆಯನ್ನು ತಡೆಯಲು, ಒಂದು ಕಿಡಿ ಸಾಕು ಆರ್ಥಿಕ ವಹಿವಾಟನ್ನು ಹೆಚ್ಚಿಸಲು, ಒಂದು ಕಿಡಿ ಸಾಕು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು, ಒಂದು ಕಿಡಿ ಸಾಕು ನವಕೊಟ್ಟೂರನ್ನು ನಿರ್ಮಿಸಲು. ಆ ಕಿಡಿಯನ್ನು ಇನ್ನೊಬ್ಬರು ಹಚ್ಚುವವರೆಗೆ ಏಕೆ ಕಾಯುತ್ತಿರಿ? ನೀವೇ ಆ ಕಿಡಿಯಾಗಿ, ಆ ಒಂದು ಕಿಡಿ ಭವಿಷ್ಯವನ್ನು ಬದಲಾಯಿಸುವ ತಾಕತ್ತನ್ನು ಹೊಂದಿದೆ. ಆ ಒಂದು ಕಿಡಿ ಕ್ರಾಂತಿಯನ್ನುಂಟುಮಾಡಲಿದೆ.
ಕೊಟ್ಟೂರು ಒಂದು ಉದಾಹರಣೆ, ಇದೇ ರೀತಿ ಪ್ರತಿಯೊಬ್ಬರು ತಮ್ಮ ಊರಿನಲ್ಲೆ ಕಿಡಿಯಾಗಿ, ಸ್ವಾವಲಂಬಿಯಾಗಿ ಉದ್ಯಮಗಳನ್ನು ಸೃಷ್ಟಿಸಿದರೆ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಕೊಟ್ಟೂರು ಮಾದರಿಯಾಗಲಿದೆ.
ಅಮರನಾಥ್. ಎಂ.ಎಂ.ಜೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ