ಕಲಿಕೆ ಮೇಲೆ ಸಾಮಾಜಿಕ ಮಾಧ್ಯಮ, ತಂತಜ್ಞಾನದ ದುಷ್ಪರಿಣಾಮ : ಶಿಕ್ಷಣ ತಜ್ಞರಿಂದ ನಾನಾ ಆಯಾಮಗಳ ಕುರಿತು ಚರ್ಚೆ

 

ಬೆಂಗಳೂರು; “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದಿಂದ ಆಗುತ್ತಿರುವ ದುಷ್ಪರಿಣಾಮ”ದ ಬಗ್ಗೆ ವಿವಿಧ ವಲಯದ ಗಣ್ಯರು ವ್ಯಾಪಕವಾಗಿ ಬೆಳಕು ಚೆಲ್ಲಿದರು.

ನಗರದ ರಿಟ್ಸ್-ಕಾರ್ಲ್ಟನ್ ಹೋಟೆಲ್ ನಲ್ಲಿ ಆಯೋಜಿಸಲಾದ ಕ್ಯೂಎಸ್ ಐ - ಗೆಜ್ "ಇನ್ಸ್‌ಟಿಟ್ಯೂಟ್ ಆಫ್ ಹ್ಯಾಪಿನೆಸ್ ಕನ್ಕ್ಲೇವ್ 2024" ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಇಡೀ ದಿನ ನಡೆದ ವಿವಿಧ ಗೋಷ್ಠಿಗಳಲ್ಲಿ ತಜ್ಞರು ನಾನಾ ವಿಷಯಗಳನ್ನು ಅನಾವರಣಗೊಳಿಸಿದರು.

“ವಿದ್ಯಾರ್ಥಿ ಮಾನಸಿಕ ಆರೋಗ್ಯಕ್ಕಾಗಿ ಸಾಮಾಜಿಕ ಮಾಧ್ಯಮದ ಅಪಾಯಗಳು ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಸಮತೋಲನಗೊಳಿಸುವುದು” “ಸಾಮಾಜಿಕ ಭಾವನಾತ್ಮಕ ಕಲಿಕೆ – ಸಂತಸಕ್ಕೆ ಮಾರ್ಗ” “ಶಿಕ್ಷಕರ ಸಬಲೀಕರಣ: ತರಗತಿಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ” ಹಾಗೂ “ಸ್ಪರ್ಧಾತ್ಮಕ ಶೈಕ್ಷಣಿಕ ಪರಿಸರದಲ್ಲಿ ಯಶಸ್ಸನ್ನು ಮರು ವ್ಯಾಖ್ಯಾನಿಸುವ” ವಿಷಯಗಳ ಕುರಿತು ಶಿಕ್ಷಣ ತಜ್ಞರು ಬೆಳಕು ಚೆಲ್ಲಿಸಿದರು.

ಶಿಕ್ಷಣ ತಜ್ಞ ಮತ್ತು ಸಿಬಿಎಸ್ಸಿ ಮಾಜಿ ನಿರ್ದೇಶಕ ಡಾ. ಜಿ. ಬಾಲಕೃಷ್ಣ ಮಾತನಾಡಿ, ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನ ಶಿಕ್ಷಣದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದ್ದು, ಸೂಕ್ತ ಮಾರ್ಗದರ್ಶನವಿಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತದೆ. ವಾಟ್ಸ್ ಅಪ್ ವಿವಿಗಳು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿವೆ ಎಂದರು.

ಎಸ್.ಎಸ್.ಆರ್.ವಿ.ಎಂ ಸಂಸ್ಥೆ ಅಧ್ಯಕ್ಷ ಎಚ್.ಜಿ. ಹರ್ಷ ಮಾತನಾಡಿ, ತರಗತಿಗಳಲ್ಲಿ ವಿದ್ಯಾರ್ಥಿಗಳು ತುಂಬಾ ಆಕ್ರಮಣಾಕಾರಿ ವರ್ತನೆ ತೋರಿದರೆ ಅದು ಘರ್ಷಣೆಗಳಿಗೆ ಕಾರಣವಾಗಲಿದ್ದು, ತೀವ್ರ ಖಿನ್ನತೆಗೆ ಒಳಗಾದರೆ ಅದು ಆತ್ಮಹತ್ಯೆ ಮತ್ತಿತರೆ ಅನಾಹುತಳಿಗೆ ನಾಂದಿಯಾಗಲಿದೆ. ಹೀಗಾಗಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದರು.

ಉದ್ಯಮಿ ಐಶ್ವರ್ಯ ಡಿಕೆಎಸ್ ಹೆಗಡೆ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ತಂತ್ರಜ್ಞಾನ ಸಂತೋಷದ ಆಂದೋಲನವಾಗಿ ಪರಿವರ್ತನೆಯಾಗಬೇಕು. ವ್ಯಾಪಾರ ವಹಿವಾಟಿಗೆ ಸಾಮಾಜಿಕ ಮಾಧ್ಯಮ ಸೂಕ್ತ ವೇದಿಕೆ ಎಂದರು.

ಎಸ್.ಎಸ್.ಎಂ.ವಿ ಶಾಲೆಗಳ ಸಂಸ್ಥಾಪಕರಾದ ಡಾ. ಮಣಿಮೆಕಲೈ ಮೋಹನ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳು ಅತ್ಯಂತ ತ್ವರಿತವಾಗಿ ಹರಡುತ್ತವೆ. ವಾಟ್ಸ್ ಅಪ್ ಮೂಲಕ ನೈಜ ಘಟನೆಗಳನ್ನು ತಿಳಿದುಕೊಳ್ಳಲು ಅನಕ್ಷರಸ್ಥರಿಗೂ ಇದೀಗ ಸಾಧ್ಯವಾಗುತ್ತಿದೆ. ಆದರೆ ಕೃತಕ ಬುದ್ದಿಮತ್ತೆ ಕುರಿತು ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಯುನೆಸ್ಕೋದ ಎಂ.ಜಿ.ಐ.ಇ.ಪಿ ಮುಖ್ಯಸ್ಥರಾದ ಡಾ. ರಿಚಾ ಬನ್ಸಾಲ್ ಅವರು “ಸಾಮಾಜಿಕ ಭಾವನಾತ್ಮಕ ಕಲಿಕೆ – ಸಂತಸಕ್ಕೆ ಮಾರ್ಗ” ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಸಂತಸದಾಯಕ ವಾತಾವರಣ ಇದ್ದಲ್ಲಿ ಮಾತ್ರ ಕಲಿಕೆಗೆ ಪ್ರೇರಣೆ ದೊರೆಯುತ್ತದೆ. ಮನೆ, ಶಾಲೆಯ ವಾತಾವರಣ ಸಹನೀಯವಾಗಿರಬೇಕು. ದೇಹ ದಾರ್ಢ್ಯಕ್ಕೆ ದೈಹಿಕ ಕಸರತ್ತು ಹೇಗೆ ಮುಖ್ಯವೋ, ಅದೇ ರೀತಿ ಮಾನಸಿಕ ಸ್ವಾಸ್ಥ್ಯಕ್ಕೆ ಮೆದುಳಿಗೆ ವ್ಯಾಯಾಮ ಅತ್ಯಂತ ಅಗತ್ಯವಾಗಿದೆ. ಮನುಷ್ಯನಲ್ಲಿ ಸದಾ ಕಾಲ ಸಂತೋಷದ ಕಾರ್ಮೋನ್ ಗಳು ಸ್ಫುರಿಸುತ್ತಿರಬೇಕು ಎಂದು ಹೇಳಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ