ಸಮಸ್ತ ರೈತರ ಬೆಳೆ ರಕ್ಷಿಸಲು ಕರ್ನಾಟಕ ರೈತ ಸಂಘ ಆಗ್ರಹ : ಸಂತೋಷ ಹಿರೇದಿನ್ನಿ
ಮಸ್ಕಿ : ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕಿತ್ತು ಹೋದದ್ದಕ್ಕೆ ಅಧಿಕಾರಿಗಳೇ ಹೊಣೆ! ಕೂಡಲೇ ಗೇಟ್ ಅಳವಡಿಸಿ ಆಣೆಕಟ್ಟು ವ್ಯಾಪ್ತಿಯ ಸಮಸ್ತ ರೈತರ ಬೆಳೆ ರಕ್ಷಿಸಲು ಕರ್ನಾಟಕ ರೈತ ಸಂಘ-AIKKS ಆಗ್ರಹಿಸುತ್ತದೆ ಎಂದು ಸಂತೋಷ್ ಹಿರೇದಿನ್ನಿ ಪತ್ರಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಸ್ಟ್ ಗೇಟುಗಳ ಕಾಲಕಾಲಕ್ಕೆ ಪರಿಶೋಧನೆ ಮತ್ತು ಅಗತ್ಯ ನಿರ್ವಾಹಣೆಯಲ್ಲಿ ಉಂಟಾದ ಲೋಪಗಳ ಹಿನ್ನಲೆಯಲ್ಲಿ ತುಂಗಭದ್ರಾ ಆಣೆಕಟ್ಟೆಯ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದು ಆಣೆಕಟ್ಟೆಯಲ್ಲಿನ ನೀರು ಸಂಗ್ರಹವು ವ್ಯರ್ಥ ಹರಿದು ಹೋಗಲು ಕಾರಣವಾಗಿದೆ. ಈ ಅವಘಡ ಹಿಂದಿರುವ ಲೋಪದೋಷಗಳ ಕುರಿತು ತನಿಖೆಗೊಳಪಡಿಸಿ, ತಪ್ಪಿತಸ್ಥ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮವಹಿಸಬೇಕೆಂದು ಸರ್ಕಾರಕ್ಕೆ ಕರ್ನಾಟಕ ರೈತ ಸಂಘ-AIKKS ಆಗ್ರಹಿಸುತ್ತದೆ.
ಕಳೆದ 2019 ರಲ್ಲಿ ಆಣೆಕಟ್ಟೆಯ ಬಳಿ ಗೇಟ್ ಮುರಿದು ಅವಘಡ ಸಂಭವಿಸಿದಾಗ, ಅಪಾರ ಪ್ರಮಾಣದ ನೀರು ನದಿಗೆ ಹರಿದುಹೋಗಿರುವ ಕಹಿ ಅನುಭವವನ್ನು ಜಲ ಸಂಪನ್ಮೂಲ ಇಲಾಖೆಯ ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸದೇ ಇರುವುದು ಈ ದುರಂತವು ಪುನಾಃ ಮರುಕಳಿಸಿದಂತಾಗಿದೆ. ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆಯ ಸಂದರ್ಭದಲ್ಲಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿರುವಾಗ ನೀರಿನ ರಭಸಕ್ಕೆ ಅಣೆಕಟ್ಟಿನ ಕ್ರಸ್ಟ್ ಗೇಟ್ ಗಳಿಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಅನುಸರಿಬೇಕಾದ ಅಗತ್ಯ ಕ್ರಮ ಮತ್ತು ನೆರವುಗಳು ಸಕಾಲದಲ್ಲಿ ಇಲ್ಲದೆ ಹೋಗಿರುವುದು ಎದ್ದು ಕಾಣುತ್ತಿದೆ. ಸದರಿ ಇಲಾಖೆ ಬೇಜವಾಬ್ದಾರಿ ನಡೆಯು ಖಂಡನೀಯವಾಗಿದೆ.
ಈ ಅವಘಡವನ್ನು ಸರಿಪಡಿಸಲು ಆಣೆಕಟ್ಟೆಯಲ್ಲಿ ಸಂಗ್ರಹವಾದ ಸುಮಾರು 60 ಟಿಎಂಸಿ ನೀರು ನದಿಗೆ ಹರಿದು ಹೋಗಿರುವ ಮಾಹಿತಿಯಿಂದಾಗಿ ಸದರಿ ಆಣೆಕಟ್ಟು ವ್ಯಾಪ್ತಿಯ ರೈತರಲ್ಲಿ ಹಾಗೂ ಕುಡಿಯುವ ನೀರಿಗೆ ಅವಲಂಬಿತವಾದ ಸಮಸ್ತ ಜನರಲ್ಲಿಆತಂಕವು ಎದುರುಗೊಂಡಿದೆ. ಈ ಆಣೆಕಟ್ಟೆಯ ವ್ಯಾಪ್ತಿಗೆ ಬರುವ
ಕರ್ನಾಟಕ, ತೆಲಂಗಾಣ, ಆಂದ್ರ ಪ್ರದೇಶ ರಾಜ್ಯಗಳ ಅಂದಾಜು 30 ಲಕ್ಷ ಎಕರೆ ನೀರಾವರಿ ಪ್ರದೇಶದ ರೈತರ ಮುಂಗಾರು ಮತ್ತು ಹಿಂಗಾರು ಕೃಷಿ ಬೆಳೆಗಳ ಭವಿಷ್ಯಕ್ಕೆ ಕಳವಳಕ್ಕೀಡುಮಾಡಿದೆ.
ಈ ಅವಘಡವನ್ನು ಸರಿ ಪಡಿಸಲು ಮತ್ತು ನೀರಿನ ಸಂಗ್ರಹದ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಸರಕಾರವು ತುರ್ತು ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು. ಬಹುಸಂಖ್ಯಾತ ರೈತರ ಬೆಳೆ ನಷ್ಟವನ್ನು ತಪ್ಪಿಸಬೇಕು. ಈಗಾಗಲೇ ರಾಜ್ಯದ ರೈತರು ಬರಗಾಲದಿಂದ ಕಂಗೆಟ್ಟು ಹೋಗಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ರೈತರನ್ನು ಬಾಧಿಸಿದೆ. ಅನೇಕ ಬಾರಿ ಬೆಳೆ ನಷ್ಟಕ್ಕೆ ತುತ್ತಾಗಿ, ಸಾಲಗಳ ಬಾದೆ ಅನುಭವಿಸಿದ್ದಾರೆ.
ಆದ್ದರಿಂದ ಕ್ರಸ್ಟ್ ಗೇಟ್ ಗಳ ಹಾಗೂ ತಾಂತ್ರಿಕ ಪರಿಕರಗಳ ಅವಘಡವನ್ನು ತಪ್ಪಿಸಲು ನುರಿತ ತಜ್ಞರ ತಂಡದ ಮೂಲಕ ಗುಣಮಟ್ಟವನ್ನು ಕಾಪಾಡಬೇಕು. ರೈತರ ಹಿತಾಸಕ್ತಿ ಮತ್ತು ಕುಡಿಯುವ ನೀರಿನ ಅವಲಂಬಿತ ಸಮಸ್ತ ಜನರ ಹಿತಾಸಕ್ತಿ ರಕ್ಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಲು ಎಲ್ಲಾ ರೈತಪರ, ಜನಪರ ಶಕ್ತಿಗಳು ಧ್ವನಿ ಮೊಳಗಿಸಬೇಕೆಂದು ಕರ್ನಾಟಕ ರೈತ ಸಂಘ(AIKKS) ಮನವಿ ಮಾಡುತ್ತದೆ ಎಂದು ಮಸ್ಕಿ ತಾಲೂಕು ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷರು ರಾಯಚೂರು ಇವರು ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ