ಎಲ್ಲಾ ಹಳ್ಳಿಗಳಲ್ಲಿ ಫಾಗಿಂಗ್ ಕೈಗೊಳ್ಳಿ ಗ್ರಾಪಂ ಪಿಡಿಒಗಳಿಗೆ ತಾಪಂ ಇಒ ಉಮೇಶ್ ಸೂಚನೆ
ಮಸ್ಕಿ : ತಾಲೂಕಿನಲ್ಲಿ ಮುಂಗಾರು ಮಳೆ ಚುರುಕು ಪಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲಾ ಹಳ್ಳಿಗಳಲ್ಲಿ ಫಾಗಿಂಗ್ ಕೈಗೊಳ್ಳಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಪಂ ಇಒ ಉಮೇಶ್ ಸೂಚನೆ ನೀಡಿದರು.
ಮಸ್ಕಿ ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ವಿವಿಧೆಡೆ ಡೆಂಗೆ ಪ್ರಕರಣಗಳು ದಾಖಲಾಗುತ್ತಿದ್ದು, ಚರಂಡಿ ಸ್ವಚ್ಛತೆ, ಫಾಗಿಂಗ್, ನೀರಿನ ಮೂಲಗಳ ಶುಚಿತ್ವಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಶಾಲಾ ವಿದ್ಯಾರ್ಥಿಗಳ ಜೊತೆ ಜಾಥಾ ಕೈಗೊಂಡು, ಕಸದ ವಾಹನದ ಮೂಲಕ ಜಾಗೃತಿ ಪದಗಳನ್ನು ಬಿತ್ತರಿಸಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ನರೇಗಾ ಯೋಜನೆಯಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಡತಗಳನ್ನುಒಂದು ವಾರದೊಳಗೆ ಪರಿಶೀಲಿಸಲಾಗುವುದು. ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಪ್ರಕರಣಗಳನ್ನು ತಿರುವಳಿ ಮಾಡಿಕೊಳ್ಳಬೇಕು. ಸಕಾಲ ಮತ್ತು ಐಪಿಜಿಆರ್ಎಸ್ನಲ್ಲಿ ದಾಖಲಾಗುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು. ಗ್ರಾಪಂ ಸಿಬ್ಬಂದಿ ಕಡ್ಡಾಯವಾಗಿ ಬಯೋ ಮೆಟ್ರಿಕ್ನಲ್ಲಿ ಹಾಜರಾತಿ ಹಾಕಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಜಿಪಂ ಪ್ರತಿಯೊಂದು ಗ್ರಾಪಂಗೆ 90-100 ಶೌಚಗೃಹದಂತೆ ಒಟ್ಟು 2000 ಶೌಚಗೃಹ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿದ್ದು, ಕೂಡಲೇ ಸಮೀಕ್ಷೆ ಕೈಗೊಂಡು, ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದರು.
ಈ ವೇಳೆ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಶಿವಾನಂದರಡ್ಡಿ, (ಪಂಚಾಯತ್ ರಾಜ್) ಸೋಮನಗೌಡ, ತಾ.ಪಂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ವಿವಿಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ