ಕಾಂಗ್ರೆಸ್ ನಾಯಕನ ಸೊಕ್ಕು ಮುರಿಯಲು ಬಿಜೆಪಿಯನ್ನು ಗರಿಷ್ಠ ಮತಗಳಿಂದ ಗೆಲ್ಲಿಸಿ : ಬಿ.ವೈ.ವಿಜಯೇಂದ್ರ
ವರದಿ - ಮಾಂತೇಶ್ ಕೆ
ಕೊಪ್ಪಳ: ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ಅವರ ಕುರಿತು ಆಕ್ಷೇಪಾರ್ಹ ಮಾತನಾಡಿದ ಈ ಭಾಗದ ಕಾಂಗ್ರೆಸ್ ನಾಯಕನ ಸೊಕ್ಕನ್ನು ಮುರಿಯಲು ಬಿಜೆಪಿಗೆ ಮತ ಕೊಡಿ; ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಅವರನ್ನು ಒಂದೂವರೆ ಲಕ್ಷದಿಂದ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.
ಜಿಲ್ಲೆಯ ಕಾರಟಗಿಯಲ್ಲಿ ಬೃಹತ್ ರೋಡ್ ಷೋದಲ್ಲಿ ಅವರು ಪಾಲ್ಗೊಂಡಿದ್ದರು. 7ರಂದು ಮತದಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆಗಮಿಸಬೇಕು. ಮೋದಿಜೀ ಅವರ ಯೋಜನೆಗಳ ಪಡೆದಿರುವಂತ ಫಲಾನುಭವಿಗಳನ್ನು 11 ಗಂಟೆಯೊಳಗೆ ಕರೆತಂದು ನಾವೆಲ್ಲರೂ ಮತ ಹಾಕಿಸಬೇಕು ಎಂದು ವಿನಂತಿಸಿದರು.
ಬಿಜೆಪಿ ಗರಿಷ್ಠ ಲೀಡ್ ಪಡೆಯುವ ಮೂಲಕ ಆ ಮುಖಂಡನ ಎರಡೂ ಕೆನ್ನೆಗೆ ಕಪಾಳಮೋಕ್ಷ ಮಾಡಬೇಕು ಎಂದು ತಿಳಿಸಿದರು. ಈ ಮೂಲಕ ಮೋದಿಯವರ ಕೈಯನ್ನು ಬಲಪಡಿಸಿ ಎಂದು ತಿಳಿಸಿದರು. ರಾಜ್ಯದ ಕಾಂಗ್ರೆಸ್ ಪಕ್ಷದ ಪುಂಗಿ ಇನ್ನು ಹೆಚ್ಚು ದಿನ ರಾಜ್ಯದಲ್ಲಿ ನಡೆಯುವುದಿಲ್ಲ. ಮತ್ತೊಮ್ಮೆ ಮೋದಿಯವರನ್ನು ಗೆಲ್ಲಿಸಲು ಮತದಾರರು ತೀರ್ಮಾನ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೋದಿಯವರು 3ನೇ ಬಾರಿ ಪ್ರಧಾನಿ ಆಗುವುದನ್ನು ದೇಶದ ಯಾವುದೇ ದುಷ್ಟ ಶಕ್ತಿಗಳು ತಡೆಯಲಸಾಧ್ಯ ಎಂದು ನುಡಿದರು.
ಕಾಂಗ್ರೆಸ್ ಸರಕಾರಕ್ಕೆ ಬುದ್ಧಿ ಕಲಿಸಲು ಬಿಜೆಪಿ- ಜೆಡಿಎಸ್ ಮೈತ್ರಿಕೂಟವು ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ಹಗಲಿರುಳೆನ್ನದೆ ಬಸವರಾಜ ಕ್ಯಾವಾಟರ್ ರವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಶಿವರಾಜ ತಂಗಡಗಿಗೆ ಟಿಕೆಟ್ ಸಿಗದಿದ್ದಾಗ ಬಳ್ಳಾರಿಯ ನನ್ನ ಮನೆಗೆ ಬಂದು ಕಣ್ಣೀರು ಹಾಕಿದ್ದರು. ಬಳಿಕ ಎಂಎಲ್‍ಎ ಆಗಿ ಗೆದ್ದಿದ್ದು ಒಂದು ಕಥೆ. ಅನಂತರ ನಾನು ಯಡಿಯೂರಪ್ಪ ಅವರ ಆಶೀರ್ವಾದದಿಂದ ಮಂತ್ರಿ ಮಾಡಿ ಎರಡನೇ ತಪ್ಪು ಮಾಡಿದೆ ಎಂದು ನುಡಿದರು.
ಇವತ್ತು ಅಧಿಕಾರದ ಅಹಂಕಾರದಿಂದ ಒಬ್ಬ ಸಚಿವನಾಗಿ ಪ್ರಧಾನಮಂತ್ರಿಯವರ ಕುರಿತು ‘ಮೋದಿ ಮೋದಿ’ ಎಂದು ಘೋಷಣೆ ಕೂಗುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಕಾರಟಗಿಯ ನಮ್ಮೆಲ್ಲ ಯುವ ಕಾರ್ಯಕರ್ತರು ಮೋದಿ ಮೋದಿ ಎನ್ನುತ್ತಿದ್ದಾರೆ. ನಿಮಗೆ ಧಮ್ಮಿದ್ದರೆ ಅವರ ಕಪಾಳಕ್ಕೆ ಹೊಡೆಯಿರಿ ಎಂದು ಸವಾಲು ಹಾಕಿದರು. ಆಗ ಮೋದಿ ಮೋದಿ ಘೋಷಣೆಗಳು ಜೋರಾಗಿ ಕೇಳಿಸಿದವು.
ತಂಗಡಗಿಗೆ ಪಾಠ ಕಲಿಸುವ ಮಾದರಿಯಲ್ಲಿ ಡಾ.ಬಸವರಾಜರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು. ಕರಡಿ ಸಂಗಣ್ಣ ಅವರು ನಮ್ಮ ಪಕ್ಷದಲ್ಲಿ ರಾಜನಂತಿದ್ದರು. ಅವರು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ನೆನಪಿಸಿದರು.
ತಂಗಡಗಿಯನ್ನು ಕಿತ್ತು ಬಿಸಾಡಲು ರಾಯರೆಡ್ಡಿ ರೆಡಿಯಾಗಿದ್ದಾರೆ. ನಾನು ನಿಮ್ಮೆಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು. ಬಳಿಕ ಮತ್ತೊಮ್ಮೆ ಮೋದಿ, ಮಗದೊಮ್ಮೆ ಮೋದಿ ಎಂದು ಘೋಷಣೆ ಕೂಗಿದರು.
ಡಾ.ಕೆ.ಬಸವರಾಜ್ ಅವರು ಮಾತನಾಡಿ, ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು. ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಲು ಬಹಳ ದಿನ ಕಾಯಬೇಕಿಲ್ಲ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಶಾಸಕ ಬಸವರಾಜ ಧಡೆಸುಗೂರ, ಪಕ್ಷದ ಪ್ರಮುಖರು ಹಾಗೂ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ