150 ಯಶಸ್ವಿ ವಾರಗಗಳನ್ನು ಪೂರೈಸಿದ ಅಭಿನಂದನ್ ಸಂಸ್ಥೆ
ಮಸ್ಕಿ : ಅಭಿನಂದನ್ ಸಂಸ್ಥೆಯು ಆರಂಭಿಸಿದ ಸ್ವಚ್ಛತಾ ಅಭಿಯಾನವು ಒಂದು ವಾರ ಬಿಡದಂತೆ ಸತತವಾಗಿ 150 ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿ ದಾಖಲೆ ಮಾಡಿ ಮುನ್ನಡೆಯುತ್ತಿದೆ. ಈ ಸಂಡೆ ಫಾರ್ ಸೋಷಿಯಲ್ ವರ್ಕ್ ಅಡಿಯಲ್ಲಿ ಈ ವಾರದ ಅಂದರೆ ಯಶಸ್ವಿ 150ನೇ ವಾರದ ಸೇವಾ ಕಾರ್ಯವನ್ನು ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಯಿತು. ಈ ಸೇವಾ ಕಾರ್ಯದಲ್ಲಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಗೋಡೆ, ಕಂಪೌಂಡ್ ಮತ್ತು ಕಂಬಗಳಿಗೆ ಬಣ್ಣವನ್ನು ಹಚ್ಚಲಾಯಿತು.
ಸೇವಾ ಕಾರ್ಯದ ನಂತರ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಶರಣೆಗೌಡ ಅವರು ಅಭಿವೃದ್ಧಿ ಹಾದಿಗೆ ದೂರವಾಗಿ ನೆನೆಗುದಿಗೆ ಬಿದ್ದಿದ್ದ ನಮ್ಮ ಶಾಲೆಗೆ ಒಂದು ಸುಂದರವಾದ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಸೇವೆಯನ್ನು ಮಾಡಿರುವ ಈ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮತ್ತು ಎಲ್ಲಾ ಸ್ವಯಂ ಸೇವಕರಿಗೆ ಶಾಲೆಯ ಪರವಾಗಿ ಮತ್ತು ಗ್ರಾಮದ ಪರವಾಗಿ ಧನ್ಯವಾದಗಳು. ಇವರ ಈ ಸೇವೆ ಹೀಗೆ ಮುಂದುವರೆಯಲಿ ಎಂದರು.
ನಂತರ ಮಾತನಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ಇಚ್ಛೆಯಿಂದ ಆರಂಭ ಆಗಿರುವ ಈ ನಮ್ಮ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನವು ಈಗಾಗಲೇ ಒಂದು ವಾರವೂ ಬಿಡದಂತೆ ಸತತವಾಗಿ 150 ವಾರಗಳನ್ನು ಪೂರೈಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ದಾಖಲೆಯಲ್ಲಿ ಸೇರಿ ಮುನ್ನಡೆಯುತ್ತಿದೆ. ಶಾಲೆಗಳು ಆರಂಭವಾಗುವ ಈ ಸಮಯದಲ್ಲಿ ಮಕ್ಕಳು ಶಾಲೆಗೆ ಬರುವಾಗ ಅವರಿಗೆ ಉತ್ತಮ ವಾತಾವರಣ ನೀಡುವದು ಎಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ನಮ್ಮ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನದ ಮೂಲಕ ಶಾಲೆಯನ್ನು ಸುಂದರಗೊಳಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಲು ಕಾರ್ಯ ಪ್ರವೃತ್ತರಾಗಿದ್ದೇವೆ. ಇಂದು ಈ ಶಾಲೆಗೆ ನಮ್ಮ ಸೇವೆಯನ್ನು ನೀಡಿದ್ದೇವೆ. ನಿಮ್ಮ ಹತ್ತಿರದ ಯಾವ ಶಾಲೆಗೆ ನಮ್ಮ ಅವಶ್ಯಕತೆ ಇದೆಯೋ ಆ ಶಾಲೆಗೆ ನಾವುಗಳು ಬಂದು ನಮ್ಮ ಸೇವೆಯನ್ನು ನೀಡುತ್ತೇವೆ ಅಂತಹ ಶಾಲೆಗಳ ಬಗ್ಗೆ ಮಾಹಿತಿಯನ್ನು ನೀಡಿ ನಿಮ್ಮ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಕರೆ ನೀಡಿದರು.
ಈ ಸೇವಾ ಕಾರ್ಯದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ರೇಣುಕಾ ಮೇಡಂ, ಗ್ರಾಮದ ಯುವ ಮುಖಂಡ ಬಸವರಾಜ ಗೂಗ್ಲಿ, ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳಾದ ಜಾಫರಮಿಯಾ, ಮಂಜುನಾಥ್ ಜೋಗಿನ್, ಮಲ್ಲಿಕಾರ್ಜುನ ಬಡಿಗೇರ್, ಅಮಿತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗಿನ್, ಕಿಶೋರ್, ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ