ಸರ್ಕಾರಿ ನೌಕರರ ಹಿತ ಕಾಯಲು ಸಂಘದ ಕೊಡುಗೆ ಅನನ್ಯ - ಷಡಾಕ್ಷರಿ
ಕೊಟ್ಟೂರು: ನೌಕರರ ಹಿತ ಕಾಯಲು ಸರ್ಕಾರಿ ನೌಕರರ ಸಂಘ ಹಗಲಿರುಳು ಶ್ರಮಿಸುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಂದ ಶೇ 40 ರಷ್ಟು ಹುದ್ದೆಗಳು ಖಾಲಿ ಇದ್ದು ಇರುವ ನೌಕರರ ಮೇಲೆ ಕಾರ್ಯಭಾರ ಹೆಚ್ಚಳವಾಗಿ ನೌಕರರು ಮಾನಸಿಕವಾಗಿ ಕುಗ್ಗಿ ಹೋಗಿದ್ದರೂ ಸರ್ಕಾರ ನೇಮಕಾತಿಗೆ ಮುಂದಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಕಂದಾಯ ವಸೂಲಿ ಹಾಗೂ ನೌಕರರ ಕಾರ್ಯವೈಖ್ಯರಿ ನಮ್ಮ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವುದು ನೌಕರರ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ನೌಕರರ ಸಂಘದಿಂದ ಕೋವಿಡ್ ಸಮಯದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನ ಮುಂತಾದ ಕಾರ್ಯಕ್ರಮಗಳಿಗೆ ನೌಕರರು ವೇತನ ನೀಡುವ ಮೂಲಕ ಧನ್ಯತಾ ಭಾವ ಮೆರೆದಿದ್ದಾರೆ ಎಂದರಲ್ಲದೇ ಮಹಿಳಾ ನೌಕರರಿಗೆ ಭದ್ರತೆ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದು ಸೇರಿದಂತೆ ದುಡಿಯುವ ವರ್ಗಕ್ಕೆ ಗ್ಯಾರಂಟಿ ಯೋಜನೆಗಳ ಮಧ್ಯಯೂ ಸರ್ಕಾರದಿಂದ ನ್ಯಾಯ ದೊರಕಿಸಿಕೊಡಲು ಸಂಘದ ಕೊಡುಗೆ ಅಪಾರವಾಗಿದೆ ಎಂದರು.
ರಾಜ್ಯದ 57 ತಾಲ್ಲೂಕುಗಳು ಪೂರ್ಣ ಪ್ರಮಾಣದ ಕಚೇರಿಗಳನ್ನು ತೆರೆಯದ ಕಾರಣ ನೂತನ ತಾಲ್ಲೂಕುಗಳಲ್ಲಿ ಕಛೇರಿಗಳನ್ನು ತೆರೆಯಲು ಸಂಘ ಶ್ರಮಿಸುವುದಲ್ಲದೇ ಕೊಟ್ಟೂರಿನಲ್ಲಿ ನಿವೇಶನ ದೊರೆತರೆ ಕಟ್ಟಡಕ್ಕೆ ಅಗತ್ಯ ಅನುದಾನ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಕೇಂದ್ರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಹ ವೇತನ ಆಯೋಗ ಹಾಗೂ ಡಿಎ ಜಾರಿಗೊಳಿಸುವುದು ಹಾಗೂ ಎನ್ ಪಿ ಎಸ್ ರದ್ಧು ಗೊಳಿಸಿ ಒಪಿಎಸ್ ಜಾರಿಯಾಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ, ತಾಲ್ಲೂಕು ಘಟಕಾಧ್ಯಕ್ಷ ಯೋಗೀಶ್ವರ ದಿನ್ನೆ ಹಾಗೂ ತಹಶೀಲ್ದಾರ್ ಜಿ.ಕೆ.ಅಮರೀಶ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದಕುಮಾರ್ ಹಾಗೂ ರಾಜ್ಯ ಘಟಕ ಹಾಗೂ ವಿವಿಧ ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ