ಕೊಟ್ಟೂರೇಶ್ವರನಿಗೆ ಹರಕೆ ಹೊತ್ತು ಲಕ್ಷಕ್ಕೂ ಅಧಿಕ ಪಾದಯಾತ್ರಿಗಳು ದಾಂಗುಡಿ
ಕೊಟ್ಟೂರು : ಬಾಯಾರಿ ಬಂದವರಿಗೆ ಎಳನೀರು, ಐಸ್, ಶರಬತ್ತು, ಮಿನರಲ್ ವಾಟರ್, ಹಸಿದವರಿಗೆ ಮೃಷ್ಟಾನ್ನ ಭೋಜನ, ತಿನಿಸು ಬಳಲಿ ಬೆಂಡಾದವರಿಗೆ ಶ್ರೂಶೃಷೆ, ವಿಶ್ರಾಂತಿಗೆ ಹಾಸಿಗೆ.... ಇದು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವನ್ನು ಕಣ್ತುಂಬಿಸಿಕೊಳ್ಳಲು ಭಾನುವಾರ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತರಿಗೆ ಕೊಟ್ಟೂರು ನಾಗರೀಕರು ಸಲ್ಲಿಸುತ್ತಿರುವ ಸೇವೆಯ ಪರಿ ಇದು
ಸೋಮವಾರ ನಡೆಯಲಿರುವ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಲೆಂದೆ ದಾವಣಗೆರೆಯಿಂದ ೫೦ ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಮೂಲಕ ಭಾನುವಾರ ಆಗಮಿಸಿದರು. ಪ್ರತಿವರ್ಷದ ಶ್ರೀ ಸ್ವಾಮಿಯ ರಥೋತ್ಸವಕ್ಕೆ ದಾವಣಗೆರೆಯಿಂದ ಪಾದಯಾತ್ರಿಗಳು ಅಧಿಕ ಸಂಖ್ಯೆಯಲ್ಲಿ ಬರುವುದು ಕಳೆದ ೩೪ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ವರ್ಷ ಈ ಸಂಖ್ಯೆ ಲಕ್ಷಕ್ಕೂ ಹೆಚ್ಚು ದಾಟಿದ್ದು, ಧಾರ್ಮಿಕ ರಂಗದಲ್ಲಿ ಗಮನ ಸೆಳೆಯುವಂತಹ ಸಂಗತಿ.
ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ, ಹಾಸನ, ಮುಂಡರಗಿ, ಗದಗ, ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ಕೊಪ್ಪಳ, ಚಿತ್ರದುರ್ಗ,ಹೊಸಪೇಟೆ, ಹರಪನಹಳ್ಳಿ, ಹರಿಹರ, ಮತ್ತಿತರ ಕಡೆಗಳಿಂದಲೂ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುವುದು ಮಂಗಳವಾರ ಮಧ್ಯರಾತ್ರಿಯಿಂದಲೇ ನಡದೇ ಇದ್ದು, ಈ ಸಂಖ್ಯೆ ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತಷ್ಟೂ ಅಧಿಕವಾಗತೊಡಗಿದೆ ಈ ಬಗೆಯ ಪಾದಯಾತ್ರೆಯ ಮೂಲಕ ಆಗಮಿಸುವವರನ್ನು ಸ್ವಾಗತಿಸಲೆಂದು ಪಟ್ಟಣದ ವಿವಿಧ ವರ್ಗದ ಮತ್ತು ಸಂಘ ಸಂಸ್ಥೆಗಳ ಜನತೆ ಟೊಂಕಕಟ್ಟಿ ನಿಂತು ಅವರುಗಳ ಸೇವೆ ನೀಡುವಲ್ಲಿ ಒಬ್ಬರಿಗಿಂತ ಒಬ್ಬರು ಮೇಲೆಂಬತೆ ನಿರಂತರ ತೊಡಗಿಸಿಕೊಂಡಿದ್ದಾರೆ.
ಪಟ್ಟಣದ ಹರಪನಹಳ್ಳಿ ರಸ್ತೆಯುದ್ದಕ್ಕೂ ಪಾದಯಾತ್ರಿಗಳಿಗೆ ಎಳೆನೀರು, ಶರಬತ್ತು, ಮಜ್ಜಿಗೆ,ತಂಪು ಪಾನೀಯ, ಕಲ್ಲುಸಕ್ಕರೆ,ಐಸ್, ದ್ರಾಕ್ಷಿ ಗೋಡಂಬಿ, ಹಾಲು, ಕಾಫಿ, ವಿತರಿಸಲು ಕೆಲವರು ಮುಂದಾಗಿದ್ದಾರೆ. ಪಟ್ಟಣದ ಎಲ್ಲಾ ರಸ್ತೆಗಳಿಂದ ಪಾದಯಾತ್ರೆ ಮೂಲಕ ಆಗಮಿಸುವ ಪ್ರತಿ ಭಕ್ತರಿಗೆ ಈ ಬಗೆಯ ನಿರಂತರ ಸೇವೆ ಶನಿವಾರ ರಾತ್ರಿಯಿಂದಲೇ ನಡೆದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ