ಪಿ.ಶಾಂತಾ ಅವರ ವರ್ಗಾವಣೆಯಾದರೂ ಕರ್ತವ್ಯದಿಂದ ಬಿಡುಗಡೆಗೆ ಮೀನಾಮೇಷ..!
ಕೊಟ್ಟೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಶ್ರೀಮೈಲಾರಲಿಂಗೇಶ್ವರ ಮತ್ತು ಸಮೂಹ ದೇವಸ್ಥಾನಗಳಲ್ಲಿ ಬರುವ ಶ್ರೀಗುರುಬಸವೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪಿ.ಶಾಂತರವರ ಮೇಲೆ ಹಲವಾರು ಆರೋಪಗಳು ಕೇಳಿಬಂದಿದ್ದವು. ಈ ಹಿಂದೆ ಕಾರ್ಯನಿರ್ವಹಿಸಿದ್ದ ಸ್ಥಳಗಳಲ್ಲಿ ಹಲವಾರು ಅಕ್ರಮಗಳು ಎಗ್ಗಿಲ್ಲದೇ ನಡೆದು ಇಲಾಖಾ ವಿಚಾರಣೆಗಳು ಲೋಕಾಯುಕ್ತದಲ್ಲಿ ಬಾಕಿ ಇವೆ. ಮೈಲಾರದಲ್ಲಿ ದೇವಸ್ಥಾನದ ಎದುರುಗಡೆ ವ್ಯಾಪಾರಿಗಳಿಂದ ಪ್ರತಿವಾರ ಮಾಮೂಲು ಪಡೆಯುತ್ತಿದ್ದಾರೆಂಬ ಗ್ರಾಮಸ್ಥರಿಂದ ಆಯುಕ್ತರಿಗೆ ಪತ್ರದ ಮೂಲಕ ಆರೋಪಿಸಿದ್ದರು. ಇವರು ಕರ್ತವ್ಯ ನಿರ್ವಹಿಸುತ್ತಿದ್ದ ದೇವಾಲಯಗಳಲ್ಲಿ ಬೆಳ್ಳಿ, ಬಂಗಾರ, ಹಣ ದುರುಪಯೋಗದ ಕರ್ತವ್ಯಲೋಪಗಳು ಕೇಳಿಬಂದಿದ್ದವು. ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ಶಾಂತಾ ರವರಿಗೆ ಕನ್ನಡ ಸರಿಯಾಗಿ ಓದಲು ಬರೆಯಲು ಬರುವುದಿಲ್ಲ? ಈ ಎಲ್ಲ ಕಾರಣಗಳಿಂದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆಡಳಿತ ಹಿತದೃಷ್ಟಿಯಿಂದ ಪಿ.ಶಾಂತ ಇವರನ್ನು ಯಾದಗಿರಿ ಜಿಲ್ಲೆಯ ಧಾರ್ಮಿಕ ದತ್ತಿ ತಹಸೀಲ್ದಾರ್ ಹುದ್ದೆಗೆ ನಿಯೋಜನೆ ಮೇಲೆ ಸ್ಥಳ ನಿಯುಕ್ತಿ ಮಾಡಿ ದಿನಾಂಕ ೨೬-೦೮-೨೦೨೪ ರಂದು ಅಧಿಕೃತ ಜ್ಞಾಪನದ ಮೂಲಕ ಆದೇಶ ನೀಡಿದ್ದರೂ ಸಹ ಇದುವರೆಗೂ ಇಲ್ಲಿಯ ಕರ್ತವ್ಯದಿಂದ ಬಿಡುಗಡೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶ್ರೀಗುರುಬಸವೇಶ್ವರಸ್ವಾಮಿ ದೇವಸ್ಥಾನದ ಬೆಳ್ಳಿಬಾಗಿಲು ಅಳವಡಿಸುವ ಕೆಲಸದಲ್ಲಿಯೂ ಕೂಡ ನಿರ್ಲಕ್ಷ್ಯ ವಹಿಸಿ, ಪ್ಲೈವುಡ್ ಹಾಕುವುದನ್ನು ಗಮನಿಸಿದ ಸ್ಥಳೀಯರು, ದೈವಸ್ಥರು ಇದನ್ನು ತಡೆಯೊಡ್ಡಿ, ಗಟ್ಟಿಮುಟ್ಟಾದ ತೇಗದ ಕಟ್ಟಿಗೆಗಳನ್ನು ಬಳಸಿ ಬೆಳ್ಳಿಬಾಗಿಲು ನಿರ್ಮಿಸಬೇಕೆಂದು ತಕರಾರು ಮಾಡಿದಾಗ, ಈ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ. ಹಣಕೊರತೆಯಿದೆ ಎಂಬ ಕಾರಣವನ್ನು ನೀಡಿದ್ದಾರೆಂದು ಸಾರ್ವಜನಿಕರಾದ ಪ್ರಕಾಶ್, ರುದ್ರಪ್ಪ, ಸಿದ್ದಲಿಂಗಯ್ಯ ಹೇಳಿದರು. ಇಲಾಖಾ ಮೇಲಾಧಿಕಾರಿಗಳು ಶೀಘ್ರವೇ ಕ್ರಮಕ್ಕೆ ಮುಂದಾಗಬೇಕಿದೆ.
ಕೋಟ್-೧
ಪಿ.ಶಾಂತ ರವರು ಶ್ರೀಗುರುಬಸವೇಶ್ವರಸ್ವಾಮಿ ದೇವಸ್ಥಾನದ ಅನುಪಯುಕ್ತ ಸಾಮಾಗ್ರಿಗಳಾದ ಹಿತ್ತಾಳೆ, ಕಬ್ಬಿಣ, ತಾಮ್ರ ವಸ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮವಾಗಿರುವುದು ಮೇಲ್ನೋಟಕ್ಕೆ ಸತ್ಯವಾಗಿರುವುದರಿಂದ ಇವರನ್ನು ಆಡಳಿತ ಹಿತದೃಷ್ಟಿಯಿಂದ ಬೇರೆ ಕಡೆ ವರ್ಗಾವಣೆ ಮಾಡಲು ಆಯುಕ್ತರ ಗಮನ ಸೆಳೆಯಲಾಗಿದೆ.
ಗಂಗಾಧರಪ್ಪ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬಳ್ಳಾರಿ
ಕೋಟ್-೨
ಮೈಲಾರಲಿಂಗ ದೇವಸ್ಥಾನದಲ್ಲಿ ಹುಂಡಿ ಎಣಿಕೆಯಲ್ಲಿ ೯೩,೦೦,೦೦೦/- ರೂ.ಗಳು ಸಂಗ್ರಹವಾಗಿದ್ದು ಸರಿಯಾಗಿ ನಿರ್ವಹಣೆಯಾಗಿರುವುದಿಲ್ಲ. ಈ ಎಲ್ಲ ಅಕ್ರಮಗಳನ್ನು ಮಾಡಿರುವ ಪಿ.ಶಾಂತ ಇವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ನಿಂಗಪ್ಪ ಎನ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ