*ಕ್ರೀಡಾಕೂಟ ಅಂದು-ಇಂದು ಕ್ರೀಡಾಅಭಿಮನಿಯ ಮನದಾಳದ ಮಾತು *

"ಯುವ ಪೀಳಿಗೆಗೆ ಪ್ರೇರಣೆ -ಅಮರನಾಥ ಎಂಎಂಜೆ"

ಕೊಟ್ಟೂರು: ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು, ಕ್ರೀಡೆಗಳು ಆಯೋಜನೆಗೊಂಡರೆ ಸಾಕು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಲ್ಲಿ ಹಬ್ಬದ ವಾತಾವರಣ ಮನೆಮಾಡುತ್ತಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸುವವರು, ಭಾಗವಹಿಸಿದವರು ಪ್ರತಿಯೊಬ್ಬರೂ ಮೈದಾನದಲ್ಲಿ ಉಪಸ್ತಿತರಾಗುತ್ತಿದ್ದರು. ಸಾಮಾನ್ಯವಾಗಿ 2-3 ಅವಧಿಗೆ ಕ್ರೀಡಾಕೂಟಗಳನ್ನ ಆಯೋಜಿಸಲಾಗುತ್ತಿತ್ತು, ಈ ಅವಧಿಯಲ್ಲಿ ಶಾಲೆಗಳಿಗೆ ಅನಧಿಕೃತವಾಗಿ ರಜೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಲೆಗಳ ವಿದ್ಯಾರ್ಥಿಗಳು ಪ್ರತಿಯೊಬ್ಬರು ಮೈದಾನದಲ್ಲಿ ಸೇರುತ್ತಿದ್ದರು, ತಮ್ಮ ಶಾಲೆಯ ಪ್ರತಿನಿಧಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಕ್ರೀಡಾಕೂಟವನ್ನು ಹಬ್ಬದಂತೆ ಆಚರಿಸಲಾಗುತ್ತಿತ್ತು.

ಕ್ರೀಡಾಕೂಟವು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿತ್ತು. ಅದರಲ್ಲೂ ಖೋ-ಖೋ ಆಟ ಎಂದರೆ ಸಾಕು ಎಲ್ಲರ ದೃಷ್ಟಿ ನೇರವಾಗಿ ಕೊಟ್ಟೂರು ಸಮೀಪದಲ್ಲಿರುವ ಹ್ಯಾಳ್ಯಾ ಗ್ರಾಮದ ವಿದ್ಯಾರ್ಥಿಗಳ ಮೇಲೆ ಬೀಳುತ್ತದೆ. ಶಾಲಾ-ಕಾಲೇಜು ಕ್ರೀಡಾಕೂಟವು ಕೊಟ್ಟೂರು ಭಾಗದ ಹ್ಯಾಳ್ಯಾ ಸೇರಿದಂತೆ ಇತರ ಗ್ರಾಮಗಳ ಪ್ರತಿಭೆಗಳಿಗೆ ಅವಕಾಶ ಸೃಷ್ಟಿಸುವ ವೇದಿಕೆಯಾಗಿತ್ತು. ವಿಪರ್ಯಾಸವೆಂದರೆ ಇಂದಿನ ದಿನಗಳಲ್ಲಿ ಕ್ರೀಡಾಕೂಟದ ವೇದಿಕೆ ಸವೆಯುತ್ತಿದೆ. ಕೊಟ್ಟೂರು ಭಾಗದ ಕ್ರೀಡಾ ಪ್ರತಿಭೆಗಳಿಂದ ಅವಕಾಶಗಳು ದೂರವಾಗುತ್ತಿರುವಂತೆ ಕಾಣುತ್ತಿದೆ. ಇಂದಿನ ದಿನಗಳಲ್ಲಿ ಕ್ರೀಡಾಕೂಟವು ಆಯೋಜನೆಗೊಂಡರೆ, ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮಾತ್ರ ಮೈದಾನಕ್ಕೆ ತೆರಳುತ್ತಾರೆ, ಇವರ ಹೊರತಾಗಿ ಯಾವ ವಿದ್ಯಾರ್ಥಿಗಳು ಮೈದಾನದ ಹತ್ತಿರಕ್ಕೂ ತೆರಳುವುದಿಲ್ಲ, ತಮ್ಮ ಶಾಲೆ-ಕಾಲೇಜು ಪ್ರತಿನಿಧಿಯನ್ನು ಪ್ರೋತ್ಸಾಹಿಸಲು ಯಾರೊಬ್ಬರು ಇರುವುದಿಲ್ಲ, ಎಷ್ಟೋ ಸಾರಿ ಕ್ರೀಡಾಕೂಟವು ಆಯೋಜನೆಗೊಂಡ ವಿಷಯವು ಕ್ರೀಡಾಪಟುಗಳಿಗಲ್ಲದೆ ಬೇರಾರಿಗೂ ತಿಳಿಯದ ವಿಷಯವಾಗಿರುತ್ತದೆ. ಶಾಲಾ-ಕಾಲೇಜುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಉತ್ಸಾಹ ತೋರುತ್ತಿಲ್ಲ.

ಕಳೆದ ಹತ್ತು ವರ್ಷಗಳನ್ನು ಗಮನಿಸಿದರೆ ಶಾಲೆ-ಕಾಲೇಜುಗಳು ಕೇವಲ ಪಠ್ಯಕ್ರಮ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಪತ್ಯೇತರ ಚಟುವಟಿಕೆಗಳನ್ನು ಕಡೆಗಣಿಸುತ್ತಿರುವುದು ಸ್ಪಷ್ಟವಾಗುತ್ತದೆ. ಕೇವಲ ವಿದ್ಯಾರ್ಥಿಗಳ ಅಂಕಗಳನ್ನು ಗಮನದಲ್ಲಿಟ್ಟುಕೊಂಡರೆ ಎಷ್ಟೋ ಗ್ರಾಮೀಣ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಾರೆನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶಾಲಾ-ಕಾಲೇಜಗಳಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡುವುದರಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಒಂದು ತಂಡವಾಗಿ ಹೇಗೆ ಕೆಲಸ ಮಾಡಬಹುದು, ಜೀವನದ ಸವಾಲುಗಳನ್ನು ನಿಭಾಯಿಸುವ ಕಲೆ, ಸಮಯ ನಿರ್ವಹಣೆಯನ್ನು ಕ್ರೀಡೆಯಿಂದ ಕಲಿಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಇವುಗಳನ್ನು ಮಕ್ಕಳಿಗೆ ಕಲಿಸುವುದು ಅತ್ಯಗತ್ಯ.

ಶಾಲಾ-ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಬದಲಾವಣೆ ಅಗತ್ಯತೆ ಕಂಡುಬರುತ್ತಿದೆ. ಪಠ್ಯಕ್ರಮದ ಜೊತೆಗೆ ಪತ್ಯೇತರ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡುವುದರಿಂದ ಕ್ರೀಡೆ, ಸಂಗೀತ, ನೃತ್ಯ ಹೀಗೆ ಹಲವು ಪ್ರತಿಭಾವಂತರಿಗೆ ಅವಕಾಶಗಳು ದೊರೆಯುತ್ತವೆ.

ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಕ್ರೀಡಾಕೂಟವನ್ನು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಕೇವಲ ಅಂಕಗಳಿಗೆ ಸೀಮಿತವಾಗಿರದೆ ಕ್ರೀಡೆಯಲ್ಲಿ ಸ್ಪರ್ಧಿಸಲು ಆಸಕ್ತಿತೋರಬೇಕಾಗಿದೆ. ಕ್ಷೀಣಿಸುತ್ತಿರುವ ಕ್ರೀಡಾಕೂಟದ ವೇದಿಕೆಯನ್ನು ಪುನರ್ನಿಮರ್ಾಣ ಮಾಡುವುದು ಸೂಕ್ತ. ಯಾರು ಬಲ್ಲರು? ಅವಕಾಶಗಳು ಮುಂದೊಂದು ದಿನ ಕೊಟ್ಟೂರು ಭಾಗದ ಪ್ರತಿಭೆ ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನು ಗೆದ್ದು ಕೊಟ್ಟೂರಿನ ಗೌರವವನ್ನು ಹೆಚ್ಚಿಸಬಹುದು. ಅವಕಾಶಗಳು ಸೃಷ್ಟಿಯಾಗಬೇಕಷ್ಟೆ! ಎಂದು ಯುವ ಪೀಳಿಗೆಗೆ ಪ್ರೇರಣೆ ಅಮರನಾಥ ಎಂ ಎಂ ಜೆ ಪತ್ರಿಕೆ ಮೂಲಕ ಹೇಳಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ