ಶಿಲಾ ಲಿಪಿಗಳ ವಿಷಯ ಹೆಕ್ಕಿ ತೆಗೆಯುವ ಛಲಗಾರ ಶಾಸನ ಸಂಶೋಧಕ ಸರಳ ಜೀವಿ ಡಾ.ಚನ್ನಬಸಪ್ಪ ಮಲ್ಕಂದಿನ್ನಿ
ಹೌದು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಪುಟ್ಟ ಹಳ್ಳಿಯಾದ ಮಲ್ಕಂದಿನ್ನಿ [ಕೊತ್ತದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿ] ಗ್ರಾಮದಲ್ಲಿ ಜನಿಸಿದ ಡಾ.ಚನ್ನಬಸಪ್ಪನವರು ತಮ್ಮ ಉನ್ನತ ವ್ಯಾಸಂಗದ ಸಲುವಾಗಿ ಹಲವು ಗ್ರಾಮ ಪಟ್ಟಣಗಳನ್ನು ಸುತ್ತಬೇಕಾಯಿತು. ಹೀಗೆ ಸುತ್ತಾಡುತ್ತಾ ಸಂಶೋಧನಾ ಕ್ಷೇತ್ರಕ್ಕೆ ಮೊದಲ ಹೆಜ್ಜೆ ಎಂಬಂತೆ ದೇವದುರ್ಗ ತಾಲ್ಲೂಕು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಮೇಲೆ ಎಂ.ಫಿಲ್ ಪದವಿ [ಕ್ರಿ.ಶ., ೨೦೦೧]ಯನ್ನು ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪಡೆದರು.
ಹಾಗೆಯೇ ಮುಂದೆ ಇವರು ರಾಯಚೂರು ಜಿಲ್ಲೆಯ ಶಾಸನಗಳ ಸಮಗ್ರ ಅಧ್ಯಯನ [ಕ್ರಿ.ಶ.೨೦೦೭] ಎಂಬ ವಿಷಯಕ್ಕೆ ಇತಿಹಾಸ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವುಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ ಬೆಂಗಳೂರಿನಲ್ಲಿ ಶಾಸನಶಾಸ್ತ್ರ ಎರಡು ವರ್ಷಗಳ ಡಿಪ್ಲೋಮ ಪದವಿಯನ್ನು ಪಡೆದಿದ್ದಾರೆ. ಶ್ರೀಯುತ ಡಾ.ಚನ್ನಬಸಪ್ಪನವರು ಕ್ರಿ.ಶ. ೧೯೯೮ನೇ ವರ್ಷದಿಂದ ಪ್ರಸ್ತುತ ದಿನಗಳವರೆಗೆ ರಾಯಚೂರು ಜಿಲ್ಲೆಯ ಪ್ರಾಗೈತಿಹಾಸಿಕ ನೆಲೆಗಳಾದ ಆಲ್ಕೋಡ, ತೆಗ್ಗಿಹಾಳ, ನಿಲವಂಜಿ, ಮಲದಕಲ್, ಕಲ್ಲೂರು, ವಟಗಲ್, ಯತಗಲ್, ಅಮೀನಗಢ, ಕೋಟೆಕಲ್, ಮಸ್ಕಿ, ಬಿಲ್ಲಮರಾಯನಗುಡ್ಡ ಮೊದಲಾದ ಗ್ರಾಮಗಳಲ್ಲಿನ ಬೂದಿದಿಬ್ಬ, ಬಯಲುಬಂಡೆಯ ಚಿತ್ರಗಳು, ಬೃಹತ್ ಶಿಲಾಯುಗದ ಸಮಾಧಿಗಳನ್ನು ಶೋಧಿಸಿದ್ದಾರೆ.
ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಶಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾರೆ ಇವರು ರಾಯಚೂರು ಜಿಲ್ಲೆಯಲ್ಲಿ ಯತಗಲ್, ರೌಡಕುಂದಾ ಗ್ರಾಮಗಳಲ್ಲಿ ಬದಾಮಿ ಚಾಳುಕ್ಯ ಅರಸರ ಶಾಸನಗಳನ್ನು ಶೋಧಿಸಿದ್ದಾರೆ. ಮಲಿಯಾಬಾದ್, ಬೆಲ್ಲದಮರಡಿ ಗ್ರಾಮಗಳಲ್ಲಿ ನೊಳಂಬವಾಡಿ ಪಲ್ಲವರ ಶಾಸನಗಳು, ಬೈಲ ಮರ್ಚೆಡ, ಮಲಿಯಾಬಾದ್, ಮೊದಲಾದ ಗ್ರಾಮಗಳಲ್ಲಿ ರಾಷ್ಟçಕೂಟರ ಶಾಸನಗಳು, ತಲೇಖಾನ್ ಗ್ರಾಮದಲ್ಲಿ ತಲಕಾಡಿನ ಗಂಗರಶಾಸನ, ಮಸ್ಕಿಪಟ್ಟಣದ ಸುಳಿದಿಬ್ಬದಲ್ಲಿ ಬೌದ್ಧಸ್ತೂಪದೊಂದಿಗೆ ಚೋಳ ಅರಸ ರಾಜೇಂದ್ರ ವರ್ಮನ ಶಾಸನವನ್ನು ಪತ್ತೆ ಮಾಡಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಚೋಳರ ಶಾಸನವಾಗಿದೆ. ಇದರಲ್ಲಿ ಕಲ್ಯಾಣ ಚಾಳುಕ್ಯ ಅರಸ ಇಮ್ಮಡಿ ಜಯಸಿಂಹನನ್ನು ಮೊಸಗೆ (ಪ್ರಸ್ತುತ ಮಸ್ಕಿ) ಯುದ್ಧದಲ್ಲಿ ಸೋಲಿಸಿ (ಕ್ರಿ.ಶ. ೧೦೨೦) ಪರ ಕೇಸರಿ ವರ್ಮನ ಎಂಬ ಬಿರುದು ಪಡೆದ ಪ್ರಶಸ್ತಿ ಶಾಸನವಾಗಿದೆ. ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿರುವ ಕ್ರಿ.ಶ. ೧೧೬೨ರ ಶಾಸನವು ರಾಯಚೂರು ಜಿಲ್ಲೆಯಲ್ಲಿಯೇ
ಏಕೈಕ ಘಟಿಕಾಸ್ಥಾನ (ಉನ್ನತ ಶಿಕ್ಷಣ ಕೇಂದ್ರ, ವಿಶ್ವವಿದ್ಯಾಲಯ) ಮಲ್ಲಟ ವಾಗಿತ್ತೆಂದು ತಿಳಿಸುತ್ತದೆ. ಇದನ್ನು ಇವರೇ ಶೋಧಿಸಿದ್ದಾರೆ. ಇನ್ನೂ ಅನೇಕ ಮಹತ್ತರ ಶಾಸನಗಳನ್ನು ಮಸರಕಲ್, ಸೋಮಲಾಪುರ, ಸಿಂಧನೂರು, ಕುಪ್ಪಿಗುಡ್ಡ ಮೊದಲಾದ ಗ್ರಾಮಗಳಲ್ಲಿ ಶೋಧಿಸಿದ್ದಾರೆ. ಇವುಗಳೊಂದಿಗೆ ದೇವಾಲಯಗಳು, ವೀರಗಲ್ಲು, ಮಾಸ್ತಿಗಲ್ಲು, ಕೋಟೆ, ಮೂರ್ತಿ ಶಿಲ್ಪ, ಸಾಹಿತ್ಯ ಮೊದಲಾದ ವಿಷಯಗಳಲ್ಲಿ ರಾಜ್ಯ, ರಾಷ್ಟೀಯ, ಅಂತರ ರಾಷ್ಟೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಇವರ ವಿದ್ವತ್ ಪೂರ್ಣ ಲೇಖನಗಳು ಪ್ರಕಟಗೊಂಡಿವೆ.
ಇತಿಹಾಸ ದರ್ಶನ, ಕರ್ನಾಟಕ ಲೋಚನ, ಇತಿಹಾಸದ ದರ್ಪಣ, ಸಿರಿದುರ್ಗ, ದೇವದುರ್ಗ ತಾಲೂಕು ದರ್ಶನ ಗ್ರಂಥಗಳಲ್ಲದೆ ಅನೇಕ ದಿನಪತ್ರಿಕೆಗಳಲ್ಲಿ ಶ್ರೀಯುತರ ಲೇಖನಗಳು ಪ್ರಕಟಗೊಂಡು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿವೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಚನ್ನಬಸಪ್ಪನವರು ಪ್ರಸ್ತುತ ದಿನಗಳವರೆಗೆ ರಾಯಚೂರು ಜಿಲ್ಲೆಯ ಹಲವಾರು ಹಳ್ಳಿ ಪಟ್ಟಣಗಳನ್ನು ಸುತ್ತಾಡಿ ಯಾವುದೇ ಸರ್ಕಾರಿ, ಸಂಘ ಸಂಸ್ಥೆ ಮೊದಲಾದವುಗಳ ನೆರವು ಪಡೆದುಕೊಂಡಿರುವುದಿಲ್ಲ ಇವರು ಯಾವುದೇ ಲೇಖನ ಪುಸ್ತಕ ಬರೆಯ ಬೇಕಾದರೆ ಕ್ಷೇತ್ರ ಕಾರ್ಯದೊಂದಿಗೆ ಆಳವಾಗಿ ಅಧ್ಯಯನ ಮಾಡಿ ಬರೆಯುತ್ತಾರೆ. ಇವರಿಗೆ ಶಾಸನ ಕ್ಷೇತ್ರವೆಂದರೆ ಅಚ್ಚು ಮೆಚ್ಚು ಇದಕ್ಕೆ ರಾಯಚೂರು ಜಿಲ್ಲೆಯ ಚರಿತ್ರೆ ಶಾಸನಗಳ ಹಿನ್ನೆಲೆಯಲ್ಲಿ, ದೇವದುರ್ಗ ತಾಲ್ಲೂಕಿನ ಪ್ರಾಚೀನ ಅವಶೇಷಗಳು, ರಾಯಚೂರು ಸಂಪದ-೦೧ ಕೃತಿಗಳಲ್ಲದೆ ಇನ್ನೂ ಅನೇಕ ಕೃತಿಗಳನ್ನು ಪ್ರಕಟಿಸುವ ಹಂತದಲ್ಲಿದ್ದಾರೆ. ರಾಯಚೂರು ಜಿಲ್ಲೆಯ ಸಂಶೋಧದಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಪ್ರಸ್ತುತ ಜಿಲ್ಲೆಯಲ್ಲಿ ೩೦೦ಕ್ಕಿಂತ ಹೆಚ್ಚು ಅಪ್ರಕಟಿತ ಶಾಸನಗಳನ್ನು ಶೋಧಿಸಿ ಪುಸ್ತಕ ಪ್ರಕಟಿಸುವವರಿದ್ದಾರೆ.
ಇವರು ದೇವದುರ್ಗ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಬಸಿ ನಂತರ ಮಸ್ಕಿ ದೇವನಾಂಪ್ರಿಯ
ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಸಿಂಧನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡೂ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆ ಕುರಿತು ಇವರು ವಿಶೇಷ ಅಧ್ಯಯನ ಶಿಸ್ತಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯವರು ಕ್ರಿ.ಶ. ೨೦೨೩ರ ಸಾಲಿನ ೩೮ನೇ ವಾರ್ಷಿಕ ಸಮ್ಮೇಳನದಲ್ಲಿ ನೊಳಂಬ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹೀಗೆ ಇವರ ಸೇವೆ ಜನಪರ, ಸಮಾಜಮುಖಿಯಾಗಿದ್ದು, ಮುಂದಿನ ಯುವ ಪೀಳಿಗೆಯ ಮನದಲ್ಲಿಟ್ಟುಕೊಂಡು ಸಂಶೋಧಿಸಿರುವುದು ಅಭಿನಂದನೀಯ ಅನುಕರಣೀಯ. ಏಕೆಂದರೆ ರಾಯಚೂರು ಜಿಲ್ಲೆಯಲ್ಲಿ ಇಂತಹ, ಸರಳ, ಸಜ್ಜನ, ಮೃದು ಸ್ವಭಾವ, ಸದಾಹಸನ್ಮುಖಿ, ನಿರಾಡಂಬರ ಜೀವನ, ಎಲ್ಲರೊಂದಿಗೆ ಆತ್ಮೀಯ ಒಡನಾಟ, ಕ್ರಿಯಾಶೀಲ ವ್ಯಕ್ತಿತ್ವವಿದ್ದರೂ ಈ ಜಿಲ್ಲೆಯ ಕೆಲ ನಕಲಿ ಸಂಶೋಧಕರು ಮತ್ತು ರಾಜಕೀಯ ವ್ಯಕ್ತಿಗಳಿಂದ ಡಾ.ಚನ್ನಬಸಪ್ಪನವರ ಹೆಸರು ಪ್ರಚಾರವಾಗದಂತೆ ದಿನನಿತ್ಯಲೂ ವಂಚಿಸುವವರಿದ್ದಾರೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ.
ರಾಯಚೂರು ಜಿಲ್ಲೆಯೊಂದಿಗೆ ಕರ್ನಾಟಕದ ಪ್ರಜ್ಞಾವಂತ ನಾಗರೀಕರು ಅಂತಹ ನಕಲಿ ಶೋಧಕರ ಮಾತು ಬರವಣಿಗೆಗಳಿಗೆ ದಾರಿ ತಪ್ಪದೆ ನೈಜ ವ್ಯಕ್ತಿತ್ವಹೊಂದಿದ ಡಾ.ಚನ್ನಬಸಪ್ಪನವರ ಹಗಲಿರುಳು ಶ್ರಮದಾಯಿಕವಾಗಿ ಶೋಧಿಸಿದ ಬರವಣಿಗೆಗೆ, ಮಾತುಗಳಿಗೆ ಮನ್ನಣೆ ನೀಡಿ ಶ್ರೀಯುತರ ಬರಹವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಕೃಷ್ಟವಾಗಿ ಮಾಡಿ ಪ್ರೋತ್ಸಾಹಿಸಬೇಕಾಗಿದೆ. ಡಾ.ಚನ್ನಬಸಪ್ಪನವರ ಬರವಣಿಗೆಯಿಂದ ಕನ್ನಡ ಸಾರಸತ್ವಲೋಕವು ಶ್ರೀಮಂತ ಗೊಂಡು ಅವರ ಜೀವನವು ಉಲ್ಲಾಸದಾಯಕವಾಗಿ ಮುಂದಿನ ದಿನಮಾನಗಳಲ್ಲಿ ಪ್ರಜ್ವಹಿಸಲೆಂದು ಇತಿಹಾಸ ಪ್ರಿಯರು ಹಾಗೂ ಬುದ್ಧಿವಂತ ನಾಗರಿಕರ ಆಸೆ ಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ