ಶಿಕ್ಷಕ - ಜೀವನದ ರೂಪಕ
ಶಿಕ್ಷಕ - ಜೀವನದ ರೂಪಕ
ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೂ ನಮ್ಮೊಡನೆ ಸಾಗಿ ಬರುವ ಒಂದು ಸಂಗತಿ ಎಂದರೆ ಅದು ಕಲಿಕೆ. ಈ ಕಲಿಕೆಗೆ ಪ್ರೇರಕ ಶಕ್ತಿ ಎಂದರೆ ಗುರು ಅಥವಾ ಶಿಕ್ಷಕ.
ಯಾವುದೇ ವ್ಯಕ್ತಿಯ ಜೀವನದಲ್ಲಿ "ಮುಂದೆ ಗುರಿ ಹಿಂದೆ ಗುರು", ಈ ಎರಡು ಅಂಶಗಳು ಇದ್ದರೆ ಆ ವ್ಯಕ್ತಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ. ಹಾಗೆಯೇ ಎಲ್ಲರ ಜೀವನದ ಪ್ರತಿಯೊಂದು ಹಂತದಲ್ಲಿಯೂ ಗುರುಗಳು ಇದ್ದೇ ಇರುತ್ತಾರೆ. ಜೀವನದ ಒಂದು ಹಂತ ನಾವು ದಾಟುತ್ತಿದ್ದೇವೆ ಎಂದರೆ ಗುರುವಿಲ್ಲದೆ ಅದು ಸಾಧ್ಯವಿಲ್ಲ.ನನ್ನ ದೃಷ್ಟಿಯಲ್ಲಿ ಗುರು ಎಂದರೆ "ಒಂದು ದಿವ್ಯ ಸೃಷ್ಟಿ ಹಾಗೂ ದಿವ್ಯ ಶಕ್ತಿ". ಗುರುವಿಗೆ ಪರ್ಯಾಯವಾಗಿ ಬೇರೆ ಯಾವುದೂ ಇರುವುದಕ್ಕೆ ಸಾಧ್ಯವಿಲ್ಲ ಹಾಗೆ ಗುರುವಿಗೆ ಸಮನಾದದ್ದು ಯಾವುದು ಇಲ್ಲ.
"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಹೇಳುವಂತೆ,ಗುರುಗಳು ಹೇಳುವ ಮಾತುಗಳನ್ನು, ಉಪದೇಶಗಳನ್ನು ಸರಿಯಾಗಿ ಪರಿಪಾಲನೆ ಮಾಡಿದರೆ ನಮ್ಮ ಬದುಕು ಸುಗಮವಾಗಿ ಸಾಗುವುದರಲ್ಲಿ ಅನುಮಾನವಂತೂ ಇಲ್ಲ. ಎಷ್ಟೇ ಜಾಣನಾದರೂ ಶಿಸ್ತಿಲ್ಲ ಎಂದರೆ ಎಷ್ಟೇ ತಿಳಿದುಕೊಂಡರು ಪ್ರಯೋಜನವಿಲ್ಲ. ಆದ್ದರಿಂದ ಶಿಸ್ತು ಬದ್ಧ ಜ್ಞಾನಾರ್ಜನೆ ನಮ್ಮದಾಗಲಿ. ಇದೇ ನಾವು ನಮ್ಮ ಗುರುಗಳಿಗೆ ಅಥವಾ ಶಿಕ್ಷಕರಿಗೆ ಕೊಡುವ ಉಡುಗೊರೆ ಎಂದರೆ ತಪ್ಪಾಗಲಾರದು.
ಅತ್ಯುತ್ತಮ ಶಿಕ್ಷಕರಾಗುವುದು ಅಷ್ಟು ಸುಲಭವಾದ ಕೆಲಸವಲ್ಲ ಎಷ್ಟೇ ಪದವಿಗಳು ಇದ್ದರೂ, ಎಷ್ಟೇ ಜ್ಞಾನವನ್ನು ಹೊಂದಿದ್ದರು, ಹೇಳುವ ಪಾಠ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂದರೆ ಯಾವ ಪ್ರಯೋಜನವಿಲ್ಲ. ಯಾವ ಶಿಕ್ಷಕ ವಿದ್ಯಾರ್ಥಿಯ ಮಟ್ಟಕ್ಕೆ ಇಳಿದು ಅವರಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಿದಾಗ,ತಿಳಿ ಹೇಳಿದಾಗ ಮಾತ್ರ ಅವರು ಅತ್ಯುತ್ತಮ ಶಿಕ್ಷಕ ಎನಿಸಿಕೊಳ್ಳುತ್ತಾರೆ.ಶಿಕ್ಷಕರ ಸಾರ್ಥಕತೆ ವಿದ್ಯಾರ್ಥಿಗಳ ಯಶಸ್ಸಿನಲ್ಲಿದೆ ಎಂದರೆ ತಪ್ಪಾಗಲಾರದು.
ಎಪಿಜೆ ಅಬ್ದುಲ್ ಕಲಾಂ ಹೇಳುವಂತೆ ,"ಒಬ್ಬ ವ್ಯಕ್ತಿಯ ನಡತೆ, ಕೌಶಲ್ಯ, ಭವಿಷ್ಯವನ್ನು ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು".ಆದ್ದರಿಂದ ಇಂತಹ ಶಿಕ್ಷಕ ವೃತ್ತಿಯನ್ನು ಗೌರವಿಸೋಣ.
"ತಾಯಿಯೇ ಮೊದಲ ಗುರು" ಎಂದು ಹೇಳುವ ಹಾಗೆ, ನನ್ನ ತಾಯಿ, ತಂದೆ, ನನ್ನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು
ದೀಪಿಕಾ ನೆಲ್ಕುದ್ರಿ ವಿದ್ಯಾರ್ಥಿನಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ