*ಕಾಲಹರಣವೇ ಮರಣ*
*ಭಾವದಂಗಳ -36*
ವಿಶೇಷ ಲೇಖನ
ಬದುಕು ಕೆಲವೇ ಕೆಲವು ದಿನಗಳ ಓಟ.ಕೈ ಬೆರಳುಗಳ ಎಣಿಕೆಯ ಆಟ.ಸೋಲು ಗೆಲುವಿನ ಸೆಣಸಾಟ.ಸಮಯವಿರುವಾಗ ವಿನಾ ಕಾರಣ
ಕಾಲಹರಣ ಮಾಡುವ ನಾವು ಮುಂದೊಂದು ದಿನ ನಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಂತಾಗುತ್ತದೆ.ಯಾವುದೇ ಕೆಲಸವಿರಲಿ ಆಯಾ ಸಮಯಕ್ಕೆ ಸರಿಯಾಗಿ ಮಾಡಿದರೆ ಅದು ಸಾರ್ಥಕ,ಇಲ್ಲವೆಂದರೆ ನಿರರ್ಥಕ. ಬಿಸಿಯಾದ ಪಾನೀಯ ನಂತರ ಕುಡಿಯೋಣವೆಂದು ಕೊಂಡರೆ ಅದು ತಣ್ಣಗಾಗಬಹುದು.ಇಂದು ಮಾಡಬೇಕೆಂದುಕೊಂಡಿರುವ ಕೆಲಸ ನಾಳೆ ಮಾಡಿದರಾಯಿತು ಎಂದುಕೊಂಡರೆ ದಿನಗಳು ಕಳೆದೇ ಹೋಗಿ ಕಾದಿರುವ ನಾಳೆಗಳು ಬಾರದೇ ಹೋಗಬಹುದು.ನಂತರ ಅಂದು ಕೊಂಡರೆ ನಮಗಾಗಿ ಬಂದಿರುವ ಅವಕಾಶಗಳು ಬೇರೊಬ್ಬರ ಪಾಲಾಗಬಹುದು,ಕೆಲಸದ ಮೇಲಿನ ಆಸಕ್ತಿ ಕಡಿಮೆ ಆಗಬಹುದು.ಇಂದಿನ ಕೆಲಸ ಇಂದೇ ಮಾಡಿ ಮುಗಿಸುವ ಮನಸ್ಥಿತಿ ಬೆಳೆಸಿಕೊಂಡರೆ ಯಶಸ್ಸು ಖಚಿತ.
*ಆಲಸ್ಯವೇ ಯಶಸ್ಸಿನ ಪರಮ ಶತ್ರು*
ನಾವು ಮಾಡಬೇಕೆಂದು ಕೊಂಡಿರುವ ಕೆಲಸ ಮುಂದೂಡುವುದೇ ಒಂದು ಅಭ್ಯಾಸವಾಗಿ ಹೋಗುವುದು. ಇದಕ್ಕೆಲ್ಲಾ ಕಾರಣವಾದ ಆಲಸ್ಯವೇ ವಿಷ ಎನ್ನುವ ಅರಿವಿದ್ದರೂ ಅದನ್ನೇ ರೂಢಿಯಾಗಿಸಿಕೊಳ್ಳುತ್ತೇವೆ. ಆಲಸ್ಯದ ಹುಟ್ಟು ಒಂದು ದುರಂತ. ನಿರಾಸೆ, ಭಯ, ಅವಮಾನ, ಗೊಂದಲ,ದೂರು,ಅಪನಂಬಿಕೆ,ಅನಿಶ್ಚಿತತೆ,ಚಿಂತೆ,
ನಿರೀಕ್ಷೆ ಗಳೆಂಬ ಭಾರವನ್ನು
ನವ ಮಾಸಹೊತ್ತು ಪ್ರಸವಿಸುವ ಆಲಸ್ಯ ಎಲ್ಲಾ ಶಕ್ತಿಗಳನ್ನೂ ಕೊಂದು ವ್ಯಕ್ತಿಯನ್ನು ಅಸಹಾಯಕ ಸ್ಥಿತಿಗೆ ತಳ್ಳುವುದು . ಯಾವುದೇ ಕೆಲಸ ಮಾಡುವ ಮುನ್ನ ಆಮೇಲೆ ಎನ್ನುವುದನ್ನು ಬಿಟ್ಟರೆ ನಾವು ಜೀವನದಲ್ಲಿ ಮೇಲೆ ಬರಲು ಸಾಧ್ಯ. ಕೆಲಸವನ್ನು ಎಷ್ಟು ಬೇಗ ಆರಂಭಿಸುತ್ತೇವೋ ಅಷ್ಟೇ ಬೇಗ ಕೆಲಸ ಮುಗಿಯುವುದು.ಕೆಲಸ ಮಾಡಲೇ ಬೇಕೆಂಬ ತುಡಿತವಿದ್ದರೆ ಅನಾರೋಗ್ಯ,ಬಿಡುವಿಲ್ಲ,ಇತ್ಯಾದಿ ಎಲ್ಲಾ ಕಾರಣಗಳೂ ನಗಣ್ಯವಾಗುವುದು.ಸೋಮಾರಿತನ ಮನುಷ್ಯನ ದೇಹ ಸೇರಿದ ದೊಡ್ಡ ರಾಕ್ಷಸ ಎನ್ನುವ ಅರಿವಾಗುವುದರ ಒಳಗಾಗಿ ಬಹಳಷ್ಟು ಸಮಯ ವ್ಯರ್ಥವಾಗಿ ಕಳೆದು ಹೋಗುವುದು.
*ಪ್ರಯತ್ನವೆಂಬ ಯತ್ನ*
ನಾವು ಸಾಧಿಸಬೇಕಾದ ಗುರಿ ತಲುಪಿದ ಬಳಿಕ ನಮ್ಮ ಪ್ರಯತ್ನವನ್ನೇ ನಿಲ್ಲಿಸುತ್ತೇವೆ.ನಮ್ಮ ಗುರಿ ತಲುಪಿದೆವು ಎನ್ನುವ ತೃಪ್ತಿಯಿಂದ ಕುಳಿತಲ್ಲಿಯೇ ಬದುಕು ಸವೆಸುತ್ತೇವೆ.ನಮ್ಮ ಪ್ರಯತ್ನ,ಶ್ರಮ ಎಂದಿಗೂ ನಿಂತ ನೀರಂತೆ ಆಗಬಾರದು.ಪ್ರಯತ್ನವೆನ್ನುವುದು ಬೀಜದ ಹಾಗೆ ಬಿತ್ತುತ್ತಲೇ ಇರಬೇಕು. ಚಿಗುರಿದರೆ ಮರವಾಗಿ ನಾಲ್ಕು ಮಂದಿಗೆ ನೆರಳಾಗುವುದು. ಕೊಳೆತರೆ ಗೊಬ್ಬರವಾಗಿ ಬಲ ನೀಡುವುದು.
*ಸೋರಿ ಹೋಗುವ ಬದುಕು*
ಬೊಗಸೆಯಲ್ಲಿ ಹಿಡಿದಿಟ್ಟ ನೀರು ಎಷ್ಟು ಹೊತ್ತು ಹಾಗೇ ಇರಬಲ್ಲದು.ಅದರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾದಂತೆ ಹನಿ ಹನಿಯಾಗಿ ಸೋರಿ ಹೋಗುವ ನೀರಿನಂತೆ ಈ ಬದುಕು.ಗಡಿಯಾರದಲ್ಲಿ ಮುಳ್ಳೊಂದು ಟಿಕ್ ಟಿಕ್ ಶಬ್ದದೊಂದಿಗೆ ಮಿಂಚಿನ ವೇಗದಲ್ಲಿ ಸಾಗುತ್ತದೆ.ಅದರೊಂದಿಗೆ ನಾವು ಸಾಗಬೇಕೆ ವಿನಃ ಒಂದು ಕ್ಷಣ ಹಿಂದಕ್ಕೆ ಚಲಿಸಿ ನಮ್ಮ ಕೆಲಸ ಮುಗಿಸಿ ಮುಂದಕ್ಕೆ ಸಾಗುವ ಯಾವ ಅವಕಾಶಗಳೂ ಇಲ್ಲ. ಹೀಗೆ ವ್ಯರ್ಥವಾಗುತ್ತಿರುವ ನಮ್ಮ ಬದುಕಿನ ಅಮೂಲ್ಯ ಕ್ಷಣಗಳು ಮತ್ತೆ ಹಿಂದಿರುಗಿ ಬರುವುದಿಲ್ಲ.ಬೊಗಸೆಯಲ್ಲಿ ಹಿಡಿದ ನೀರಿನಂತೆ ನಮ್ಮ ಬದುಕು ವ್ಯರ್ಥವಾಗಬಾರದೆಂದರೆ ಸದಾ
ಕ್ರಿಯಾಶೀಲರಾಗಿರಬೇಕು.
*ಸಮಸ್ಯೆಗಳೆಂಬ ಕುಂಟು ನೆಪ*
ಯಾವುದೇ ಕೆಲಸ ಮಾಡಬೇಕೆಂದುಕೊಳ್ಳುವಾಗ ಸಮಸ್ಯೆಗಳು ಎದುರಾಗುವುದು.ಆದರೆ ಇದನ್ನೇ ಕುಂಟು ನೆಪವನ್ನಾಗಿಸಿ ಮೈಗಳ್ಳತನ ರೂಢಿಸಿಕೊಂಡರೆ ನಾಳೆಗೆ ಅದೇ ಸವಾಲಾಗಿ ಕಾಡುವುದು.ರಸ್ತೆಯಲ್ಲಿ ಸಂಚರಿಸುವಾಗ ವಾಹನ ದಟ್ಟಣೆ ನಿಯಂತ್ರಿಸಲು ಕೆಂಪು ದೀಪ ಉರಿಯುವುದು.ಸ್ವಲ್ಪ ಹೊತ್ತು ಕಾದರೆ ಹಸಿರು ದೀಪ ಬಂದೇ ಬರುವುದು.ಅಲ್ಲಿಯ ತನಕ ಕಾಯುವ ಸಹನೆ ಇಲ್ಲದೇ ದುಡುಕಿದರೆ ವಿನಾಕಾರಣ ದಂಡ ತೆರಬೇಕಾದೀತು.ಸಮಸ್ಯೆಗಳು ಎದುರಾದಾಗ ಸಹನೆ ಮುಖ್ಯ.ನಮಗೆ ವಹಿಸಿದ ಕೆಲಸದ ಆಳ ,ಅಗಲಗಳನ್ನು ಅರಿತುಕೊಂಡು ಕೆಲಸಕ್ಕೆ ಧುಮುಕಬೇಕು.ಒಮ್ಮೆ ಮುಂದಡಿ ಇಟ್ಟ ಮೇಲೆ ಇದು ನನ್ನಿಂದ ಸಾಧ್ಯವಿಲ್ಲ ಎಂದು ಯೋಚಿಸಿ ಹಿಂದೆ ಸರಿಯುವ ಬದಲು ಸರಿಯಾಗಿ ಯೋಚಿಸಿ ಕಾರ್ಯೋನ್ಮುಖರಾಗಬೇಕು.
*ಕನಸಿನ ಕುದುರೆ ಏರಿದಾಗ*
ನಮ್ಮ ಬದುಕಲ್ಲಿ ಕೆಲವೊಮ್ಮೆ ನಾವು ಕಾಣುವ ಕನಸು ಖುಷಿಕೊಡಬಹುದು,ಆದರೆ ಅದು ನಿಜವಲ್ಲ. ಈ ಬದುಕು ನಿಜ,ಆದರೆ ಖುಷಿ ಕೊಡುವುದಿಲ್ಲ.ಕನಸು ಕಾಣುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಸಮಯವನ್ನು ವ್ಯರ್ಥವಾಗಿ ಕಳೆಯುತ್ತೇವೆ.ಕನಸು ಕಾಣಲು ನಾವೇನೂ ಹಣ ಕೊಡಬೇಕಾಗಿಲ್ಲ,ಆದರೆ ಅದನ್ನು ನನಸು ಮಾಡಲು ಪಣ ತೊಡಲೇ ಬೇಕು.ಕೇವಲ ಕನಸು ಕಂಡರಷ್ಟೇ ಸಾಲದು,ಅದನ್ನು ನಿಜವಾಗಿಸುವಲ್ಲಿ ಅವಿರತ ಪ್ರಯತ್ನ,ಶ್ರಮ ಮುಖ್ಯ.ಕನಸಿನ ಬತ್ತಳಿಕೆಯಲ್ಲಿ ಇರುವ ಹುಸಿ ಬಾಣಗಳು ನಮ್ಮ ಚಿತ್ತವನ್ನು ಚಂಚಲ ಗೊಳಿಸಬಹುದು. ಚಾಂಚಲ್ಯದ ಸೆಳೆತಕ್ಕೆ ಬೇಲಿ ಹಾಕದ ಹೊರತು ಗುರಿ ಸೇರಲು ಸಾಧ್ಯವಿಲ್ಲ.ಕಾಲದ ಮಹತ್ವ ಅರಿತು ಸಾಗಿದರೆ ಆಲಸ್ಯ ನಮ್ಮ ಹತ್ತಿರಕ್ಕೂ ಸುಳಿಯದು.ಪ್ರತಿ ಕ್ಷಣವೂ ನಮ್ಮ ನಾಳೆಯ ಕನಸು, ಆ ಕನಸನ್ನು ನನಸಾಗಿಸುವಲ್ಲಿ ನಮ್ಮ ಪ್ರಯತ್ನ ಸದಾ ಇರಲಿ.ಅಲ್ಲವೇ?
✍️✍️✍️ಪ್ರಜ್ವಲಾ ಶೆಣೈ ಕಾರ್ಕಳ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ