ಪಿತಾಮಹ ಅಂಕಣ
ಭಾವದಂಗಳ - 16
ಅರ್ಧ ಸತ್ಯ
ಕೆಲವೊಂದು ಮಾತುಗಳೇ ಹಾಗೆ ಹೇಳಿದರೆ ನೋವು,ಹೇಳದೆ ಇದ್ದರೆ ಸಂಕಟ.ಎಷ್ಟೋ ಬಾರಿ ಏನೋ ಹೇಳಬೇಕು ಎಂದು ಬಾಯ್ತೆರೆಯುತ್ತೇವೆ,ಆದರೆ ಕೊನೆವರೆಗೂ ಹೇಳಲಾಗದೇ ಕೊರೆಯುತ್ತಿರುವ ವಿಚಾರವನ್ನು ಮನಸ್ಸಿನೊಳಗೆ ಇಂಗಿಸಿ ಬಿಡುತ್ತೇವೆ.ಏನನ್ನು ಹೇಳಬೇಕು ಎನ್ನುವುದು ವಿವೇಚನೆ,ಎಷ್ಟು ಹೇಳಬೇಕು ಎನ್ನುವುದು ಬುದ್ಧಿವಂತಿಕೆ. ಯಾವಾಗ, ಏನನ್ನು,ಹೇಗೆ, ,ಎಷ್ಟು ಹೇಳಬೇಕು ಎನ್ನುವುದನ್ನು ನಿರ್ಧರಿಸುವವರು ನಾವೇ. ಆದರೆ ನಮ್ಮನ್ನು ನಾವು ಕಾಪಾಡಿ ಕೊಳ್ಳಲು,ನಮ್ಮ ತಪ್ಪುಗಳನ್ನು ಮರೆಯಾಗಿಸಲು ಪೂರ್ಣ ಸತ್ಯವನ್ನು ಹೇಳದೆ ತೊಳಲಾಡುತ್ತೇವೆ.ಆ ಸತ್ಯ ತನ್ನಲ್ಲೇ ಸಮಾಧಿಯಾಗಲಿ ಎಂದು ಬಯಸುತ್ತೇವೆ.ಈ ಯಾಂತ್ರಿಕ ಯುಗದಲ್ಲಿ ಕ್ಷಣಮಾತ್ರದಲ್ಲಿ ಒಂದು ಬೆರಳಿನ ಸ್ಪರ್ಶದಿಂದ ಎಷ್ಟೋ ಕಾಲ ಜೊತೆಯಾಗಿ ಕಳೆದ ಸಾವಿರಾರು ನೆನಪುಗಳನ್ನು ಅಳಿಸಿ ಹಾಕಬಹುದು.ಆದರೆ ಬದುಕಿನುದ್ದಕ್ಕೂ ಒಂದಷ್ಟು ಹೇಳದೇ ಉಳಿದ ಮಾತುಗಳನ್ನು,ಹೃದಯದಲ್ಲಿ ಅಚ್ಚಾದ ಕ್ಷಣಗಳನ್ನು ಎಂದಿಗೂ ಅಳಿಸಲಾಗದು.ನಮ್ಮ ಬದುಕಿನ ಪುಸ್ತಕದಲ್ಲಿ ಅದೆಷ್ಟೋ ಅರ್ಥವಾಗದ ಪುಟಗಳಿರುತ್ತವೆ.ಎಷ್ಟೇ ಅರ್ಥೈಸಿಕೊಂಡರೂ ಅರ್ಥವಾಗದೆ ಕೊನೆಗೆ ಬದುಕು ನಿರರ್ಥಕವೆನಿಸುತ್ತದೆ.ಅರ್ಥವಾಗದ, ಅರ್ಥೈಸಲು ಆಗದ ಮೂಕ ಭಾವ ನಮ್ಮೊಳಗಿನ ಸುಪ್ತ ಪ್ರಜ್ಞೆಯನ್ನು ಕಾಡುತ್ತದೆ.ಬದುಕಲ್ಲಿ ನಮ್ಮೊಳಗೆ ಹುದುಗಿ ಹೋದ ಸತ್ಯ ಕಣ್ಮುಂದೆ ಬಂದಾಗ ಮನಸ್ಸೆಂಬ ಕಡಲಲ್ಲಿ ಪುಟಿದೇಳುವ ಅಲೆಗಳು ಬಿರುಗಾಳಿಯನ್ನೇ ಸೃಷ್ಟಿಸುತ್ತದೆ. ಹೃದಯದ ಚಿಪ್ಪೊಳಗೆ ಸಮಾಧಿಯಾದ ನವಿರಾದ ನಗುವೊಂದು ಹಾಗೇ ಕಣ್ಮುಂದೆ ಬಂದು ಮರೆಯಾಗುತ್ತದೆ.ಅದೆಂದೋ ಬಿಚ್ಚಿಟ್ಟ ಖುಷಿಯೊಂದು ನಮ್ಮೊಳಗೆ ಇಣುಕಿ ಕಂಡೂ ಕಾಣದಂತೆ ಅದೃಶ್ಯವಾಗುತ್ತದೆ.ಬಿಚ್ಚಿಟ್ಟ ಖುಷಿಗಿಂತ ಮುಚ್ಚಿಟ್ಟ ನೋವೆ ಇನ್ನಿಲ್ಲದಂತೆ ಕಾಡುತ್ತದೆ.ಇಟ್ಟ ನಂಬಿಕೆ ,ಕೊಟ್ಟ ಭರವಸೆ ಎಲ್ಲವೂ ಒಂದರ ಹಿಂದೆ ಒಂದು ನೆನಪಿನಂಗಳದಲ್ಲಿ ಹೆಜ್ಜೆ ಹಾಕುತ್ತದೆ.
*ಸತ್ಯದಲ್ಲಿ ಅಡಗಿರುವ ಮಿಥ್ಯೆ*
ಜೀವನದಲ್ಲಿ ಒಂದಲ್ಲ ಒಂದು ಬಾರಿ ಎಲ್ಲರೂ ಸುಳ್ಳು ಹೇಳಿಯೇ ಇರುತ್ತೇವೆ.ನಾವೇಕೆ ಸುಳ್ಳು ಹೇಳುತ್ತೇವೆ? ಈ ಪ್ರಶ್ನೆಗೆ ಉತ್ತರ ಎಲ್ಲಿಯೂ ಹುಡುಕಬೇಕಿಲ್ಲ. ಏಕೆಂದರೆ ಉತ್ತರ ನಮ್ಮಲ್ಲೇ ಇದೆ.ನಮ್ಮ ತಪ್ಪುಗಳನ್ನು ಮುಚ್ಚಿಹಾಕಲು,ವಾಸ್ತವದ ಬದುಕನ್ನು ಅಪ್ಪಿಕೊಳ್ಳಲು,ಸ್ವಯಂ ರಕ್ಷಣೆಗಾಗಿ, ಶಿಕ್ಷೆ,ಮುಜುಗರವನ್ನು ತಪ್ಪಿಸಲು ನಾವು ಸುಳ್ಳಿನ ಹಾದಿಯನ್ನು ತುಳಿಯುತ್ತೇವೆ.ನಮ್ಮ ಜೀವನದ ಪೂರ್ಣ ರಹಸ್ಯ ತಿಳಿದಿರುವುದು ಸ್ವತಃ ನಮಗೆ ಮಾತ್ರ ಅನ್ನುವುದೇ ನಿತ್ಯ ಸತ್ಯ.ನಮ್ಮ ಪ್ರೇಮಕತೆಗಳು,ಜೀವನದ ರಹಸ್ಯಗಳು,ತೆರೆದಿಡಲಾರದ ಗುಟ್ಟುಗಳನ್ನು ಮುಚ್ಚಿಟ್ಟು ನಮ್ಮ ಬದುಕು ತೆರೆದ ಪುಸ್ತಕ ಎನ್ನುವಂತೆ ಬದುಕುತ್ತೇವೆ.
*ಪ್ರಾಮಾಣಿಕತೆ ಎನ್ನುವ ಕಟ್ಟು ಕಥೆ*
ನಾವು ಜೀವನದಲ್ಲಿ ಪ್ರತಿಶತ 100 ರಷ್ಟು ಪ್ರಾಮಾಣಿಕ ವಾಗಿ ಇರಲು ಸಾಧ್ಯವಿಲ್ಲ. ತಾನು ಪ್ರಾಮಾಣಿಕ ಎನ್ನುವವರಾರೂ ಈ ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ.ವಿವಾಹ ಪೂರ್ವ ಪ್ರೇಮ ಕಥೆಗಳು,ಹೃದಯದಲ್ಲಿ ಅಚ್ಚಾದ ಅಳಿಸಲಾರದ ನವಿರು ಸ್ಪರ್ಶಗಳು,ಜೀವನದಲ್ಲಿ ಇಟ್ಟ ತಪ್ಪು ಹೆಜ್ಜೆಗಳು ಆಗಾಗ ಕಣ್ಣಾಮುಚ್ಚಾಲೆ ಆಡುತ್ತಿರುತ್ತದೆ. ಬದುಕಿನ ಒಳಪುಟ ತೆರೆದಾಗ ಹೊರಪುಟವೊಂದು ಸದ್ದಿಲ್ಲದೇ ಮೌನಕ್ಕೆ ಜಾರುವುದು ಅರಿವಾಗುವುದೇ ಇಲ್ಲ.ಹಳೆಯ ನೆನಪುಗಳು ಕಣ್ಣೆದುರು ಬಂದಾಗ ಇರುಳು ಕಳೆಯುವುದು ಕಷ್ಟವಾಗುತ್ತದೆ.ಚಂಚಲವಾದ ಜೀವಕ್ಕೆ ಹಗಲು ಕಳೆದಷ್ಟು ರಾತ್ರಿ ಕಳೆಯಲು ಸಾಧ್ಯವಿಲ್ಲ.ರಾತ್ರಿಯ ಪ್ರತಿ ಕ್ಷಣವೂ ಸಾವಿರ ಸಾವಿರ ಚಿಂತೆಯನ್ನು ಹುಟ್ಟಿಸಿ, ಬದುಕಿದ್ದಾಗಲೇ ಉಸಿರು ಗಟ್ಟಿಸುತ್ತದೆ. ಅಪರಾಧಿ ಭಾವ ಕಾಡಿದರೂ ನಾವು ಪ್ರಾಮಾಣಿಕರು ಎನ್ನುವ ಮುಖವಾಡ ತೊಡಲು ಮಾತ್ರ ಎಂದಿಗೂ ಮರೆಯುವುದಿಲ್ಲ.
*ತಿರುವು ಹೊಸ ಅರಿವಿನ ಆರಂಭ*
ತಪ್ಪುಗಳಿಂದಲೇ ಬದುಕಿನ ಪಾಠ ಕಲಿಯುವ ನಾವು ಇತರರ ತಪ್ಪುಗಳಿಂದಲೂ ಪಾಠ ಕಲಿಯಬಹುದು.ಎಲ್ಲಾ ತಪ್ಪುಗಳನ್ನು ನಾವೇ ಮಾಡಿ ತಿದ್ದಿಕೊಳ್ಳುವಷ್ಟು ಸುದೀರ್ಘವಾಗಿಲ್ಲ ಈ ಜೀವನ. ಯಾವುದೋ ಕಾಲದಲ್ಲಿ ನಮ್ಮಿಂದ ಗೊತ್ತಿದ್ದೋ,ಗೊತ್ತಿಲ್ಲದೆಯೋ ಆದ ತಪ್ಪಿನ ಬಗ್ಗೆ ಮರುಗಿ ಕೊರಗ ಬೇಕಾಗಿಲ್ಲ.ಅಪಕ್ವ ಮನಸ್ಥಿತಿಯಲ್ಲಿ ಘಟಿಸಿದ ಭೂತಕಾಲದ ವಿಚಾರಗಳು ನಮ್ಮ ಭವಿಷ್ಯಕ್ಕೆ ಮುಳುವಾಗಬಾರದು.
ನಮ್ಮ ಜೀವನದ ರಹಸ್ಯಗಳನ್ನು ಕಾಪಾಡಿ ಕೊಳ್ಳುವುದರಿಂದ ಬದುಕು ಸುಂದರವಾಗುವುದು ಎನ್ನುವುದಾದರೆ ಆ ಗುಟ್ಟು ಗುಟ್ಟಾಗಿಯೇ ಇರಲಿ. ಅರೆ ಕೊಳೆತ ಹಣ್ಣಲ್ಲಿ ಕಳಿತ ಭಾಗವನ್ನು ಕತ್ತರಿಸಿ ಚೆನ್ನಾಗಿರುವ ಭಾಗವನ್ನು ಬಳಸುವುದಿಲ್ಲವೇ? ಹಾಗೆಯೇ ಹಳೆಯ ಕೆಟ್ಟ ನೆನಪುಗಳನ್ನು ಕತ್ತರಿಸಿ ಹಾಕಿ ಸುಂದರವಾದದ್ದನ್ನು ಉಳಿಸಿಕೊಂಡು,ಬೆಳೆಸಿಕೊಂಡು ಬದುಕನ್ನು ಮುನ್ನಡೆಸಬೇಕು.ಬದುಕಿನ ಸತ್ಯವನ್ನು ಕೆದಕಿ ಮಾಗಿದ ಗಾಯವನ್ನು ಮತ್ತೆ ಚಿಗುರಿಸಿ ಸಾಧಿಸುವುದಾದರೂ ಏನಿದೆ? ವರ್ತಮಾನದಲ್ಲಿ ಜೀವಿಸಲು ಕಲಿಯೋಣ ಅಲ್ಲವೇ?
✍️✍️✍️✍️
ಪ್ರಜ್ವಲಾ ಶೆಣೈ
*ಕಾರ್ಕಳ*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ