ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ನರೇಗಾ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಿ *2025-26ನೇ ಸಾಲಿನ ವೈಯಕ್ತಿಕ ಕಾಮಗಾರಿಗಳಿಗೆ ಆನ್ ಲೈನ್ ನಲ್ಲಿ ಬೇಡಿಕೆ ಸಲ್ಲಿಕೆಗೆ ಅವಕಾಶ
ಪತ್ರಿಕಾ ಪ್ರಕಟಣೆಯಲ್ಲಿ ತಾಪಂ ಇಒ ಶ್ರೀ ಬಿ.ಆನಂದಕುಮಾರ್ ಮಾಹಿತಿ
ಕೊಟ್ಟೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಎಲ್ಲಾ ಗ್ರಾಪಂ ಮಟ್ಟದಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ" ಅಭಿಯಾನ ಆರಂಭಿಸಲಾಗಿದ್ದು, ಇದರ ಭಾಗವಾಗಿ 2025-26ನೇ ಸಾಲಿಗೆ ವೈಯಕ್ತಿಕ ಕಾಮಗಾರಿಗಳಿಗೆ ಆನ್ ಲೈನ್ (ಕ್ಯೂ ಆರ್ ಕೋಡ್) ಮೂಲಕವೂ ಸಹ ಸಾರ್ವಜನಿಕರು ಬೇಡಿಕೆ ಸಲ್ಲಿಸುವ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಕಲ್ಪಿಸಿದೆ ಎಂದು ಕೊಟ್ಟೂರು ತಾಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಿ.ಆನಂದಕುಮಾರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಸಾರ್ವಜನಿಕರು ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬೇಕೆಂದರೆ ಗ್ರಾಮ ಪಂಚಾಯಿತಿಗಳಿಗೆ ಬಂದು ಅರ್ಜಿಗಳನ್ನು ಭರ್ತಿಮಾಡಿ ಬೇಡಿಕೆ ಸಲ್ಲಿಸಬೇಕಿತ್ತು. ಹಾಗೆಯೇ ತೋಟಗಾರಿಕೆ, ಕೃಷಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬೇಕೆಂದರೆ ಆಯಾ ಕಚೇರಿಗಳಿಗೆ ಖುದ್ದು ಭೇಟಿ ನೀಡಿ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸಬೇಕಿತ್ತು. ಆದರೆ, 2025-26ನೇ ಸಾಲಿನಲ್ಲಿ ಬೇಡಿಕೆ ಸಲ್ಲಿಸಲು ನೂತನ ವೆಬ್ ಸೈಟ್ ಅನ್ನು ಆರಂಭಿಸಲಾಗಿದ್ದು, ಅ.2 ರಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಾರ್ವಜನಿಕ ಸ್ಥಳಗಳಾದ ಸಹಕಾರಿ ಸಂಘಗಳ ಕಚೇರಿ, ಹಾಲು ಒಕ್ಕೂಟಗಳ ಕೇಂದ್ರ, ಅಂಗನವಾಡಿ, ಸಾರ್ವಜನಿಕ ಗ್ರಂಥಾಲಯ, ಸಿಎಸ್ ಸಿ ಸೆಂಟರ್, ಸೇವಾ ಸಿಂಧು ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಮಾರುಕಟ್ಟೆ ಸ್ಥಳಗಳಲ್ಲಿ ಈಗಾಗಲೇ ನರೇಗಾ ಬೇಡಿಕೆ ಸಲ್ಲಿಕೆಗೆ ಸಂಬಂಧಿಸಿದ ಕ್ಯೂ ಆರ್ ಕೋಡ್ ಹಾಗೂ ವೆಬ್ ಸೈಟ್ ಮಾಹಿತಿಯ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಸಾರ್ವಜನಿಕರು ಪೋಸ್ಟರ್ ನಲ್ಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸಬಹುದು ಅಥವಾ https:// mgnrega.karnataka.gov.in/ ವೆಬ್ ಸೈಟ್ ಮೂಲಕವೂ ಬೇಡಿಕೆಗಳನ್ನು ಸಲ್ಲಿಸಬಹುದಾಗಿದೆ. ನವೆಂಬರ್-5 ರ ಒಳಗೆ ಬೇಡಿಕೆಗಳನ್ನು ಸಲ್ಲಿಸಬಹುದಾಗಿದೆ.
ವೈಯಕ್ತಿಕ ಕಾಮಗಾರಿಗಳಾದ ಹಸು, ಕುರಿ, ಮೇಕೆ, ಕೋಳಿ, ಹಂದಿ ಶೆಡ್, ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಸೀಬೆ, ನಿಂಬೆ, ನುಗ್ಗೆ, ಡ್ರ್ಯಾಗನ್, ಮಾವು, ಗುಲಾಬಿ, ಮಲ್ಲಿಗೆ, ಕರಿಬೇವು, ಜಾನುವಾರು ಶೆಡ್, ಎರೆಹುಳು ತೊಟ್ಟಿ, ಬಚ್ಚಲು ಗುಂಡಿ, ಕಂದಕ ಬದು, ಕೃಷಿ ಹೊಂಡ ಮುಂತಾದ ವೈಯಕ್ತಿಕ ಕಾಮಗಾರಿಗಳಿಗೆ ಆನ್ ಲೈನ್ ಮೂಲಕ ಬೇಡಿಕೆಗಳನ್ನು ಸಲ್ಲಿಸಿ, ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿ ಬೇಡಿಕೆ ಸಲ್ಲಿಕೆಗೆ ಸಂಬಂಧಿಸಿದಂತೆ ಗೊಂದಲವಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ