ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತೆ ನೀಡಲು ಜಿಲ್ಲಾಡಳಿತ ಮುಂದಾಗಲಿ: ದಸಾಪ ಅಮರೇಶ ವೆಂಕಟಾಪೂರ ಒತ್ತಾಯ

 

ರಾಯಚೂರು: ನಮ್ಮ ಜಿಲ್ಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದನ್ನು ನಿಲ್ಲಿಸಿರುವುದು ಬಹಳ ಖೇದಕರ. ಪ್ರತಿವರ್ಷ ನವೆಂಬರ್ ಒಂದರ ಕರ್ನಾಟಕ ರಾಜ್ಯೋತ್ಸವ ದಿನದಂದು ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿರುವುದು ವಾಡಿಕೆ ಆದರೆ 2017 ರಿಂದ ರಾಯಚೂರು ಜಿಲ್ಲಾ ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವುದನ್ನು ನಿಲ್ಲಿಸಿದೆ. ಜಿಲ್ಲಾಡಳಿತವು ಈ ಕೂಡಲೇ ತಾತ್ಸಾರ ಭಾವನೆಯನ್ನು ಬದಿಗಿಟ್ಟು ಸಾಹಿತ್ಯ, ಸಾಂಸ್ಕೃತಿಕ, ಸಾಧಕರ ವಲಯ ಎದ್ದು ಪ್ರತಿಭಟಿಸುವುದರೊಳಗೆ ಮೊದಲಿನಂತೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಾಧಕರಿಗೆ ನೀಡಿ ಪುರಸ್ಕರಿಸುವುದನ್ನು ಅಧಿಕೃತವಾಗಿ ಘೋಷಿಸಲಿ ಇಲ್ಲದಿದ್ದರೆ ಈ ವಿಷಯದಲ್ಲಿ ಸೂತಕ ಅಂಟಿಕೊಂಡು ಏಳು ವರ್ಷಗಳಿಂದ ಸಾಗುತ್ತಿರುವ ಜಿಲ್ಲಾಡಳಿತಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಸಜ್ಜಾಗಬೇಕಾಗುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ ಲಿಂಗಸೂಗೂರು ತಾಲೂಕು ಅಧ್ಯಕ್ಷರಾದ ಅಮರೇಶ ವೆಂಕಟಾಪೂರು ಎಚ್ಚರಿಕೆ ನೀಡಿದರು.

ಅದಾಗ್ಯೂ ಹೋದವರ್ಷ ಅಂದರೆ 2023 ರಲ್ಲಿ ಅನೇಕರ ಒತ್ತಾಯದ ನಡುವೆಯೂ ವಿರೋಧವಿದ್ದರೂ ರಾಜ್ಯೋತ್ಸವ ಪ್ರಶಸ್ತಿ ನೀಡದೇ ಸಮಾಧಾನಕರ ಬಹುಮಾನದಂತಹ ಎಡೆದೊರೆ ನಾಡು ಪುರಸ್ಕಾರ ನೀಡಲು ಯಾವ ಸಮಿತಿ ಹೇಳಿದೆ. ನಮಗೆ ಬಂದ ಮಾಹಿತಿಯಂತೆ; ಜಿಲ್ಲೆಯ ಯಾರೊಬ್ಬರು ಕೂಡ ಇದು ಬೇಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೇ ನೀಡಬೇಕೆಂದು ಒತ್ತಾಯಪಡಿಸಿದರೂ ಕೂಡ ಪರಿಗಣನೆಗೆ ತೆಗೆದುಕೊಳ್ಳದೇ ಮುಂದುವರೆಸಿದ್ದೀರಿ. ಅದನ್ನು ಪರ್ಯಾಯವಾಗಿ ಬೇರೆಯ ದಿನ ಅಂದರೆ ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ದಿನದಂದು ಇನ್ನೂ ಮುಂದೆ ಜಿಲ್ಲಾಡಳಿತವು ಎಡೆದೊರೆ ನಾಡು ಪುರಸ್ಕಾರವನ್ನು ಒಬ್ಬರು ಅಥವಾ ಇಬ್ಬರು ಹಿರಿಯ ಜಿಲ್ಲಾ ಸಾಧಕರಿಗೆ ನೀಡುವ ಪರಿಪಾಠವನ್ನು ಅಳವಡಿಸಿಕೊಳ್ಳಲಿ. ಅಧಿಕಾರಿಗಳೇ ಕುಳಿತು ಪ್ರಶಸ್ತಿ ಆಯ್ಕೆ ಮಾಡುವುದರಿಂದ ಪ್ರಶಸ್ತಿಯ ಘನತೆ, ಗೌರವದ ಮಹತ್ವ ಕಳೆದುಕೊಳ್ಳುವ ಸಂಭವವೂ ಹೆಚ್ಚು. ಹಾಗಾಗಿ ಅಂತಃಪ್ರಜ್ಞೆಯ ಆಸ್ಥೆಯಿಂದ ಜಿಲ್ಲೆಯ ನಾನಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಲಿ ಎಂದರು.


ನಮ್ಮ ಜಿಲ್ಲೆಯಲ್ಲೇನೂ ಸಾಧಕರ ಕೊರತೆ ಇಲ್ಲ. ಅಂತಹ ಪಟ್ಟಿ ಜಿಲ್ಲಾಡಳಿತದಲ್ಲಿ ಇರದಿದ್ದರೆ ಹೇಳಲಿ ದಸಾಪ ಒದಗಿಸಲು ಸಿದ್ಧ. ಕನಿಷ್ಠ ಅಲೆಮಾರಿ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಯಶಸ್ವಿ ಸಾಧಕರಿಗಾದರೂ ಇಂತಹ ಪ್ರಶಸ್ತಿಗಳು ಸಿಗಲಿ. ನಿಲ್ಲಿಸಿದರೆ ಅವರಿಗೆ ಇಂತಹ ಗೌರವ ಸಿಗುವುದಾದರೂ ಯಾವಾಗ ಎಂದು ಪ್ರಶ್ನಿಸಿದರು. ಹಾಗೆಯೇ ಪ್ರಶಸ್ತಿಯೇ ಬೇರೆ, ಪುರಸ್ಕಾರವೇ ಬೇರೆ ಎಂದು ಅಧಿಕಾರಿಗಳಿಗೆ ತಿಳಿಯದ ಸಂಗತಿಯೇನೂ ಅಲ್ಲ. ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುನಃ ಆರಂಭಿಸಬೇಕು. ಒಂದು ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮರುಜೀವ ಬರಲಿಲ್ಲವೆಂದರೆ ಜಿಲ್ಲೆಯ ಕಲೆ, ಸಂಸ್ಕೃತಿಯ ಮಹತ್ವವೇ ಗೊತ್ತಿಲ್ಲದ ನಾಮಕಾವಸ್ಥೆ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕುಳಿತಿದ್ದಾರೆಂದು ಅವರು ತೊಲಗುವವರೆಗೂ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಅಮರೇಶ ವೆಂಕಟಾಪೂರು ಆಕ್ರೋಶ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ