ಮಣ್ಣಿನ ದೀಪ, ಗಿಡ ವಿತರಿಸಿ ಹಸಿರು ದೀಪಾವಳಿ ಆಚರಿಸುವಂತೆ ಆರ್ಯವೈಶ್ಯ ಮಂಡಳಿ ಮತ್ತು ವ್ಯಾಸ ಯುವ ಜನ ಸಂಘದಿಂದ ಜನ ಜಾಗೃತಿ
ಬೆಂಗಳೂರು, ಅ, 31; ಆರ್ಯವೈಶ್ಯ ಮಂಡಳಿ ಮತ್ತು ವ್ಯಾಸ ಯುವ ಜನ ಸಂಘ ನಗರದ ಲಾಲ್ ಬಾಗ್ ಬಳಿ ಪರಿಸರಕ್ಕೆ ಮಾರಕವಾಗಿರುವ ಪಟಾಕಿ ದೀಪಾವಳಿ ಬೇಡ. ಹಸಿರು ದೀಪಾವಳಿ ಆಚರಿಸುವಂತೆ ಮಣ್ಣಿನ ದೀಪ, ಗಿಡ ವಿತರಿಸಿ ಜನ ಜಾಗೃತಿ ಮೂಡಿಸಿತು. ಒಂದು ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಲಾಯಿತು.
ಸತತ 9ನೇ ವರ್ಷ ನಿರಂತರವಾಗಿ ಪ್ರಕೃತಿ ಉಳಿಸಿ, ಸಂರಕ್ಷಿಸಲು ದೀಪಾವಳಿಯಂದು ಮಣ್ಣಿನ ದೀಪಗಳು ಹಾಗೂ ಗಿಡಗಳನ್ನು ವಿತರಿಸಿ, ದೀಪ ಬೆಳಗಿಸುವ ಪಟಾಕಿ ಸುಡದೇ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡುವಂತೆ ಸಂದೇಶ ಸಾರಲಾಯಿತು.
ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಯುವ ಸಮೂಹದ ಜೊತೆಗೂಡಿ ಜನ ಜಾಗೃತಿ ಮೂಡಿಸಲಾಗುತ್ತಿದೆ. “ವರುಷಕೊಂದು ದೀಪಾವಳಿ, ವರುಷಕೊಂದು ಗಿಡ ನೆಡಿ” ಎಂಬ ಘೋಷವಾಕ್ಯದಡಿ ಜಾಗೃತಿ ಮೂಡಿಸಲಾಗುತ್ತಿದೆ. ದೀಪದಿಂದಲೇ ಬೆಳಕು, ಮರಗಳಿಂದಲೇ ಬದುಕು ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅರಿಯಬೇಕು. ಹಣತೆ ಬೆಳಗುವುದು ನಮ್ಮ ಸಂಪ್ರದಾಯ, ಪಟಾಕಿ ಸುಡುವುದಲ್ಲ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಅಂಜನ್, ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಕಾರ್ಯದರ್ಶಿ ಸತೀಶ್, ಮಾಜಿ ಕಾರ್ಪೋರೇಟರ್ ದೀಪಾ ನಾಗೇಶ್, ದ್ವಾರಕಾನಾಥ್ ಶಂಕರ್ ಮತ್ತಿತರರು ಜನ ಜಾಗೃತಿಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ